ನಾಗರಾಜ್ ನ್ಯಾಮತಿ
ಸುರಪುರ: ಸಗರನಾಡಿನ ಸಂಸ್ಥಾನ ೧೬೩೦ರಿಂದ ಆರಾಧ್ಯ ದೈವ ಶ್ರೀ ವೇಣುಗೋಪಾಲ ಸ್ವಾಮಿ ಜಾತ್ರೆಯ ಹಾಲೋಕಳಿಯ ಮಾರನೆಯ ದಿನ ರಣಗಂಬಾರೋಹಣ ನಿಮಿತ್ತ ನಡೆಯುವುದೇ ಜಗಜಟ್ಟಿಗಳ ಕಾದಾಟ. ಇದನ್ನು ಅಪಾರ ಜನಸ್ತೋಮ ಕಣ್ತುಂಬಿಕೊಳ್ಳುವುದು ವಾಡಿಕೆ.
ಒಂದೆಡೆ ಜಟ್ಟಿಗಳು ತೊಡೆ ತಟ್ಟಿ ಡಾವುಗಳನ್ನು ಹಾಕುತ್ತಿದ್ದಂತೆ ಅಖಾಡದ ಸುತ್ತಮುತ್ತ ನೆರೆದಿದ್ದ ಜನರು ಕೇಕೆ, ಸಿಳ್ಳೆ, ಹಲಗೆಯ ನಾದದ ಮಧ್ಯೆ ಉತ್ಸಾಹದಲ್ಲಿ ಎದುರಾಳಿಗೆ ಮುಕ್ಕಿಸುತ್ತಿದ್ದಂತೆ ಜೋರಾದ ಅರಚಾಟದ ಜತೆ ಕರಾಡತನ ಮೊಳಗುತ್ತಿತ್ತು.
ಕರ್ನಾಟಕ, ಆಂಧ್ರಪ್ರದೇಶ, ಕರ್ನಾಟಕ ರಾಜ್ಯದ ೧೦೦ಕ್ಕೂ ಹೆಚ್ಚು ಜಗಜಟ್ಟಿಗಳು ಕುಸ್ತಿ ಪಂದ್ಯಗಳಲ್ಲಿ ಪಾಲ್ಗೊಂಡು ತಮ್ಮ ಡಾವುಗಳ ಮೂಲಕ ಚಾಕಚಕ್ಯತೆ ಪ್ರದರ್ಶಿಸಿದರು. ಆಧುನಿಕ ಕಾಲಘಟ್ಟದಲ್ಲಿ ಜಂಗೀಕುಸ್ತಿ ತನ್ನ ವೈಭವ ಕಳೆದುಕೊಂಡಿಲ್ಲ ಎಂಬುದಕ್ಕೆ ಪುಷ್ಠಿ ನೀಡುತ್ತಿತ್ತು.
ಅಪರಾಹ್ನ ವೇಳೆಗೆ ಆರಂಭವಾದ ಜಗಜಟ್ಟಿ ಕಾಳಗಕ್ಕೆ ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ ಚಾಲನೆ ನೀಡಿದರು. ೪ ಗಂಟೆಗೂ ಹೆಚ್ಚು ಕಾಲ ನಡೆದು ಪಂದ್ಯಗಳಲ್ಲಿ ಕುಸ್ತಿಪಟುಗಳು ಜಗಜಟ್ಟಿಗಳಂತೆ ಕಾದಾಟ ನಡೆಸಿದರು.
ಒಬ್ಬರಿಗಿಂತ ಒಬ್ಬರು ಹಾಕುತ್ತಿದ್ದ ಡಾವುಗಳು, ಪೇಚುಗಳಿಗೆ ಜನ ಮಂತ್ರ ಮುಗ್ಧರಾದರು. ಕೆಲವು ಜಗಜಟ್ಟಿಗಳ ಕಾಳಗ ವೇಗವಾಗಿ ಮುಗಿದರೆ ಇನ್ನೂ ಕೆಲವರು ಬಿರುಸಿನ ಕಾದಾಟ ನಡೆಸಿದರು. ೩೦ ವರ್ಷದಿಂದ ಆಡುತ್ತಿರುವ ಅನುಭವಿ ಪೈಲ್ವಾನರು ನೆಲಕ್ಕೆ ಬೀಳುತ್ತಿದ್ದಂತೆ ಮೈಗೊಡುವಿಕೊಂಡು ಸೋಲನ್ನು ಗೆಲುವಾಗಿ ಪರಿವರ್ತಿಸಿ ಎದುರಾಳಿಯನ್ನು ಮಣ್ಣು ಮುಕ್ಕಿಸಿ ನೋಡುಗರನ್ನು ನಿಬ್ಬೆರಗಾಗುವಂತೆ ಮಾಡಿದರು.
ಪ್ರಸಕ್ತ ಸಾಲಿನ ಕುಸ್ತಿ ಕಾಳಗದಲ್ಲಿ ಸ್ಥಳೀಯರು, ಹೊರ ರಾಜ್ಯದವರು ಹೆಚ್ಚಿನ ಪರಿಣಾಮ ಬೀರಲಿಲ್ಲ. ಕುಸ್ತಿಯ ಕೊನೆಯ ಘಟ್ಟಕ್ಕೆ ಶಹಾಪುರ ತಾಲೂಕಿನ ಶಿರವಾಳದ ಮಂಜುನಾಥ ಶಿರವಾಳ, ಅಕಾಶ ದೋರನಹಳ್ಳಿ ಫೈನಲ್ ಪ್ರವೇಶಿಸಿ ಕಾದಾಟ ರಣ ರೋಚಕವಾಗಿತ್ತು. ಕಾದಾಟ ಒಂದು ಹಂತದಲ್ಲಿ ಸಮಬಲವಾಗಿ ಸಾಗಿತ್ತು. ಆಕಾಶ ದೋರನಹಳ್ಳಿ ವಿಶೇಷ ಪಟ್ಟುಗಳನ್ನು ಹಾಕಿ ವಿಜಯದ ನಗೆ ಬೀರಿದರು. ಉತ್ಸಾಹದಿಂದ ಕಾದಾಡಿದ ಇಬ್ಬರು ಪೈಲ್ವಾನರಿಗೆ ನೆರೆದ ಜನರು ಚಪ್ಪಾಳೆ ಮೂಲಕ ಪ್ರೋತ್ಸಾಹಿಸಿದರು.
