ಮಾತೆಯರು ಸಂಸ್ಕೃತಿಯ ಪ್ರತೀಕ- ಸಂಬಂಧ ಬೆಸೆಯುವಿಕೆ ನೇತಾರರು

ಲೇಖನ..  ಡಾ. ಸಾಯಿಬಣ್ಣ ಮೂಡಬುಳ                   ಕ್ರಾಂತಿವಾಣಿ ವಾರ್ತೆ ಸುರಪುರ:  ನೆಲ ಅನೇಕ ಆಚರಣೆ ಸಂಪ್ರದಾಯಗಳ ನೆಲೆವೀಡಾಗಿದೆ. ಪ್ರತಿ ಆಚಾರ ವಿಚಾರಗಳನ್ನು ಪೂಜ್ಯನೀಯ ದೃಷ್ಟಿಯಿಂದ ಭಾವಿಸುವದು ನಮ್ಮ ಸಂಸ್ಕೃತಿ ನಮಗೆ ತಲೆತಲಾಂತರದದಿಂದ ಕಲಿಸಿರುವ ಮೌಲಿಕವಾದ ಜೀವನಕ್ರಮವಾಗಿದೆ.                                            ಸಂಬಂಧಗಳ ಸದೃಢ ಬೆಸೆಯುವಿಕೆಯಲ್ಲಿ ರೀತಿ, ನೀತಿ, ಆಚಾರ ವಿಚಾರಗಳ ಪಾತ್ರ ಪ್ರಧಾನವಾದ್ದದು. ಈ ಕಾರಣಕ್ಕಾಗಿ ನಮ್ಮ ರಾಷ್ಟ್ರದಲ್ಲಿ ಪ್ರತಿಯೊಂದು ಆಚರಣೆಗು ತನ್ನದೆಯಾದ ಮಹತ್ವವಿರುದನ್ನು ತಳ್ಳಿ ಹಾಕಲಾಗದು. ಆಚರಣೆಗಳು ಕೇವಲ ಸಂಪ್ರದಾಯಗಳ ಮುಂದುವರಿಕೆಯ ಭಾಗವಾಗಿ ಗುರುತಿಸಿಕೊಂಡಿಲ್ಲ. ಅವು ಸಮೃದ್ಧ ಜೀವನ ಮೌಲ್ಯಗಳು, ಆದರ್ಶಗಳ ಉನ್ನತ ಆಶಯಗಳ ಮಹಾಮೊತ್ತವಾಗಿ ಸಮಾಜದಲ್ಲಿ ಸಮೃದ್ಧತೆಯನ್ನು ನಳನಳಿಸುವಂತೆ ಮಾಡುವಲ್ಲಿ ಸಮಾಜವನ್ನು ಎದುರುಗೊಳ್ಳುತ್ತಿವೆ.                                                  ಭಾರತದ ಇಂತಹ ಹಲವು ಬಹುಮುಖಿ ಆಚರಣೆಗಳಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯು ಕೂಡಾ ಒಂದು. ಭಾರತದಂತಹ ಬಹುವೈವಿಧ್ಯಮಯ ಭಿನ್ನ ಸಂಸ್ಕೃತಿಯ ದೇಶದಲ್ಲಿ ಹೆಣ್ಣನ್ನು ಬಹು ನೆಲೆಗಳಲ್ಲಿ ಆರಾದಿಸುತ್ತಿರುವುದು ಈ ನೆಲ ಅವರಿಗೆ ನೀಡುತ್ತಿರುವ ಗೌರವವೆಂದೆ ಹೇಳಬೇಕು.               ಪವಿತ್ರ ಮತ್ತು ಪರಿಶುದ್ಧತೆಯ ಸಂಕೇತವಾಗಿರುವ ಮಹಿಳೆ ಮತ್ತೊಂದು ಜೀವಕ್ಕೆ ಜನ್ಮ ನೀಡುವ ಅನುಪಮವಾದ ಶಕ್ತಿಯನ್ನು ಹೊಂದಿದ್ದಾಳೆ. ಈ ಪ್ರಪಂಚದಲ್ಲಿ ಮಾತೆಯನ್ನು(ಹೆಣ್ಣುಜೀವಿ )ಹೊರತುಪಡಿಸಿ ಬೇರಾವ ಜೀವಿಯು ಜನ್ಮ ನೀಡುವ ದಿವ್ಯಬಲವನ್ನು ಹೊಂದಿಲ್ಲ. ಪ್ರೀತಿ, ಪ್ರೇಮ, ಮಮತೆಯ ಮಹಾಪರ್ವತವಾಗಿರುವ ಹೆಣ್ಣು ಅನುಪಮವಾದ ಸಹನಾ ಶಕ್ತಿಯನ್ನು ಹೊಂದಿದ್ದಾಳೆ. ಇಂತಹ ಬಹು ಜೀವನ ಮೌಲ್ಯಗಳನ್ನು ತನ್ನಲ್ಲಿ ಶೇಕರಿಸಿಕೊಂಡಿರುವ ಹೆಣ್ಣು ಮಗಳನ್ನು ಇಂದಿಗೂ ಕೂಡಾ ಪ್ರತಿ ಮನೆಯಲ್ಲೂ ಮನೆಯ ಮಹಾಲಕ್ಷ್ಮಿಯಾಗಿ ಪರಿಭಾವಿಸುವ ಮನಸ್ಸುಗಳಿಗೇನು ಕೊರತೆಯಿಲ್ಲ.                       