ಗಂಡ ಹೆಂಡತಿಯರ ದಾಂಪತ್ಯ ಗೀತೆ-ಸೋಬಾನೆ ಹಾಡು.. ಸಮಗ್ರ ಚಿತ್ರಣ

ಲೇಖಕ:  ವೆಂಕಟೇಶ್‌ ಎಂ.ಪಾಟೀಲ್, ಉಪನ್ಯಾಸಕ, ಸಗರ

  ಕ್ರಾಂತಿವಾಣಿ ವಾರ್ತೆ ಸುರಪುರ: ಇಂದಿನ ಆಧುನಿಕ ಸಂಸ್ಕೃತಿಯ ಬರಾಟೆಯಲ್ಲಿ ಕಾಣದೆ ಮರೆಯಾಗುತ್ತಿರುವ ನಮ್ಮ ಜನಪದರ ಹೆಮ್ಮೆಯ ಮೌಖಿಕ ಸಂಸ್ಕೃತಿ ಬಹಳ ವೈಶಿಷ್ಟ್ಯದಿಂದ ಕೂಡಿದ್ದಾಗಿದೆ.

ಕಂಠಸ್ಥ ಸಂಪ್ರದಾಯದ ಈ ಜನ ಓದು-ಬರಹ ಬಾರದೆ ಹೋದರೂ ಶ್ರೀವಿಜಯನು ತನ್ನ ಕವಿರಾಜಮಾರ್ಗದಲ್ಲಿ ಉಲ್ಲೇಖಿಸಿದಂತೆ “ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣತ ಮತಿಗಳ್” ಎಂಬ ಉಚ್ಚಾರವು ನಮ್ಮ ನಾಡಿನ ಜನಪದರ ಪ್ರತಿಭೆಗೆ ಸಾಕ್ಷಿಯಾಗಿ ನಿಲ್ಲುವಂತ‌ ಮಾತು.ಬಹಳ ಸ್ವಾರಸ್ಯಕರವಾದ ಜನಪದ ಹಾಡನ್ನು ತಮ್ಮ ಜೀವನ ಅನುಭವದಿಂದ ಹುಟ್ಟಿಸಿದ ಧೀಮಂತ ಕಲೆಗಾರರಿವರು.

ನಮ್ಮ ನಾಡಿನಾದ್ಯಂತ ಹೆಸರುವಾಸಿಯಾದ ಜನಪದರ ಹಾಡುಗಳು ಬಹಳಷ್ಟಿವೆ.ಅವುಗಳಲ್ಲಿ ಹಂತಿಯ ಹಾಡುಗಳು, ಗರತಿಹಾಡುಗಳು, ಸೋಬಾನೆ ಹಾಡುಗಳು, ಅಂಟಿಗೆ-ಪಂಟಿಗೆ ಹಾಡುಗಳು, ಸಿಗೆ-ಗೌರಿ ಹಾಡು, ಮಹೊರಂ ಹಾಡು, ಮದುವೆಯ ಹಾಡುಗಳೆಂದು ವಿವಿಧ ರೀತಿಯ ಹಾಡುಗಳನ್ನು ನೋಡಬಹುದು.

ನಮ್ಮ ಜನಪದರು ತಮ್ಮ ಜ್ಞಾಪಕಶಕ್ತಿಯ ಮೂಲಕ ಉಳಿಸಿಕೊಂಡು ಬಂದ ಈ ಪರಂಪರೆಯು ಇಂದಿನ ಆಧುನಿಕತೆಯ ಭರಾಟೆಯಲ್ಲಿ ಸಿನಿಮಾ, ನಾಟಕ, ಟೆಲಿವಿಷನಗಳ ಹಾವಳಿಯಿಂದ ಗಟ್ಟಿಯಾದ ನಮ್ಮ ಜನರ ಸಾಹಿತ್ಯ ತೆರೆಯ ಮರೆಯ ಹಂಚಿನಲ್ಲಿ ಸರಿದಿದೆ. ಅನುಭವದಿಂದ ಹುಟ್ಟಿದ ಕಲೆ ಆತ್ಮಾನುಭವವನ್ನು ಭೋದಿಸುವುದೆಂದು ನಂಬಿದ್ದ ನಮ್ಮ ಜನಪದರು ಆತ್ಮಸಂತೋಷವನ್ನು ಅದರಲ್ಲೇ ಕಂಡುಕೊಂಡವರು ಅವರು, ಇಲ್ಲಿ ನಾನು ಬರೆಯುತ್ತಿರುವ ಸೋಭಾನೆಹಾಡು ನಾನು ಚಿಕ್ಕಂದಿನಿಂದಲೇ ನನ್ನ ಅಜ್ಜಿ ನಾಗಮ್ಮ ಹಾಡುತ್ತಿದ್ದ ಈ ಹಾಡು ಎಷ್ಟೊಂದು ಅರ್ಥಪೂರ್ಣವಾಗಿತ್ತು.

