ಕ್ರಾಂತಿವಾಣಿ ವಾರ್ತೆ ಸುರುಪುರ: ನಗರದ ಆರಾಧ್ಯ ದೈವ ವೇಣುಗೋಪಾಲ ಸ್ವಾಮಿಯ ಜಾತ್ರೆ ನಿಮಿತ್ತ ಪ್ರತಿ ವರ್ಷದಂತೆ ಹಮ್ಮಿಕೊಂಡಿದ್ದ ಜಂಗಿ ಕುಸ್ತಿಗೆ ಸುರಪುರ ಸಂಸ್ಥಾನದ ಅರಸರಾಜ ಕೃಷ್ಣಪ್ಪ ನಾಯಕ ಚಾಲನೆ ನೀಡಿದರು. ಜಂಗಿ ಕುಸ್ತಿಯಲ್ಲಿ ರಾಜ್ಯ ಸೇರಿದಂತೆ ಅನ್ಯ ರಾಜ್ಯಗಳ ಕುಸ್ತಿಪಟುಗಳು ಪಾಲ್ಗೊಂಡಿದ್ದರು. ಸುಮಾರು 70ಕ್ಕಿಂತಲೂ ಹೆಚ್ಚು ಕುಸ್ತಿಪಟುಗಳು ಕುಸ್ತಿಯಲ್ಲಿ ಪಾಲ್ಗೊಂಡು ತಮ್ಮ ಚಾಕಚಕ್ಯತೆ ಪ್ರದರ್ಶಿಸಿದರು. ಅಪರಾಹ್ನ ಒಂದು ಗಂಟೆಗೆ ಆರಂಭವಾದ ಕುಸ್ತಿಯು ಸಂಜೆ 6:00 ವರೆಗೂ ನಡೆಯಿತು. ಕುಸ್ತಿಯ ಫೈನಲ್ ಪಂದ್ಯ ಆಕಾಶ್ ದೋರನಹಳ್ಳಿ ಮತ್ತು ಮಂಜುನಾಥ್ ಶಿರವಾಳ್ ನಡುವೆ ರೋಚಕವಾಗಿ ನಡೆಯಿತು. ಅಂತಿಮವಾಗಿ ಆಕಾಶ್ ದೋರನಹಳ್ಳಿ ವಿಜಯದ ನಗೆ ಬೀರಿದರು. ಸಂಸ್ಥಾನದ ಅರಸ ರಾಜಕೃಷ್ಣಪ್ಪ ನಾಯಕ ಕುಸ್ತಿಯಲ್ಲಿ ಗೆಲುವು ಪಡೆದ ಆಕಾಶ್ ದೋರನಹಳ್ಳಿ ಅವರಿಗೆ 10 ತೊಲೆಯ ಬೆಳ್ಳಿ ಕಡಗವನ್ನು ತೊಡಿಸಿದರು ಸಂಸ್ಥಾನಿಕರಾದ ರಾಜಲಕ್ಷ್ಮಿ ನಾರಾಯಣ್ ಸೇರಿದಂತೆ ಇತರರು ಇದ್ದರು.