ಬದುಕಿನುದ್ದಕ್ಕೂ ಪರರ ಸಂತೋಷಕ್ಕಾಗಿ ತನ್ನ ಬದುಕನ್ನು ಸವೆಸುವ ಭೂಮಿಯ ಏಕ ಮಾತ್ರ ಜೀವಿ ಹೆಣ್ಣುಮಗಳಾಗಿದ್ದಾಳೆ ಎಂದರೆ ಅತಿಷಿಯೋಕ್ತಿಯಾಗಲಿಕ್ಕಿಲ್ಲ. ತ್ಯಾಗ, ಸಂಯಮಗಳ ಪ್ರತಿರೂಪವಾಗಿರುವ ಹೆಣ್ಣುಮಕ್ಕಳು ಕುಟುಂಬವೆಂಬ ಭಾವ ಸಂಭಂದಗಳ ಸಂಗಮವನ್ನು ಗಟ್ಟಿಯಾಗಿ ಪ್ರೀತಿ,ಕರುಣೆ, ಮಮತೆ, ವಾತ್ಸಲ್ಯವೆಂಬ ಮಹಾಗುಣಗಳ ಮೂಲಕ ನಿರ್ಮಿಸುತ್ತಾರೆ. ಹೆಣ್ಣುಮಕ್ಕಳು ಕೇವಲ ತಮ್ಮ ತವರಲ್ಲದೆ ಗಂಡನ ಮನೆಯಲ್ಲೂ ಶಾಂತಿ, ಸೌಹಾರ್ದತೆ, ಸಮನ್ವಯತೆಯ ಮೂಲಕ ಕುಟುಂಬವನ್ನು ಬೆಳೆಸುತ್ತಾರೆ.                                                                ಅಣ್ಣ, ತಮ್ಮ, ತಂದೆಯನ್ನು ತಮ್ಮ ಹೃದಯಾಂತರಾಳದಿಂದ ಗೌರವಿಸುವ ಈ ಜೀವಿ ಬದುಕಿನೂದ್ದಕ್ಕೂ ತನ್ನ ನೋವನ್ನು ಪ್ರಕಟಿಸದೆ ಹೃದಯದಲ್ಲಿ ಜೋಪಾನವಾಗಿಟ್ಟು ಬರಿ ಸಂತೋಷವನ್ನು ಅಭಿವ್ಯಕ್ತಿಸುವ ಮಾದರಿ ಅನನ್ಯವಾದದ್ದು.     ಒಬ್ಬ ತಂದೆಗೆ ಮಗಳ ಪ್ರೀತಿ ಹೊಸ ಜೀವನ್ಮುಖಿ ಸಂತೋಷವನ್ನು ನೀಡುತ್ತದೆ. ಅವಳ ನಿಸ್ಕಲ್ಮಷವಾದ ಆಟೋಟಗಳ ತಂದೆ ತಾಯಿಯ ನೋವನ್ನು ಮರೆಸುತ್ತವೆ. ತಂದೆ, ತಾಯಿ, ಗಂಡ, ಮಕ್ಕಳ ಆರೈಕೆಯಲ್ಲಿ ತೊಡಗುವ ಇವಳು ತನ್ನ ಅಗತ್ಯತೆಗಳನ್ನು ನಿರ್ಲಕ್ಷಿಸುವ ಮಹಾಕುಟುಂಬ ಸಂರಕ್ಷಕಿಯಾಗಿಯು ಕಂಡುಬರುತ್ತಾಳೆ.                                                      ಇಂತಹ ಹೆಣ್ಣುಮಕ್ಕಳನ್ನು ಇಂದಿನ ಸಮಕಾಲಿನ ಸಮಾಜವು ನಿರೀಕ್ಷಿತ ಗೌರವಗಳನ್ನು ನೀಡದೆ ಎರಡನೇಯ ದರ್ಜೆಯ ವ್ಯಕ್ತಿಯಾಗಿ ಪರಿಗಣಿಸುತ್ತಿರುವುದು ಸಮಾಜ ನೈತಿಕವಾಗಿ ಬತ್ತಿ ಹೋಗುತ್ತಿರುವುದರ ಸಂಕೇತವಾಗಿದೆಯೆಂದರೆ ತಪ್ಪಾಗಲಿಕ್ಕಿಲ್ಲ.   ವಿಧ್ಯೆ, ಜ್ಞಾನ, ಪದವಿ, ಅಂತಸ್ತುಗಳು ಪ್ರಗತಿಯ ಸಂಕೇತವಾಗಿ ಪರಿಗಣಿಸುವವರು ಅದಕ್ಕೂ ಮಿಗಿಲಾಗಿ ಸಂಸ್ಕಾರ, ತಿಳುವಳಿಕೆ, ಪರೋಪಕಾರ, ಸಮಾಜಮುಖಿ ಧೋರಣೆಯು ಬಹು ಮುಖ್ಯ ಸಮಾಜ ಸುಧಾರಣಾ ಮಾಪನವಾಗುತ್ತದೆ ಎಂದು ಗ್ರಹಿಸಬೇಕಾಗಿದೆ.                                                            ಈ ನೆಲೆಯಲ್ಲಿ ಸಮಾಜ ಇನ್ನಾದರೂ ವ್ಯಾಪಕವಾಗಿ ತೆರೆದುಕೊಂಡು ಗಹನವಾಗಿ ಚಿಂತಿಸುವಂತಹ ವೈಚಾರಿಕತೆಯ ವಾತಾವರಣ ಸಮೃದ್ಧವಾಗಿ ಬೆಳೆದುಬರಲಿ ಎನ್ನುವದೆ ಬಹುಜನರ ಆಶಯವಾಗಿದೆ.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