ಬಿಸಿಲು ಮಳೆ ಆಟಕ್ಕೆ ಬೆಂಡಾದ ಬೆಳೆಗಳು           

 

 

 

ಕ್ರಾಂತಿವಾಣಿ ವಾರ್ತೆ ಸುರಪುರ: ತಾಲೂಕಿನಲ್ಲಿ ವರುಣನ ಅವ್ಯಕೃಪೆಯನ್ನಾಗಿ ಬೇಸಿಗೆ ಬಿಸಿಲು ಆರಂಭವಾಗಿದ್ದು, ಬೆಳೆಗಳು ಬಾಡಿ ಹಲವಾರು ರೋಗಗಳಿಗೆ ತುತ್ತಾಗುತ್ತಿರಿವುದರಿಂದ ರೈತರು ನಷ್ಟದ ಭೀತಿ ಎದುರಿಸುವಂತಾಗಿದೆ. ಸುಮಾರು 10 ಸಾವಿರ ಹೆಕ್ಟೇರಿಗಿಂತಲೂ ಅಧಿಕ ಪ್ರಮಾಣದಲ್ಲಿ ಹತ್ತಿ ಬಿತ್ತನೆಯನ್ನು ಮಾಡಲಾಗಿದೆ. ಮಳೆ ಬಾರದೇ ಇರುವುದರಿಂದ ಬಾವಿಗಳನ್ನು ನೆಚ್ಚಿಕೊಂಡು ಹತ್ತಿ ಬೆಳೆದಂಥ ರೈತರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. 3 ಇಂಚು ನೀರು ಬರುವ ಕೊಳವೆಬಾವಿಯಲ್ಲಿ ಒಂದು ಇಂಚು ನೀರು ಬರುತ್ತಿದೆ. ಇದರಿಂದ ರೈತರು ತಮ್ಮ ಬೆಳೆಗಳಿಗೆ ನೀರುಣಿಸಲು ಪರದಾಡುವ ಸ್ಥಿತಿ ಮಳೆಗಾಲದಲ್ಲಿ ನಿರ್ಮಾಣವಾಗಿದೆ. ಮಳೆಯನ್ನೇ ನಂಬಿ ರುವ ರೈತರ ಸ್ಥಿತಿ ಶೋಚನೀಯವಾಗಿದೆ.

ಬೆಳೆಗಳು ಹೆಚ್ಚು ಬೆಳೆಯದೆ ಈಗಾಗಲೇ ಮಳೆ ಇಲ್ಲದೆ ಕಾಯಿಗಳಿಗೆ ತಾಮ್ರ ರೋಗ ಬೀಳುತ್ತಿದೆ. ನೀರಿಲ್ಲದೆ ಬೆಳೆಗಳು ತಾಮ್ರ ರೋಗ ಮತ್ತು ಕೆಂಪು ರೋಗಕ್ಕೆ ತುತ್ತಾಗಿದ್ದು, ರೈತರನ್ನು ಆತಂಕಕ್ಕೀಡು ಮಾಡಿದೆ. ಗಾಯದ ಮೇಲೆ ಬರೆ: ರಾಜ್ಯ ಕಾಂಗ್ರೆಸ್ ಸರ್ಕಾರವು ಸುರಪುರ ತಾಲೂಕಿನ ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ. ತೀವ್ರ ಬರಗಾಲ ಘೋಷಿಸುವ ತಾಲೂಕಾಗಿಸಲು ಎಲ್ಲಾ ಸಾಧ್ಯತೆ ಇದ್ದರೂ ಸಾಧಾರಣ ಬರಗಾಲ ತಾಲೂಕು ಘೋಷಿಸಿ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವ ಕೆಲಸ ಮಾಡಿದೆ. ಕ್ರಾಂತಿವಾಣಿ ಪತ್ರಿಕೆಯೊಂದಿಗೆ ಮಾತನಾಡಿದ ರೈತ ಸಂಘದ ತಾಲೂಕ ಅಧ್ಯಕ್ಷ ಹನುಮಂತರಾಯ ಮಡಿವಾಳ, ಕಾಂಗ್ರೆಸ್ ಸರ್ಕಾರವು ರೈತರ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸಿಲ್ಲ. ಸಮೀಕ್ಷೆ ಮಾಡುತ್ತಿದ್ದೇವೆ ಅಂತ ಹೇಳ್ತಾರೆ. ಆದರೆ ನಮ್ಮ ಭಾಗದಲ್ಲಿ ಉಪಗ್ರಹ ಆಧಾರಿತ ಯಾವುದೇ ಸಮೀಕ್ಷೆ ನಡೆದಿರುವುದಿಲ್ಲ. ಕೇವಲ ಅಂತ ಕಂತೆಯ ಮೇಲೆ ಮಾಡಿದ್ದಾರೆ. ಪಕ್ಕದ ತಾಲೂಕು ಶಹಾಪುರದಲ್ಲಿ ತೀವ್ರ ಬರಗಾಲ ಇರಬೇಕಾದರೆ ಸುರಪುರದಲ್ಲಿ ಇರುವುದಿಲ್ಲವೇ ಎಂಬುದನ್ನು ಸುರುಪೂರಿನ ರೈತರು ಯೋಚನೆ ಮಾಡಬೇಕಾಗಿದೆ. ಸರ್ಕಾರಕ್ಕೆ ಕೂಡಲೇ ಮನವಿ ಸಲ್ಲಿಸುತ್ತೇವೆ. ತೀವ್ರ ಬರಗಾಲವಾಗಿ ಘೋಷಿಸುತ್ತಿದ್ದರೆ ರಸ್ತೆ ತಡೆದು ಬೃಹತ್ ಪ್ರತಿಭಟನೆ ಶೀಘ್ರದಲ್ಲಿ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