ಕುಸ್ತಿ ಕಾಳಗದಲ್ಲಿ ಗೆಲುವು ಪಡೆದ ಶಹಾಪುರ ತಾಲೂಕಿನ ಆಕಾಸ ದೋರನಹಳ್ಳಿಗೆ ಜನರು ಜೈಕಾರ ಹಾಕಿದರು. ವಿಜೇತ ಆಕಾಶನ ಕೈಗೆ ಸುರಪುರದ ಅರಸ ರಾಜಾ ಕೃಷ್ಣಪ್ಪ ನಾಯಕ ೧೦ ತೊಲೆಯ ಬೆಳ್ಳಿ ಕಡಗ ತೊಡಿಸಿ ಸನ್ಮಾಸಿದರು.
ಕುಸ್ತಿ ಪಟುಗಳು ಕಡಿಮೆಯಾಗುತ್ತಿದ್ದಾರೆ. ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಬೇಕಿದೆ. ಕುಸ್ತಿಯಲ್ಲಿ ಹಲವಾರು ಪಟ್ಟುಗಳಿವೆ. ಪ್ರಮುಖವಾಗಿ ಸವಾರಿ, ಏಕಲಾಂಗ್, ಆಟ್ಯಾಕ್, ಟ್ಯಾಕ್, ಫಲರಲಾಂಗ್, ಉಕಡ್ ಸೇರಿದಂತೆ ಹಲವಾರು ಪಟ್ಟುಗಳಿಂದ ಎದುರಾಳಿಯನ್ನು ನೆಲಕ್ಕುರುಳಿಸಬಹುದು ಎಂದು ಅನುಭವಿ ಕುಸ್ತಿಪಟುಗಳು ತಿಳಿಸಿದರು.
ಸಂಸ್ಥಾನಿಕರಾದ ರಾಜಾ ಲಕ್ಷಿö್ಮÃನಾರಾಯಣ, ರಾಜಾ ಶ್ರೀನಿವಾಸ ನಾಯಕ, ರಾಜಾ ಚಿರಂಜೀವಿ ನಾಯಕ ಸೇರಿದಂತೆ ಇತರರಿದ್ದರು.
–ಕೋಟ್—
೧೬ನೇ ಶತಮಾನದಿಂದಲೂ ವೇಣುಗೋಪಾಲ ಸ್ವಾವಿ ಹಾಲೋಕಳಿಯ ಮಾರನೆಯ ದಿನ ರಣಗಂಭ ನಿಮಿತ್ತ ಕುಸ್ತಿ ಕಾರ್ಯಕ್ರಮಗಳು ಜರಗುತ್ತವೆ. ಮರ‍್ನಾಲ್ಕು ರಾಜ್ಯದ ೭೫ಕ್ಕೂ ಹೆಚ್ಚು ಕುಸ್ತಿಪಟುಗಳು ಆಗಮಿಸುತ್ತಾರೆ. ಕುಸ್ತಿ ಪಟುಗಳಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನದ ಪ್ರಶಸ್ತಿ ನಿಡುತ್ತೇವೆ. ಸುರಪುರ ಸಂಸ್ಥಾನದ ಪರಂಪರೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸುತ್ತೇವೆ.
ರಾಜಾ ಕೃಷ್ಣಪ್ಪ ನಾಯಕ, ಸುರಪುರ ಸಂಸ್ಥಾನದ ಅರಸ.
—ಕೋಟ್—
ಕಲಬುರಿ ಜಿಲ್ಲೆಯ ಆಳಂದ ತಾಲೂಕಿನ ಬೆಣ್ಣೆ ಶಿರೂರು ಗ್ರಾಮದಲ್ಲಿ ಕುಸ್ತಿ ಉಳಿಸಲು ಟೊಂಕಕಟ್ಟಿ ನಿಂತಿದ್ದೇನೆ. ರಾಜ್ಯ ಸೇರಿದಂತೆ ಅನ್ಯ ರಾಜ್ಯಗಳಿಗೆ ಹೋಗಿ ಕುಸ್ತಿ ಆಡುತ್ತೇವೆ. ೩೫ ವರ್ಷದ ಅನುಭವವಿದೆ. ಸುಮರು ೨೫ಕ್ಕಿಂತ ಹೆಚ್ಚು ಮಕ್ಕಳಿಗೆ ಕುಸ್ತಿ ತರಬೇತಿ ನೀಡುತ್ತಿದ್ದೇನೆ. ಸರಕಾರದ ನೆರವು ಅಗತ್ಯವಿದೆ.
ಸೂರ್ಯಕಾಂತ ಕಮಲಾಪುರಕರ್, ಅನುಭವಿ ಕುಸ್ತಿಪಟು, ಆಳಂದ.
ಸುರಪುರ ಹಾಲೋಕಳಿಯ ಜಗಜಟ್ಟಿಗಳ ಜಂಗಿ ಕುಸ್ತಿ