ಆಕೆ ಇಂದು ಉಳಿದಿಲ್ಲ ಆದರೆ ಅವಳಾಡುತಿದ್ದ ಹಾಡಿನದಾಟಿ ನನ್ನ ಮನವನ್ನ ಇಂದಿಗೂ ವಿಸ್ಮಯಕ್ಕೆ ದೂಡಿ ನನ್ನ ಮನಪಟದಲ್ಲಿ ಅಚ್ಚಳಿಯದೆ ಉಳಿದಿದೆ. ಕೆಲವು ದಿನಗಳ ಹಿಂದೆ ನನ್ನಜ್ಜಿಯ ತಂಗಿಯಾದ ಸಿದ್ದಮ್ಮಳಿಂದ ಮತ್ತು ನನ್ನ ತಾಯಿಯಿಂದ ಕೇಳಿ ತಿಳಿದು ಕುತೂಹಲ ಹುಟ್ಟಿ ಇನ್ನಷ್ಟು ಈ ಹಾಡನ್ನು ಸಂಗ್ರಹಿಸಿಕೊಂಡು ಈ ಲೇಖನದಲ್ಲಿ ಸೋಬಾನೆಹಾಡಿನ ವಿಶೇಷತೆಯನ್ನು ಬರೆಯಲು ಪ್ರಯತ್ನಿಸಿರುವೆನು.

ಚಿಕ್ಕಂದಿನಲ್ಲೆ ನನ್ನ ಮನವ ಕದ್ದ ಈ “ಸೋಭಾನೆಹಾಡು” ಗಂಡ ಹೆಂಡತಿಯರ ದಾಂಪತ್ಯಗೀತೆಯಾಗಿದೆ.ಈ ಹಾಡಿನಲ್ಲಿ ಅಣ್ಣ ತಂಗಿಯರ ಭಾಂದವ್ಯದ ವಿಚಾರವು ಬರುವುದು. ಹೀಗ ಈ ಸೋಭಾನೆ ಹಾಡನ್ನು  ನೋಡುವ ದಾಟಿಗೆ ಬರೋಣ. ಮದುವೆಯಾದ ಹೊಸತರಲ್ಲಿ ಹೆಣ್ಣುತವರನ್ನು ತೋರೆದು ಗಂಡನೆ ತನ್ನ ಸರ್ವಸ್ವ ಎಂದು ನಂಬಿ ಗಂಡನ ಮನೆಗೆ ಬಂದಾಗ ಗಂಡನ ಮನೆಯಲ್ಲಿ ಪ್ರತಿಯೊಂದನ್ನು ಸಹಿಸಿಕೊಂಡು ಬದುಕುವ ಹೆಂಡತಿಯ ಮನಸ್ಸನ್ನು ಚೆನ್ನಾಗಿ ಅರಿತು ಗಂಡನಾದವನು ನಡೆಯುತ್ತಿದ್ದನು.

