ಶಹಾಪುರ: ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂವಿಧಾನ ಅವಶ್ಯವಾಗಿದೆ. ನಮ್ಮ ದೇಶ ಸದೃಢ ಸಂವಿಧಾನ ಹೊಂದಿದೆ. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಉದಾತ್ತ ಚಿಂತನೆಗಳನ್ನು ಸಾರುವ ನಮ್ಮ ಸಂವಿಧಾನ ನಮ್ಮ ಹೆಮ್ಮೆ. ಹೆಚ್ಚಿನ ಯುವಕರು ಸಂವಿಧಾನದ ಸಿದ್ದಾಂತಗಳನ್ನು ಅಳವಡಿಸಿಕೊಂಡು ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಬೇಕೆಂದು ಸಣ್ಣ ಕೈಗಾರಿಕೆಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ್ ತಿಳಿಸಿದರು.
ನಗರದ ತಹಸೀಲ್ ಕಾರ್ಯಾಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ, ತಾಲೂಕ ಆಡಳಿತ ವತಿಯಿಂದ ಶುಕ್ರವಾರ ವಿಶ್ವ ಪ್ರಜಾಪ್ರಭುತ್ವ ದಿನದ ಅಂಗವಾಗಿ ಭಾರತದ ಸಂವಿಧಾನದ ಪೀಠಿಕೆ ವಾಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನವನ್ನು ರಚಿಸಿದ ಡಾ. ಬಾಬಾ ಸಾಹೇಬ್ ಅವರನ್ನು ನೆನಪಿಸಿಕೊಳ್ಳುವ ದಿನವಿದು, ಅವರ ಆಶಯಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು.ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವು ಕ್ರಿಯಾತ್ಮಕ ಪ್ರಜಾಪ್ರಭುತ್ವದ ಪ್ರಾಮುಖ್ಯತೆಯನ್ನು ಅಂಗೀಕರಿಸುವ ದಿನವಾಗಿದೆ. ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ರಚಿತವಾಗಿರುವ ಪ್ರಜಾಪ್ರಭುತ್ವ ಕೇವಲ ಸಾಂವಿಧಾನಿಕ ರಚನೆಯಲ್ಲ, ಅದೊಂದು ಚೈತನ್ಯವಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವವು ಕೇವಲ ಸಂವಿಧಾನದ ಹರಿವುಗಳ ಸಂಗ್ರಹವಾಗಿರದೇ ನಮ್ಮೆಲ್ಲರ ಜೀವನದ ಹರಿವಾಗಿದೆ
ಈ ಕಾರ್ಯಕ್ರಮದಲ್ಲಿಸಂವಿಧಾನ ಪೀಠಿಕೆ ಓದಲಾಯಿತು.
ಭಾರತದ ಪ್ರಜೆಯಾದ ನಾನು ಸಂವಿಧಾನದ ಪೀಠಿಕೆಯಲ್ಲಿರುವ ಆಶಯವನ್ನು ಓದುತ್ತೇನೆ ಮತ್ತು ಅರ್ಥ ಮಾಡಿಕೊಳ್ಳುತ್ತೇನೆ ಹಾಗು ಅದೇ ರೀತಿ ನನ್ನ ನಡವಳಿಕೆ ರೂಪಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ನನ್ನ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸದಾ ಜಾಗೃತನಾಗಿರುತ್ತೇನೆ. ನನಗೆ ದೊರೆತಿರುವ ಎಲ್ಲಾ ಸ್ವಾತಂತ್ರ್ಯವನ್ನು ಇನ್ನೊಬ್ಬರಿಗೆ ತೊಂದರೆಯಾಗದಂತೆ ನಿಯಂತ್ರಿತ ರೀತಿಯಲ್ಲಿ ಮತ್ತು ಪ್ರಜ್ಞಾಪೂರ್ವಕವಾಗಿ ಅನುಭವಿಸುತ್ತೇನೆ. ಈ ಜನ ಈ ದೇಶ ನನ್ನದು ನಿಮ್ಮದು ನಮ್ಮೆಲ್ಲರದು ಎಂಬ ಅರಿವನ್ನು ಸದಾ ಜಾಗೃತವಾಗಿಟ್ಟಿರುತ್ತೇನೆ. ಭಾರತದ ಪ್ರಜೆಗಳೆಲ್ಲರು ನನ್ನ ಸಹೋದರ ಸಹೋದರಿಯರು ಎಂದೇ ಭಾವಿಸುತ್ತೇನೆ. ಯಾವುದೇ ಜಾತಿ ಧರ್ಮ ಭಾಷೆ ಪ್ರದೇಶ ಸಿದ್ದಾಂತಕ್ಕಿಂತ ನನ್ನ ದೇಶದ ಸಂವಿಧಾನವೇ ನನಗೆ ಮುಖ್ಯ. ಅದಕ್ಕೆ ಸಂಪೂರ್ಣ ನಿಷ್ಠನಾಗಿರುತ್ತೇನೆ. ಆ ಮೂಲಕ ಈ ಮಣ್ಣಿನ ಋಣ ತೀರಿಸಿ ಜೀವನದ ಸಾರ್ಥಕತೆ ಹೊಂದುತ್ತೇನೆ ಎಂದು ಸಂವಿಧಾನ ಪೀಠಿಕೆ ಓದಲಾಯಿತು.
ಈ ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಉಮಕಾಂತ್ ಹಳ್ಳೆ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರೆದಾರ್, ತಾಲೂಕ ಸಮಾಜ ಕಲ್ಯಾಣ ಅಧಿಕಾರಿ ರಾವುತಪ್ಪ ಹವಲ್ದಾರ್, ಪಿಐ ಎಸ್ಎಂ ಪಾಟೀಲ್, ಸೇರಿದಂತೆ ವಿವಿಧ ಮುಖಂಡರು ಹಾಗೂ ಸರ್ಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.