ಶಹಾಪುರ: ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ ಹಿಂದುಳಿದ, ಅಲ್ಪಸಂಖ್ಯಾತ, ದೀನ ದಲಿತರ ಬದುಕಿಗೆ ಆಸರೆಯಾಗಿದೆ. ಬಿಜೆಪಿಯವರು ರಾಜ್ಯಾದ್ಯಂತ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಯಾರು ಏನೇ ಹೇಳಿದರೂ ನಾನು ನುಡಿದಂತೆ ನಡೆದಿದ್ದೇವೆ ಎಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ್ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಜಿಲ್ಲಾ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಯಿಂದ ಆಯೋಜಿಸಲಾಗಿದ್ದ ನಾಗರಿಕ ಸನ್ಮಾನ ಸಮಾರಂಭ ಹಾಗೂ ಸಣ್ಣ ಕೈಗಾರಿಕೆಗಳ ಸ್ಥಾಪನೆ ಮತ್ತು ನಿರ್ವಹಣೆ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚುನಾವಣೆ ಪೂರ್ವ ನೀಡಿದ ಭರವಸೆಗಳ ಪ್ರಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಮೂಲಕ ಕರ್ನಾಟಕ ರಾಜ್ಯ ಮಾದರಿ ರಾಜ್ಯವಾಗಿ ಹೊರಹೊಮ್ಮಿದೆ. ನಾವು ಜಾರಿಗೊಳಿಸಿದ ಬಡವರಿಗೆ ಉಪಯುಕ್ತವಾದ ಗ್ಯಾರಂಟಿ ಯೋಜನೆಗಳು ಪ್ರಸ್ತುತ ಬೇರೆ ರಾಜ್ಯಗಳು ಕರ್ನಾಟಕ ಮಾದರಿಯನ್ನಾಗಿಟ್ಟುಕೊಂಡು ಅನುಸರಿಸಲು ಮುಂದಾಗಿವೆ.
ಪಿ.ಜೆ.ಗೋವಿಂದರಾಜು ಅವರು ಸಣ್ಣ ಕೈಗಾರಿಕೆ ಸ್ಥಾಪನೆ ಹಾಗೂ ನಿರ್ವಹಣೆ ಕುರಿತು ವಿಷಯ ಮಂಡನೆ ಮಾಡಿದರು. ಮುಂಚಿತವಾಗಿ ಕದಸಂಸ (ಭೀಮವಾದ) ಜಿಲ್ಲಾ ಸಂಚಾಲಕ ಶರಣು ದೋರನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾ ವಕ್ತಾರ ಮಲ್ಲಪ್ಪ ಉಳಂಡಗೇರಿ ಅಧ್ಯಕ್ಷತೆವಹಿಸಿದ್ದರು. ಜಿಪಂ ಮಾಜಿ ಸದಸ್ಯ ವಿನೋದಗೌಡ ಮಾಲಿಪಾಟೀಲ್, ನಗರಸಭೆ ಸದಸ್ಯ ಶಿವಕುಮಾರ ತಳವಾರ, ಮಹಾದೇವ ದಿಗ್ಗಿ, ಜಿಲ್ಲಾ ಸಮನ್ವಯ ಅಧಿಕಾರಿ ಸೂರಯ್ಯಬೇಗಂ, ಡಿವೈಎಸ್ಪಿ ಜಾವೀದ್ ಇನಾಂದಾರ, ಕಸಾಪ ಅಧ್ಯಕ್ಷ ರವೀಂದ್ರನಾಥ ಹೊಸಮನಿ, ಡಾ.ನೀಲಕಂಠ ಬಡಿಗೇರ, ನಾಗಣ್ಣ ಬಡಿಗೇರ, ಶಿವಪುತ್ರ ಜವಳಿ, ಎಸ್ಡಿಪಿಐ ಮುಖಂಡ ಸಯ್ಯದ್ ಖಾಲಿದ್ ಹುಸೇನ್, ರಾಮಣ್ಣ ಸಾದ್ಯಾಪುರ ಉಪಸ್ಥಿತರಿದ್ದರು. ವಿಶ್ವ ನಾಟೇಕಾರ ನಿರೂಪಿಸಿದರು. ಶಿವು ಪೋತೆ ಸ್ವಾಗತಿಸಿದರು.
ಕಳೆದ ಮೂರ ದಶಕದಿಂದ ಈ ಕ್ಷೇತ್ರದಲ್ಲಿ ನನ್ನ ಗೆಲುವಿಗೆ ಸಹಕರಿಸುತ್ತಾ ಬಂದ ಕ್ಷೇತ್ರದ ಜನರಿಗೆ ಅನಂತ ಕೃತಜ್ಞತೆ. ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರ ಶ್ರಮವಹಿಸುವ ಮೂಲಕ ಜನರ ಭರವಸೆಯಂತೆ ಅವರ ಆಶೋತ್ತರಗಳಿಗೆ ಸ್ಪಂಧಿಸುವ ಕೆಲಸ ಮಾಡುವೆ. ಪಕ್ಷ ನೀಡಿದ ಜವಬ್ದಾರಿ ಸಮರ್ಪಕವಾಗಿ ನಿಭಾಯಿಸುವೆ. ನಾಡಿನ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡುವೆ.
-ಶರಣಬಸಪ್ಪಗೌಡ ದರ್ಶನಾಪುರ. ಸಚಿವರು.