ಇಂದಿನ ಆಧುನಿಕ ಯುಗದಲ್ಲಿ ವೈಭೋಗದಿಂದ ಮಾಡುವ ಮದುವೆ ಮುಂದೆ ಗಂಡ-ಹೆಂಡಿರು ಸುಖವಾಗಿದ್ದರೆ ಸುಖಾಂತ್ಯಕಾಣುವವು! ಇಲ್ಲದೆ ಹೋದರೆ ದುರಂತ ಪಾತ್ರಗಳಾಗುವವು? ನಮ್ಮ ಜನಪದ ಹೆಣ್ಣು ಸಹನೆ, ಪ್ರೀತಿ, ನಡೆ-ನುಡಿ ಪಾವಿತ್ರ್ಯಕ್ಕೆ ಹೆಸರುವಾಸಿ.  ಗಂಡನಾದವನು ಕೂಡ ತುಂಬಾ ಸೂಕ್ಷ್ಮಮತೀಯನಾಗಿರಬೇಕು. ಹೃದಯವಂತನಾಗಿರಬೇಕು, ಹೆಂಡತಿಯ ಕಷ್ಟಗಳಿಗೆ ಸ್ಪಂದಿಸುವ ಗುಣದವನಾಗಿರಬೇಕು. ತನ್ನ ಹೆಂಡತಿಯ ಅಂತರಂಗವನು ಭೇದಿಸುವವನಾಗಿರಬೇಕು. ಆಕೆಯ ಅಂತರಂಗದ ಭಾವವನ್ನು ಅರಿತು ನಡೆಯುವವನು ಹಾಗಿರಬೇಕು. ಹೀಗಿರಲು ಮದುವೆಯಾದ ಹೊಸತರಲ್ಲಿ ಮಡದಿಯ ಇಷ್ಟಕಾಮನೆಯನ್ನು ಪೂರೈಸುವುದು ಗಂಡನ ಕರ್ತವ್ಯ ನಮ್ಮ ಜನಪದರ ಸೋಭಾನೆ ಹಾಡೊಂದು ತುಂಬಾ ಚೆನ್ನಾಗಿ ಅವರ ದಾಂಪತ್ಯದ ಚಿತ್ರಣವನ್ನು ಕಟ್ಟಿಕೊಡುವುದು.

  ದೀಪಾವಳಿ ಹಬ್ಬದ ದಿನ ರಾಯರಿಗೆ ಮದುವೆಯಾಗಿ ಐದು ತಿಂಗಳಾಗಿರುವದು ಅಂದು ಮುಂಜಾನೆ ತನ್ನ ರಾಯನಿಗೆ ಜಳಕಕ್ಕೆ ನೀರು ಬೆರಸುತ ಹೆಂಡತಿ “ತನಗೆ ತವರೂರು ನೆನಪಾಯ್ತು” ಎಂದು ಹೇಳುವಳಂತೆ ಹಾಗ ಗಂಡ ಅವಳ ಮನಸ್ಸಿನ ಭಾವ ಅರ್ಥೈಸಿಕೊಂಡು ಹೀಗೆ ಹೇಳಿದನು ಹಾಗ ಸೋಭಾನೆಯ ಹಾಡು ಪ್ರಾರಂಭವಾಗುವುದು.

      “ದೀವಳಗಿ ಹಬ್ಬ ದಿನ ನೀರ ತುಂಬ ದಿನ

       ರಾಯರಿಗೆ ನೀರ ಬೆರಸುತ ಕೇಳ್ಯಾಳೆ ಸೋಬಾನವೆ

       ರಾಯರಿಗೆ ನೀರ ಬೆರಸುತ ಕೇಳ್ಯಾಳೆ ಸೋಬಾನವೆ” ||

ಎಂದು ಪ್ರಾರಂಭವಾದ ಈ ಹಾಡು ರಾಯ ತನ್ನ ಮಡದಿಯ ಮನದ ಹಿಂಗಿತವನ್ನು ಅರಿತು ಮುಂದೆ ಹೇಳಿದನಂತೆ.

