ಕ್ರಾಂತಿವಾಣಿ ವಾರ್ತೆ: ನಗರದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕಮಟ್ಟದ ಸಸ್ಯ ಶ್ಯಾಮಲಾ ಕಾರ್ಯಕ್ರಮವನ್ನು ಕಾಂಗ್ರೆಸ್ ಯೂತ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ ಉದ್ಘಾಟಿಸಿದರು. ಪ್ರತಿ ಶಾಲೆಯಲ್ಲಿ ಮಕ್ಕಳು ಸಸ್ಯಗಳನ್ನು ನೆಡುವುದರ ಮೂಲಕ ಉತ್ತಮ ಪರಿಸರ ನಿರ್ಮಿಸಿಕೊಳ್ಳಬೇಕು ಹಾಗೂ ಪರಿಸರ ಪ್ರೇಮ ಬೆಳಸಿಕೊಳ್ಳಬೇಕು . ಬೇಸಿಗೆಯಲ್ಲಿ ಗಿಡ ಮರಗಳು ನಮಗೆ ನೆರಳು ನೀಡುವುದರ ಜೊತೆಗೆ ಉತ್ತಮ ಆರೋಗ್ಯಕ್ಕೆ ಸಹಾಯವಾಗುತ್ತದೆ ಎಂದು ತಿಳಿಸಿದರು.
ಅರಣ್ಯ ಅಧಿಕಾರಿ ಸುನೀಲಕುಮಾರ ಮಾತನಾಡಿ, ಪ್ರತಿಯೊಂದು ಶಾಲೆಗೆ ಮೈದಾನಕ್ಕೆ ಅನುಗುಣವಾಗಿ ಅರಣ್ಯ ಇಲಾಖೆಯ ವತಿಯಿಂದ ಉಚಿತವಾಗಿ ಸಸ್ಯಗಳನ್ನು ವಿತರಿಸಲಾಗುವುದು. ಶಾಲಾ ಮಕ್ಕಳು ಗಿಡಗಳನ್ನು ಬೆಳೆಸುವುದರ ಜೊತೆಗೆ ಅವುಗಳನ್ನು ದಿನಾಲೂ ನೀರು ಬೀಡುವುದರ ಮೂಲಕ ಕಾಪಾಡಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ಶಾಬಾದಕರ ಮಾತನಾಡಿ, ಹಸಿರೇ ಉಸಿರೆನ್ನುವಂತೆ ನಾವೆಲ್ಲರೂ ಗಿಡ ಮರಗಳನ್ನು ಬೆಳೆಸುವುದರ ಮೂಲಕ ಉತ್ತಮವಾದಂತಹ ಪರಿಸರವನ್ನು ನಿರ್ಮಿಸಿಕೊಳ್ಳಬೇಕು. ಪ್ರತಿಯೊಂದು ಶಾಲೆಯು ಈ ಕಾರ್ಯಕ್ರಮವನ್ನು ಅತ್ಯಂತ ಆಸಕ್ತಿಯಿಂದ ಹಮ್ಮಿಕೊಂಡು ಶಾಲಾ ವಾತಾವರಣವನ್ನು ಸಸ್ಯ ಶಾಮಲಾವನ್ನಾಗಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಕೀಲ್ ಅಹ್ಮದ ಎಸ.ಡಿ.ಎಮ್.ಸಿ ಅಧ್ಯಕ್ಷರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಬಸವರಾಜ ಸಜ್ಜನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಾಲೂಕ ಪಂಚಾಯಿತಿ, ಪಂಡಿತ್ ನಿಂಬೂರೆ ಕ್ಷೇತ್ರ ಸಮನ್ವಯಾಧಿಕಾರಿಗಳು, ಸೋಮರೆಡ್ಡಿ ಮಂಗಿಹಾಳ ಖಜಾಂಚಿ ಜಿ.ಪ್ರಾ.ಶಾ.ಶಿ.ಸಂಘ, ಯಲ್ಲಪ್ಪ ಚಂದನಕೇರಿ ನಿರ್ದೇಶಕರು ಅಕ್ಷರ ದಾಸೋಹ, ಖಾಜಾ ಖಲೀಲ್ ಅಹ್ಮದ ಅರಕೇರಿ ಯುವ ಮುಖಂಡರು, ಆಬೀದಹುಸೇನ ಪಗಡಿ, ಮಹಾಂತೇಶ ಕಂದಗಲ್ಲ ಬಿ.ಆರ್.ಪಿ. ಮುಜಾಹಿದ ಗುಣಕಿ ಸಿ.ಆರ್.ಪಿ , ಅನ್ವರ ಜಮಾದಾರ ಭಾಗವಹಿಸಿದ್ದರು. ಶಿವುಕುಮಾರ ಸಿ.ಆರ್.ಪಿ ನಿರೂಪಿಸಿದರು. ಮುಖ್ಯಶಿಕ್ಷಕ ಜಾಕೀರ ಹುಸೇನ ವಂದಿಸಿದರು. ಶಾಲಾ ಮಕ್ಕಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.