ಶಹಾಪುರ. ಹಣ ಮತ್ತು ಸಂಪತ್ತಿನಿಂದ ಎಂದಿಗೂ ವಿದ್ಯೆ ಸಂಪಾದಿಸಲಾಗುವುದಿಲ್ಲ. ಶಿಕ್ಷಣದಿಂದ ಮಾತ್ರ ಬದುಕು ಪರಿಪೂರ್ಣ ಗೊಳ್ಳುತ್ತದೆ ಎಂದು ಎಂದು ಸಿಂಧಗಿಯ ಶ್ರೀ ಸದ್ಗುರು ಭೀಮಾಶಂಕರ ಸ್ವಾಮಿ ಸಂಸ್ಥಾನ ಮಠದ ಪೂಜ್ಯರಾದ ಶ್ರೀ ಸದ್ಗುರು ದತ್ತಪ್ಪಯ್ಯ ಸ್ವಾಮಿಗಳು ತಿಳಿಸಿದರು.
ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಜ್ಞಾನಗಂಗೋತ್ರಿ ಶಾಲೆಗೆ ಭೇಟಿ ನೀಡಿ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಪೂಜ್ಯರು, ಯಾವುದೇ ವ್ಯಕ್ತಿಯ ಜೀವನ ಉದ್ದಾರ ವಾಗಲು ಆತನಲ್ಲಿ ಪರಿಶ್ರಮ ಅಗತ್ಯ. ಪರಿಪೂರ್ಣತೆಯ ಬದುಕನ್ನು ಪಡೆಯಲು ಶಿಕ್ಷಣದಿಂದ ಮಾತ್ರ ಸಾಧ್ಯ. ಹಣ ಮತ್ತು ಅಂತಸ್ತಿನಿಂದ ಎಂದಿಗೂ ವಿದ್ಯೆಯನ್ನು ಪಡೆಯಲಾಗುವುದಿಲ್ಲ. ನೈತಿಕ ಧಾರ್ಮಿಕ ಉತ್ತಮ ಸಂಸ್ಕೃತಿಯ ಮೌಲ್ಯವನ್ನು ವಿದ್ಯಾರ್ಥಿ ದೆಸೆಯಲ್ಲಿ ಮೂಡಿಸಬೇಕು. ಮನೆಯಲ್ಲಿ ಪಾಲಕರು, ಶಾಲೆಯಲ್ಲಿ ಶಿಕ್ಷಕರು ಸರಿಯಾದ ನಿಟ್ಟಿನಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿದಾಗ ಮಗು ಉತ್ತಮ ಪ್ರಜೆಯಾಗಿ ಬೆಳೆದು ಸಮಾಜಕ್ಕೆ ಒಳಿತನ್ನುಂಟು ಮಾಡುತ್ತಾನೆ ಎಂದ ಅವರು, ವಿದ್ಯಾರ್ಥಿಗಳು ಗುರುವಿನ ಮಾರ್ಗದರ್ಶನದಲ್ಲಿ ಸಾರ್ಥಕ ಪರಿಶ್ರಮ ಹಾಕಿ ಮುಂದೆ ಯಶಸ್ವಿಯಾಗಿರಿ ಎಂದರು.
ಈ ಸಂದರ್ಭದಲ್ಲಿ ಕಿರಣಭಟ್ ಜೋಶಿ, ಕೋನೇರಾಚಾರ್ಯ ಸಗರ, ಸಂಸ್ಥೆಯ ಅಧ್ಯಕ್ಷ ಮುರುಳಿಧರ ಸುಂಬಡ, ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.