       “ತವರು ನೆನೆಯಲಿ ಬ್ಯಾಡ ಮನವ ದಣಿಯಲಿ ಬ್ಯಾಡ

        ನಾ ತಂದು ಕೊಡುವೆ ಬಂಗಾರದ ಸರವ ಸೋಬಾನವೆ

        ನಾ ತಂದು ಕೊಡುವೆ ಸರ ಮುತ್ತ ಸೋಬಾನವೆ” ||

ಹೆಂಡತಿ ತನಗೆ ಸರ ಮುತ್ತು ತಂದು ಕೊಡು ಎಂದು ಕೇಳಿಲ್ಲ, ಅವಳ ಅಂತರಂಗದ ಭಾವವ ಹೇಳದೆ ತಿಳಿದುಕೊಂಡು ಅದನ್ನು ಕೊಂಡು ಅವಳ ಮನಸ್ಸನ್ನು ಸಂತಸಪಡಿಸಿದನು. ಇದು ರಾಯನಿಗೆ ತನ್ನ ಮಡದಿಯ ಮೇಲಿರುವ ಅಪಾರ ಪ್ರೇಮವನ್ನು ಸೂಚಿಸುವುದು.ಏನನ್ನು ಕೇಳದ ಮಡದಿ! ಮಡದಿಯ ಕಣ್ಣೋಟವ ಅರಿತು ಅವಳಿಗಿಷ್ಟದ ಉಡುಗರೆಯನ್ನು ತಂದು ಅವಳ ಮನವ ಗೆಲ್ಲುವ ಪತಿ! ಏನದ್ಭುತ ನಮ್ಮ ಜನಪದರ ದಾಂಪತ್ಯ ಜೀವನ ಅಚ್ಚರಿ ಅಲ್ವೇ.?! ಹೀಗೆ ಸೋಭಾನೆ ಪದ ಮುಂದುವರೆಯುವುದು ತನ್ನ ಗಂಡ ತನಗೆ ಗೊತ್ತಿಲ್ಲದೆ ತನ್ನ ಅಂತರಂಗದಿ ಹುದುಗಿದ ಭಾವನೆಯ ಶೋಧಿಸಿ ತನಗೆ ತವರೂರವರು ಮದುವೆಯ ಸಂದರ್ಭದಲ್ಲಿ ಯಾವ ಬಂಗಾರವನ್ನು ಹಾಕಿ ಕಳಿಸಿದವರಲ್ಲ, ತನ್ನ ರಾಯನು ತನಗೆ ಗೊತ್ತಿಲ್ಲದಂತೆ ಬಂಗಾರವ ತಂದು ಕೊಡುವೆ ಎಂದಾಗ  ಹೇಳುವ ಮಾತು ಅವಳ ಮನವ ತಟ್ಟಿ ರಾಯರ ಮೇಲಿನ ಅಭಿಮಾನ ತವುರವರ ಬಡತನದ ಜೀವನ ಎರಡು ಕಣ್ಣಮುಂದೆ ಬಂದು ಕಣ್ಣಲ್ಲಿ ನೀರು ತುಂಬಿ ಬರುವುದು ತನ್ನ ರಾಯನ ಮೇಲಿನ ಅಭಿಮಾನದಿಂದ ಪ್ರೀತಿಯಿಂದ ಆತನ ಕೈಯಲ್ಲಿನ ಬಂಗಾರದ ಸರವ ಕಂಡು ಹೀಗೆನಿಸಿತು ಅವಳಿಗೆ.

      “ಸರಮುತ್ತು ತಂದ ಕೊಡಟಕೆ ಉದಿರಿದವು ಕಣ್ಣಳ ನೀರೆ”$

      “ಸರಮುತ್ತು ತಂದ ಕೊಡಟಕೆ ಉದಿರಿದವು ಕಣ್ಣಳ ನೀರೆ”$

ತನ್ನ ಗಂಡ ಪ್ರೀತಿಯಿಂದ ಬಂಗಾರ ತಂದು ಕೊಟ್ಟ ಕ್ಷಣದಲ್ಲಿ ಅವಳ ಮನಸ್ಸು ಸ್ವರ್ಗವನ್ನೇ ಪಡೆದ ಸಂತಸವನ್ನು ಅನುಭವಿಸಿತು ಎಂದು ನಮ್ಮ ಜನಪದ ಕವಿ ವರ್ಣಿಸುವನು ಸರ ಮುತ್ತು ತಂದು ಕೊಡುವೆನೆಂದು ಹೇಳಿದಾಗ ಅವಳ ಭಾವಾವೇಗ ಮನಸ್ಸಿನ ಕಟ್ಟೆ ಹೊಡೆದು ತನ್ನ ಬಾಳಲ್ಲಿ ಸೌಭಾಗ್ಯ ನಿಧಿಯಾದ ತನ್ನ ರಾಯನಿಗೆ ಹೃದಯಾಂತರಾಳದಿಂದ ಕಣ್ಣೀರು ಸುರಿಸುವಳು.

