ಕ್ಷಯ ರೋಗ ನಿರ್ಮೂಲನೆಗೆ ಸಹಕರಿಸಿ,ರಾಯಚೂರುಕರ್

ಶಹಾಪುರ: ಕ್ಷಯ ರೋಗ ಸಂಪೂರ್ಣ ಕ್ಷಯ ಗುಣಪಡಿಸಬಹುದಾದ ಕಾಯಿಲೆ. ಆರಂಭಿಕ ಹಂತದಲ್ಲಿ ಸೂಕ್ತ ಚಿಕಿತ್ಸೆ ಪಡೆದರೆ ಯಾವುದೇ ಸಮಸ್ಯೆ ಆಗುವುದಿಲ್ಲ.ಕ್ಷಯ ರೋಗ ವಂಶವಾಹಿನಿ ರೋಗ ಅಲ್ಲ. ಇದು ಕಲುಷಿತ ಗಾಳಿಯಿಂದ ಉಂಟಾಗುತ್ತದೆ. ಕಾಯಿಲೆ ಬಂದ ವ್ಯಕ್ತಿ ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ  ಇತರರಿಗೂ ಹರಡುವ ಸಾಧ್ಯತೆ ಇರುತ್ತದೆ.ಈ ರೋಗದ ಬಗ್ಗೆ ಭಯ ಬೇಡ ತಿಳುವಳಿಕೆ ಇರಲಿ ಎಂದು ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ. ಸಂಜೀವ್ ಕುಮಾರ್ ರಾಯಚೂರುಕರ್ ಹೇಳಿದರು.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನ ಘಟಕ ಶಹಾಪುರ ವತಿಯಿಂದ ಆಯೋಜಿಸಲಾದ ರೋಗಿಗಳಿಗೆ ಪೂರೈಕೆದಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ನಿರಂತರ ನಡೆಯಬೇಕು. ಜೊತೆಗೆ ಜನರ ಅರೋಗ್ಯ ಮಟ್ಟವೂ ಸುಧಾರಣೆಯಾಗಬೇಕು. ಈ ನಿಟ್ಟಿನಲ್ಲಿ ಅರೋಗ್ಯ ಇಲಾಖೆಯು ಕ್ಷಯ ರೋಗವನ್ನು ೨೦೨೫ ಇಸವಿಯೊಳಗೆ ನಮ್ಮ ದೇಶದಿಂದಲೇ ನಿರ್ಮೂಲನೆ ಮಾಡುವ ಉದ್ದೇಶದಿಂದ ಕ್ಷಯ ಮುಕ್ತ ಗ್ರಾಮ ಮಾಡಬೇಕೆಂದು ಪಣತೊಟ್ಟು ಕಾರ್ಯಕ್ರಮ ಹಮ್ಮಿಕೊಂಡಿದೆ. ನಾವೆಲ್ಲರೂ ಇಲಾಖೆಯೊಡನೆ ಸ್ಪಂದಿಸಿ ಕ್ಷಯ ರೋಗ ಮುಕ್ತ ಸಮಾಜ ನಿರ್ಮಾಣದಲ್ಲಿ ಭಾಗಿಗಳಾಗೋಣ ಎಂದು ಹೇಳಿದರು.

ಈ ಕಾರ್ಯಕ್ರಮವನ್ನು ಉದ್ದೇಶಿಸಿದೆ ಹಿರಿಯ ವೈದ್ಯಾಧಿಕಾರಿ ಡಾ. ಗಂಗಾಧರ ಚಟ್ರಿಕಿ ಅವರು ಮಾತನಾಡಿ, ಕ್ಷಯ ರೋಗ ಕ್ಕೆ ಟಿ. ಬಿ. ಖಾಯಿಲೆ ಎಂದು ಕರೆಯುತ್ತಾರೆ. ಇದೊಂದು ಸೋಂಕು ರೋಗ. ಕ್ಷಯರೋಗಾಣುವು ಮುಖ್ಯವಾಗಿ ಶ್ವಾಸಕೋಶದಲ್ಲಿ ಕ್ಷಯರೋಗವನ್ನು ಉಂಟು ಮಾಡುತ್ತದೆ. ರೋಗಣುಗಳು ರೋಗಿಯ ಕಫದಲ್ಲಿದ್ದು ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ಈ ರೋಗಾಣುಗಳು ಗಾಳಿಯ ಮೂಲಕ ಅರೋಗ್ಯವಂತ ವ್ಯಕ್ತಿಯ ಶ್ವಾಸಕೋಶವನ್ನು ಸೇರಿ ಆತನಿಗೆ ಸೋಂಕು ಉಂಟು ಮಾಡುತ್ತದೆ. ಕಫ ಸಹಿತ ಸತತ ಕೆಮ್ಮು, ಸಂಜೆವೇಳೆ ಜ್ವರ, ತೂಕ ಕಡಿಮೆ, ಎದೆನೋವು, ಕಫದಲ್ಲಿ ರಕ್ತ ಬೀಳುವುದು ಖಾಯಿಲೆಯ ಲಕ್ಷಣಗಳಾಗಿರುತ್ತದೆ. ಇದರ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು. ಮನೆಯಲ್ಲಿ ಕ್ಷಯರೋಗ ಪೀಡಿತ ವ್ಯಕ್ತಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ಷಯ ರೋಗಿಗಳಿಗೆ ಖಾಸಗಿ ಔಷಧಿ ವ್ಯಾಪಾರಸ್ಥರ ಸಂಘದ ತಾಲೂಕ ಅಧ್ಯಕ್ಷ ಅಶೋಕ್ ಕುಮಾರ್ ಅವರು ಪ್ರೋಟೀನ್ ಪುಡಿ ಪಟ್ಟಣಗಳನ್ನು ಉಚಿತವಾಗಿ ನೀಡಿದರು. ಇದೇ ಸಂದರ್ಭದಲ್ಲಿ ಹಿರಿಯ ವೈದ್ಯಾಧಿಕಾರಿ ಡಾ. ಗಂಗಾಧರ ಚಟ್ರಿಕಿ ಅವರು 10 ಸಾವಿರ ರೂ. ಗಳನ್ನು ರೋಗಿಗಳ ಪ್ರೋಟೀನ್ ನೆರವಿಗೆ ನೀಡಿದರು. ಈ ಸಭೆಯಲ್ಲಿ 34 ಕ್ಷಯ ರೋಗಿಗಳು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯ ರೋಗ ಕೇಂದ್ರದ ಪಿಪಿಎಂ ಗೌಸ್, ಐಸಿಟಿಸಿ ಸಮಾಲೋಚಕ ಗುಂಡುರಾವ್, ತಾಲೂಕ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಎಸ್ ಟಿ ಎಸ್ ವಿನೋದ್ ಕುಮಾರ್, ಪ್ರಯೋಗಶಾಲಾ ಮೇಲ್ವಿಚಾರಕ ತಹಮಿನಾ, ಅಂಬಿಕಾ ರಾಧ ಸೇರಿದಂತೆ ಆಶಾ ಕಾರ್ಯಕರ್ತೆಯರು, ಕ್ಷಯ ರೋಗಿಗಳು ಭಾಗವಹಿಸಿದ್ದರು

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