ಶಹಾಪುರ: ದೇಶದಲ್ಲೆಡೆ ಸ್ವಾತಂತ್ರ್ಯ ಸಿಕ್ಕಿದ್ದರೂ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ತಡವಾಗಿ ಸ್ವಾತಂತ್ರ್ಯ ಸಿಕ್ಕಿದೆ. ಹೈಕ ವಿಮೋಚನಾ ದಿನಾಚರಣೆ ಅಸಂಖ್ಯ ಹೋರಾಟಗಾರರ ತ್ಯಾಗ, ಬಲಿದಾನಗಳ ಫಲವಾಗಿ ಹಾಗೂ ಸರ್ದಾರ್ ವಲ್ಲಭ ಭಾಯಿ ಪಟೇಲರ ಸಂಕಲ್ಪಶಕ್ತಿಯಿಂದಾಗಿ ಹೈದರಾಬಾದ್ ಕರ್ನಾಟಕ ನಿಝಾಮರ ಆಳ್ವಿಕೆಯಿಂದ ಮುಕ್ತವಾಗಿ ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾಯಿತು.ಇದಕ್ಕಾಗಿ ಹೋರಾಡಿದ ಎಲ್ಲ ಮಹನೀಯರನ್ನು ನಾವೆಲ್ಲರೂ ಸ್ಮರಿಸಿ ಗೌರವಿಸೋಣ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 371 ಜೆ ಸಹಕಾರಿಯಾಗಿದೆ ಎಂದು ತಹಸಿಲ್ದಾರ್ ಉಮಾಕಾಂತ್ ಹಳ್ಳೆ ಹೇಳಿದರು.
ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ತಾಲೂಕ ಆಡಳಿತ ಹಾಗೂ ನಗರಸಭೆ ವತಿಯಿಂದ ಆಯೋಜಿಸಲಾದ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮೊದಲು ಈ ಭಾಗದ ವಿದ್ಯಾರ್ಥಿಗಳ ಸಂಖ್ಯೆ ಅತ್ಯಂತ ಕಡಿಮೆ ಇದ್ದದ್ದು ಈಗ 371ಜೇ ಜಾರಿಯಾದ ವರ್ಷದಿಂದ ಬಹಳಷ್ಟು ಹೆಚ್ಚಳವಾಗಿದೆ. ಅದೇ ರೀತಿ ಎಂಬಿಬಿಎಸ್ ಕೋರ್ಸ್ ಪ್ರವೇಶಕ್ಕೆ ಈ ಭಾಗದ ವಿದ್ಯಾರ್ಥಿಗಳು ಬಹು ಸಂಖ್ಯೆಯಲ್ಲಿ ಪ್ರವೇಶ ಪಡೆದಿರುವುದು ಹೆಮ್ಮೆಯ ವಿಷಯ. ಸರ್ಕಾರ ಈ ಪ್ರದೇಶದ ಅಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತಿದೆ ಎಂದರು. ಇದರಿಂದಾಗಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ಈ ಭಾಗದವರಿಗೆ ಮೀಸಲಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದು ಕೊಳ್ಳಬೇಕೆಂದು ಅವರು ಹೇಳಿದರು.
ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಟಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರೆದಾರ ಅವರು, ಈ ಭಾಗದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ತಮ್ಮ ಬದುಕು ಜೀವನ ಬದಿಗೊತ್ತಿ ಸ್ವಾತಂತ್ರ್ಯ ಪಡೆಯಬೇಕೆಂಬ ಕಿಚ್ಚಿನ ಹೋರಾಟದ ಮೂಲಕ ತ್ಯಾಗ ಬಲಿದಾನವಾದ ಫಲವಾಗಿ, ಎಲ್ಲರ ಸಮಗ್ರತೆಯ ದಷ್ಟಿಯಿಂದ ಉಕ್ಕಿನ ಮನುಷ್ಯ ಸರ್ದಾರ ವಲ್ಲಭಭಾಯಿ ಪಟೇಲ್ ಹೈದರಾಬಾದ್ ಸಂಸ್ಥಾನದ ನಿಜಾಮನನ್ನು ಮಣಿಸಿ ಈ ಭಾಗಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟಿದ್ದಾರೆ. ನಾವೆಲ್ಲರೂ ಅದನ್ನು ಸದುಪಯೋಗಪಡಿಸಿ ಕೊಂಡು ನಮ್ಮ ಜೀವನ ಸಾರ್ಥಕ ಪಡಿಸಿ ಕೊಳ್ಳಬೇಕು. ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ 371(ಜೆ) ತಿದ್ದುಪಡಿಯನ್ವಯ ರಚನೆಗೊಂಡ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರಸಕ್ತ 2023-24ನೇ ಸಾಲಿನ ಆಯವ್ಯಯದಲ್ಲಿ ತಿಳಿಸಿದಂತೆ 5,000 ಕೋಟಿ ರೂ. ನೀಡಲಾಗುಟ್ಟಿದೆ. ಇದರಿಂದ ಈ ಪ್ರದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ, ಮಕ್ಕಳು ಈ ಭಾಗದ ಸ್ವಾತಂತ್ರ್ಯ ಸೇನಾನಿಗಳ ವೇಷಭೂಷಣ ಧರಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು.
ಈ ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ರಮೇಶ್ ಬಡಿಗೇರ್, ಗ್ರೇಡ್ 2 ತಹಶೀಲ್ದಾರ್ ಸೇತು ಮಾಧವ ಕುಲಕರ್ಣಿ, ಪಿಐ ಎಸ್ಎಂ ಪಾಟೀಲ್, ಸಹಾಯಕ ಖಜಾನೆ ಅಧಿಕಾರಿ ಡಾ. ಎಂ ಎಸ್ ಶಿರವಾಳ,ತಾಲೂಕ ಸಮಾಜ ಕಲ್ಯಾಣ ಅಧಿಕಾರಿ ರಾವುತಪ್ಪ ಹವಾಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿಭಾಜಲೆಯನ್, ಸಿ ಡಿ ಪಿ ಓ ಮೀನಾಕ್ಷಿ ಪಾಟೀಲ್, ಬಿಸಿ ಊಟ ಅಧಿಕಾರಿ ಬಿ ಹೆಚ್ ಸೂರ್ಯವಂಶಿ, ತಾಲೂಕ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಯಪ್ಪ ಗೌಡ ಹುಡೇದ, ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಶರಣಪ್ಪ ಪಾಟೀಲ್, ಪಿಎಸ್ಐ ಶಾಮ್ ಸುಂದರ್ ನಾಯಕ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಯೋಗ ಗುರು ಲಕ್ಷ್ಮಣ ಲಾಳಸೇರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.