ನಂತರ ಹಾಡು ಮುಂದುವರೆಯುವುದು,

“ಸರಮುತ್ತು ತಂದ ಕೊಡಟಕೆ ಉದುರಿದವು ಕಣ್ಣಳ ನೀರೆ $

ಕುತುನಿ ಬಣ್ಣದ ಕುಪ್ಪಸ ತೋಯ್ದ ನೀರೆ ಸೋಬಾನವೆ || $

ಕುತುನಿ ಬಣ್ಣದ ಕುಪ್ಪಸ ತೋಯ್ದ ನೀರೆ ಸೋಬಾನವೆ” || $

ಕುತನಿ ಬಣ್ಣವೆಂದರೇ, ಹಸಿರು-ಬೂದು ಮಿಶ್ರಿತ ಬಣ್ಣವಾಗಿದೆ ಗರತಿ ಸುರಿಸಿದ ಕಣ್ಣೀರ ಹನಿ ಕಾಶಿ ಪರ್ವತದವರೆಗೂ ಆ ನೀರು ಹರಿದವು ಎಂಬುವುದು ನಮ್ಮ ಜನಪದ ಕವಿಯ ಅದ್ಭುತ ಕಲ್ಪನೆ.ನಮ್ಮ ಜನಪದ ಗರತಿಯು ಸುರಿಸಿದ ಕಣ್ಣೀರು ಕಾಶಿ ಪರ್ವತಕೆ ಹೇಗೆ ಹೊದವು! ಎಂಬುವುದು ವಿಸ್ಮಯ ಅಂದರೆ ಇದರರ್ಥ, ಗರತಿಯು ಸುರಿಸಿದ ಆನಂದಭಾಷ್ಪದ ಕಣ್ಣೀರು ಪರಮಾತ್ಮನಲ್ಲಿಗೆ ಮುಟ್ಟಿದವು! ಎಂಬುದು ನಮ್ಮ ಜನಪದ ಕವಿ ಹೇಳಬೇಕಾಗಿದೆ ಅವನು ಹೇಳುವ ರೀತಿ ಇದು, ಮುಂದೆ ಗರತಿಯ ಕಣ್ಣೀರು ಕಾಶಿ ಪರ್ವತದವರೆಗೆ ಹೋಗಿ ಅಲ್ಲಿದ್ದ ಲಿಂಗವನ್ನೇಲ್ಲ ಕೂಡಿದವು ಎನ್ನುವನು.

“ಕಾಶಿ ಪರವತದಲ್ಲಿ ಏಸುಲಿಂಗವ ಕೂಡಿ

ಭೀಮರತಿಯೆಂಬ ಹೊಳೆಯಲ್ಲಿ ಕೂಡಿ ಸೋಭಾನವೆ” || ಹೀಗೆ ಈ ಹಾಡು ಮುಂದುವರೆಯುವುದು.

