ಸುರಪುರ: ನಗರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿಗೆ ೨೦೨೪-೨೫ರಲ್ಲಿ ಶಾಸಕರ ಅನುದಾನದಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗುವುದು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಪಿಎಲ್‌ಡಿ ಬ್ಯಾಂಕ್‌ನ ೬೨ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕ್‌ಗೆ ನಿವೇಶನ ಗುರುತಿಸಲಾಗಿದೆ. ಕಟ್ಟಡ ನಿರ್ಮಾಣ ಬಾಕಿಯಿದೆ. ನಿರ್ಮಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು. ಪಿಎಲ್‌ಡಿ ಬ್ಯಾಂಕ್‌ನಲ್ಲಿ ಸಾಲಕ್ಕೆ ಕಡಿಮೆ ಬಡ್ಡಿ ಮತ್ತು ರೈತರಿಗೆ ಸಾಕಷ್ಟು ಸೌಲಭ್ಯಗಳಿವೆ. ಕಾರಣ ಬ್ಯಾಂಕ್‌ನ ಬಗ್ಗೆ ಹೆಚ್ಚು ಪ್ರಚಾರ ಮತ್ತು ತಿಳುವಳಿಕೆ ಮೂಡಿಸುವ ಕೆಲಸ ಮಾಡಬೇಕು. ಷೇರುದಾರರ ಸಂಖ್ಯೆ ದ್ವಿಗುಣಗೊಳಿಸಿ ಅಧಿಕ ಸಾಲ ನೀಡಬೇಕು. ಸಾಲ ಪಡೆದವರು ಸಕಾಲದಲ್ಲಿ ಸಾಲ ಮರು ಪಾವತಿಸಿ ಬ್ಯಾಂಕ್ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಪಿಎಲ್‌ಡಿ ಬ್ಯಾಂಕ್‌ನ್ನು ೬೨ ವರ್ಷಗಳ ಹಿಂದೆ ನಮ್ಮ ತಂದೆ, ಮಾಜಿ ಶಾಸಕರಾಗಿದ್ದ ರಾಜಾ ಕುಮಾರ ನಾಯಕ ಅವರು ಸ್ಥಾಪನೆ ಮಾಡಿದ್ದರು ಹೀಗಾಗಿ ಈ ಬ್ಯಾಂಕ್ ಬಗ್ಗೆ ನನಗೆ ಎಲ್ಲಿಲ್ಲದೆ ಹೆಮ್ಮೆ ಇದೆ. ನಮ್ಮ ತಂದೆಯವರ ಜನಸೇವೆ ಮತ್ತು ಇಚ್ಚಾಶಕ್ತಿ ಅಪಾರವಾಗಿತ್ತು. ರೈತರ ಅನುಕೂಲ ದೃಷ್ಟಿಯಿಂದ ಹುಣಸಗಿ ತಾಲೂಕಿನಲ್ಲಿಯು ಪಿಎಲ್‌ಡಿ ಬ್ಯಾಂಕ್ ಸ್ಥಾಪನೆಗೆ ನಿರ್ಧರಿಸಿರುವುದು ಸ್ವಾಗತಾರ್ಹ. ಇದರಿಂದ ಆ ಭಾಗದ ರೈತರಿಗೆ ಸಹಕಾರಿಯಾಗುತ್ತದೆ ಎಂದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಮನಗೌಡ ಸುಬೇದಾರ್ ಮಾತನಾಡಿ, ಮೇ.೨, ೧೯೬೧ ರಲ್ಲಿ ಅಸ್ತಿತ್ವಕ್ಕೆ ಬಂದಿರುವ ನಮ್ಮ ಬ್ಯಾಂಕ್ ಕಳೆದ ೬೨ ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ೯೯೧೪ ಸದಸ್ಯರನ್ನು ಒಳಗೊಂಡಿರುತ್ತದೆ. ರೂ.೯೮.೯೧ ಲಕ್ಷಗಳ ಷೇರು ಬಂಡವಾಳ ಇರುತ್ತದೆ. ಈ ಪೈಕಿ ೪೧೫೮ ಸಾಲಗಾರ ಸದಸ್ಯರಾಗಿರುತ್ತಾರೆ. ದೀರ್ಘಾವಧಿ ಯೋಜನೆಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ಸಾಲದ ಹಂಚಿಕೆ ಮಾಡಿದ್ದು ಸದ್ಯಕ್ಕೆ ೬೬೧.೮೦ ಲಕ್ಷಗಳ ಹೊರ ಬಾಕಿ ಇರುತ್ತದೆ. ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ಶೇ.೭೨.೬೨ ರಷ್ಟು ಸಾಲ ವಸೂಲಾತಿಯನ್ನು ಸಾಧಿಸಿದೆ ಎಂದರು.
ಬ್ಯಾAಕ್ ನಿರ್ದೇಶಕ ವಾಮನರಾವ್ ದೇಶಪಾಂಡೆ ಮಾತನಾಡಿ, ಶಾಸಕ ಆರ್‌ವಿಎನ್ ಅವರ ಚಿಕ್ಕವರಿದ್ದಾಗ ಅವರ ತಂದೆ ಮಾಜಿ ಶಾಸಕ ದಿ.ರಾಜಾ ಕುಮಾರ ನಾಯಕ ಅವರು ಸ್ಥಾಪನೆ ಮಾಡಿದ ಬ್ಯಾಂಕ್ ಇದಾಗಿದೆ. ಶಾಸಕರು ಪಿಎಲ್‌ಡಿ ಬ್ಯಾಂಕ್‌ಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಿಕೊಡಬೇಕು ಎಂದು ಕೋರಿದರು.
ಪಿಎಲ್‌ಡಿ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಅಜೇಯ ಮಾಲಿ ಪಾಟೀಲ್ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್, ಬ್ಯಾಂಕ್‌ನ ಉಪಾಧ್ಯಕ್ಷ ನಿಂಗಣ್ಣ ಕೆಂಗೂರಿ, ನಿರ್ದೇಶಕರಾದ ಧರೆಪ್ಪ ಮೇಟಿ, ಬಸನಗೌಡ ಹೆಚ್.ಪಾಟೀಲ್ ದೇವಪುರ, ರಾಮಚಂದ್ರ ಪೂಜಾರಿ, ರಾಜಾ ಸುಭಾಶ್ಚಂದ್ರ ನಾಯಕ, ಬಸಣ್ಣ ಕಮತಗಿ, ಶೆಟ್ಟಿ ನಾಯಕ ವೇದಿಕೆಯಲ್ಲಿದ್ದರು. ಸಭೆಯಲ್ಲಿ ಅನೇಕ ಸಂಖ್ಯೆಯಲ್ಲಿ ರೈತರು ಇದ್ದರು. ಪಿಎಲ್‌ಡಿ ಬ್ಯಾಂಕ್ ಮ್ಯಾನೇಜರ್ ರಾಜಶೇಖರ ದಾಯಗೋಡೆ ಸ್ವಾಗತಿಸಿದರು. ಕ್ಷೇತ್ರಾಧಿಕಾರಿ ನಿಂಗಪ್ಪ ಎಚ್ ನಿರೂಪಿಸಿದರು. ಎಂ.ಶಿವರಾಜಪ್ಪ ವಂದಿಸಿದರು.