ನಮ್ಮ ಮನಸ್ಸಿನಲ್ಲಿ ಈ ಹಾಡು ಕೇಳಿ ಹಲವು ಪ್ರೇಶ್ನೆಗಳು ಮೂಡುವವು! ಕಾಶಿ ಪರಮಾತ್ಮ ಎಲ್ಲಿ ಭೀಮಾನದಿ  ಎಲ್ಲಿ? ಅವೆರಡು ಕೂಡಿ ಭೀಮರತಿಯೆಂಬ ಹೊಳೆಯಲ್ಲಿ ಅವರಣ್ಣ ಉಟ್ಟನಾಕುತ ಬಂದನೆಂಬ ದೃಶ್ಯವನ್ನು ನಂಬಲಸಾಧ್ಯದಂತೆ ಜನಪದ ಕವಿಯು ವರ್ಣಿಸಿರುವನು.ತನ್ನ ತಂಗಿಗೆ ಮದುವೆಯಾಗಿ ಐದು ತಿಂಗಳಾಗಿವೆ ತಂಗಿ ಎಂದರೆ ತನಗೆ ಪಂಚಪ್ರಾಣ ಅವಳ ಮದುವೆಯಲ್ಲಿ ಯಾವ ಬಂಗಾರ, ಒಡವೆ, ವೈಡೂರ್ಯವ ಕೊಟ್ಟಿಲ್ಲ ತನ್ನ ತಂಗಿಯ ಬಗ್ಗೆ ಅನುದಿನವು ಸ್ಮರಿಸುವ ಅವನು ತನ್ನ ತಂಗಿಯನ್ನು ನೋಡಲು ಕಾತರನಾಗಿರುವನು. ತಾನು ಹೊಗುವ ದಾರಿ ಕಾಶಿ ಆದರೇನು ಕೈಲಾಸವಾದರೆನೆಂದು ಅಂದುಕೊಂಡವನು. ಕ್ರಮಿಸುವ ದಾರಿ ಎಷ್ಟು ದೂರವಾದರೇನು ಕ್ಷಣಮಾತ್ರದಲ್ಲಿ ತನ್ನ ತಂಗಿಯ ಬಳಿ ಹೊಗುವ ತುಡಿತ ಅವನದು. ಈಗಿನ ಸಮಾಜದಲ್ಲಿ ಪಕ್ಕದಲ್ಲಿದ್ದವರ ನೋವನ್ನೆ ಅರಿಯಲು ಹಾಗದ ಸ್ಥಿತಿ ಇರುವಾಗ ತನ್ನ ತಂಗಿಯ ಮನಸ್ಸಿಗೆ ನೋವಾದ ವಿಚಾರವು ಅವರಣ್ಣನಿಗೆ ತಕ್ಷಣವೆ ಮುಟ್ಟಿ ಆತನು ತಂಗಿಯ ನೋಡಲು ಭೀಮರತಿಯೆಂಬ ಹೊಳೆಯಲ್ಲಿ ಹರಗಾಲನಾಕಿ ಕರೆಯಲು ಬರುವನೆಂಬ ಕಲ್ಪನೆಯು ಊಹೆಗೆ ಮೀರಿದ್ದು.

ಕಾಶಿ ಪರಮಾತ್ಮ ಎಲ್ಲಿ? ತಂಗಿಯ ತವರು ಎಲ್ಲಿ? ಗಂಡನ ಮನೆ ಎಲ್ಲಿ? ಭೀಮರತಿಯೆಂಬ ಹೊಳೆ ಎಲ್ಲಿ? ತಂಗಿಯನ್ನು ಕರೆಯಲು ಅಣ್ಣ ಹರಗಾಲನಾಕಿ ಕರೆಯಬಂದನೆಂಬ ಜನಪದ ಕವಿಯ ಕಲ್ಪನೆಯು ನಮ್ಮ ಊಹೆಗು ಮೀರಿದ್ದಾದರು ಕ್ಷಣಾರ್ದದಲ್ಲಿ ಅವೆಲ್ಲವನ್ನು ಹತ್ತಿರಕ್ಕೆ ತರುವ ಜಾಣ್ಮೆ ಜನಪದ ಕವಿಯದು. ನಮ್ಮ ಮನಸ್ಸಿನಲ್ಲಿ ಅಡಗಿರುವ ಪ್ರೀತಿಯೆಂಬ ವರದಾನವು ಕಾಲ-ಸ್ಥಳ-ಸಮಯವನ್ನು ಮೀರಿದ್ದು ಎಂಬುವುದನ್ನು ಈ ಹಾಡು ಪರಿಣಾಮಕಾರಿಯಾಗಿ ಕಟ್ಟಿಕೊಡುವುದು.ಇಲ್ಲಿ ಎಲ್ಲಾ ಸಂಬಂಧಗಳನ್ನು ಹತ್ತಿರಕ್ಕೆ ತಂದು ಒಬ್ಬರನೊಬ್ಬರು ಕೂಡಿ ಬಾಳುವಂತೆ ಮಾಡಿದವರು ನಮ್ಮ ಜನಪದರು. ಎಂಬುವುದನ್ನು ಸಾರಬೇಕಾಗಿರುವುದರಿಂದ ಕಾಸಿ-ಕೈಲಾಸಗಳೆಂಬ ಪರಿಕಲ್ಪನೆಯನ್ನು ತಂದಿರುವರು.

ಗರತಿಯ ಮನಸ್ಸು ಯಾವಾಗಲು ತವರೂರ ನೆನಪಿಸುತಿದೆ. ಅಣ್ಣ ತನ್ನನ್ನು ತವರೂರಿಗೆ ಕರೆಯಬಂದಾಗ  ತಂಗಿಯಾಗಿ ಅಣ್ಣನಿಗೆ ಏನೇನು ಮಾಡಿ ಉಣಬಡಿಸಬೇಕೆಂದು ಚಿಂತಿತರಾಗಿರುವಳು. ಅವಳ ಮನದಲಿ ತನ್ನಣ್ಣ ತನ್ನನ್ನು ತವರೂರಿಗೆ ಕರೆದೊಯ್ಯುವ ಸಂಭ್ರಮವು ಮನದಲಿ ಮನೆಮಾಡಿದೆ. ಮದುವೆಯಾಗಿ ಗಂಡನ ಮನೆಗೆ ಬರುವಾಗ ತವರಿಂದ ತಾನೇನು ಪಡೆಯದೆ ಬಂದ ಅವಳ ಮನದಲಿ “ತನ್ನ ತವರು ಹೊಳೆದಂಡಿಲಿರುವ ಕರಕಿಯ ಕುಡಿಯಂಗ ಹಬ್ಬಲಿ ಅವರ ರಸಬಳ್ಳಿ” ಎಂದು ಹಾರೈಸಿ ಬಂದವಳು ಅವಳು. ಹೀಗೆ ಹಾಡು ಮುಂದುವರೆಯುವುದು,

“ತವರೂರಿಗೆ ಕರೆಯಬಂದ ಅಣ್ಣಗೆ ಮತ್ತೇನ ಮಾಡಬೇಕ 

ಕರಿಯ ಆಕಳ ತುಪ್ಪ ಉರುಣಗಡಗ ಸೋಭಾನವೆ

ಕರಿಯ ಆಕಳ ತುಪ್ಪ ಉರುಣಗಡಗ ಮಾಡಿನೆ,

ನೀ ಇದ ಉಂಡು ನನ್ನ ಕರಕೊಂಡು ಹೋಗು ಅಣ್ಣ ಸೋಭಾನವೆ” ||

ಎಂದು ಗರತಿಹಾಡುವಳ. ಜನಪದ ಸಂಸ್ಕೃತಿಯಲ್ಲಿ ಸಿಹಿ ಶುಭದ ಸಂಕೇತ.

ಸಂತೋಷದ ಸಂಕೇತ, ಪ್ರೀತಿಯಿಂದಲೇ ತನ್ನಣ್ಣನಿಗೆ ಸಿಹಿ ಮಾಡಿ ಉಣಿಸಿ ತಾನು ಸಂಭ್ರಮದಿಂದಲೇ ತವರೂರಿಗೆ ಹೋಗುವಳು. ನಮ್ಮ ಜನಪದರು ಈ ಸೋಭಾನೆ ಪದಗಳಲ್ಲಿ ಎಷ್ಟು ಸುಂದರವಾಗಿ ಗಂಡ ಹೆಂತಿಯ ಪ್ರೇಮ, ಅಣ್ಣ ತಂಗಿಯ ಬಾಂಧವ್ಯದ ಹಾಡನ್ನು ಕಟ್ಟಿ ನಮ್ಮ ಮನದಲಿ ಮೂಡಿಸುವ ಭಾವ ಅದ್ಭುತವಾದದ್ದು.

ನಮ್ಮ ಕಣ್ಣಿಗೆ ಕಟ್ಟುವಂತೆ ಈ ಹಾಡನ್ನು ಚಿತ್ರಿಸಿರುವ ರೀತಿ ನಮ್ಮ ಜನಪದ ಕವಿಯ ಕಲಾಪ್ರೌಢಿಮೆಗೆ ಸಾಕ್ಷಿಯಾಗಿ ನಿಲ್ಲುವುದು.ಇಂದಿನ ಆಧುನಿಕ ಯುಗದಲ್ಲಿ ಪ್ರೀತಿ, ವಿಶ್ವಾಸವೆಂಬ ಮೌಲ್ಯಗಳು ಹೇಳ ಹೆಸರಿಲ್ಲದೆ ಮರೆಯಾಗಿವೆ.ಆದರೆ ನಮ್ಮ ಜನಪದ ಸಂಸ್ಕೃತಿಯಲ್ಲಿ ಇಂತಹ ಹಾಡುಗಳ ಮೂಲಕ ಇನ್ನು ಮೌಲ್ಯಗಳು ಹಚ್ಚ ಹಸಿರಾಗಿಯೆ ಉಳಿದಿವೆ. ಆ ಕಾರಣಕ್ಕಾದರು ನಮ್ಮ ಜನಪದರ ಹಾಡುಗಳನ್ನು ಜೀವಂತವಾಗಿ ಇಡುವುದು ಇಂದಿನ ಪೀಳಿಗೆಯ ಬಹುಮುಖ್ಯ ಜವಬ್ದಾರಿಗಳಲ್ಲಿ ಒಂದಾಗಿದೆ.

ಈ ಹಾಡುಗಳು ನಮ್ಮ ಬದುಕನ್ನು ಸುಂದರಗೊಳಿಸುವಲ್ಲಿ ಯಾವ ಅನುಮಾನವಿಲ್ಲ.ನಾಡಿನ ಜನರ ಪ್ರೀತಿಯ ದ್ಯೂತಕವಾಗಿ ಈ ಹಾಡುಗಳು ಇಂದು ಜನಮಾನಸದಲ್ಲಿ ಉಳಿದಿರುವುದು ನಮ್ಮ ಜನಪದರ ಅಗಾದ ಪ್ರೌಢಿಮೆಯಿಂದಲೇ ಸಾಧ್ಯವಾಗಿದೆ.

ಈ ಹಾಡುಗಳನ್ನು ಸಾಮಾನ್ಯವಾಗಿ ನಮ್ಮ ಜನಪದರು ತಮ್ಮ ಮನೆಯಲ್ಲಿ ಮದುವೆಯಾದ ವಧು-ವರರನ್ನು ಕೂಡಿಸಿ ಹಾಡುವ ಹಾಡುಗಳಾಗಿದ್ದು. ಹೆಸರೆ ಹೇಳುವಂತೆ ಗಂಡ-ಹೆಂಡತಿಯ ಪ್ರೀತಿಯ ದಾಂಪತ್ಯದ ಸಂಕೇತವಾಗಿ ಜನಮಾನಸದಲ್ಲಿ ಇವು ಇಂದಿಗು ಉಳಿದಿರುವುದು ನಮ್ಮ ಸೌಭಾಗ್ಯವೆ ಸರಿ. ಇಂತಹ ಹಾಡುಗಳನ್ನು ಉಳಿಸುವ ಮೂಲಕ ನಮ್ಮ ಜನಪದ ಸಂಪ್ರದಾಯವನ್ನು ಗೌರವಿಸುವ ಮೂಲಕ ಇಂದಿನ ಯುಗಪಿಳಿಗೆಗೆ ಹೊಸ ವಿಚಾರವನ್ನು ಮೂಡಿಸಿ ಜನಪದರ ಬಗ್ಗೆ ಅವರ ಸಂಸ್ಕೃತಿಯ ಬಗ್ಗೆ, ಅವರ ಜೀವನಾನುಭವದ ಬಗ್ಗೆ, ಮನವರಿಕೆ ಮಾಡಿ ಕೊಡಬೇಕಾಗಿರುವುದು ನಮ್ಮೇಲ್ಲರ ಹೊಣೆಯಾಗಿದೆ.

                     

 

 

       

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