ಕ್ರಾಂತಿ ವಾಣಿ ವಾರ್ತೆ ಶಹಾಪುರ.
ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ದೇಹಕ್ಕೆ ವ್ಯಾಯಾಮ ದೊರೆಯುತ್ತದೆ. ಮಕ್ಕಳಲ್ಲಿ ಶಿಕ್ಷಣದಷ್ಟೇ ಕ್ರೀಡೆಗಳಿಗೂ ಕೂಡಾ ಪ್ರಾಮುಖ್ಯತೆ ನೀಡುವ ಮನೋಭಾವನೆ ಬೆಳೆಸಬೇಕು. ಆಗ ಮಗು ಭವಿಷ್ಯದಲ್ಲಿ ಆರೋಗ್ಯವಂತವಾಗಿರುತ್ತದೆ. ಜೊತೆಗೆ ಉತ್ತಮ ಕ್ರೀಡಾಪಟುವಾಗಿ ಬೆಳೆಯಲು ಸಾಧ್ಯವಾಗುತ್ತದೆ.ಸೋಲು -ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಗುಣ ಅಳವಡಿಸಿಕೊಳ್ಳಬೇಕು ಎಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಪುರ ಮಕ್ಕಳಿಗೆ ಕಿವಿಮಾತು ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರ ಸಂಘದ ಸಹಯೋಗದಲ್ಲಿ ಆಯೋಜಿಸಲಾದ 2023–24 ನೇ ಸಾಲಿನ ತಾಲೂಕ ಮಟ್ಟದ 14 ಮತ್ತು 17 ವರ್ಷದ ವಯೋಮಾನದ ಒಳಗಿನ ಬಾಲಕ ಬಾಲಕಿಯರ ಕ್ರೀಡಾಕೂಟವನ್ನು ಕ್ರೀಡಾ ಧ್ವಜಾರೋಹಣ ಮತ್ತು ಕ್ರೀಡಾ ಜ್ಯೋತಿ ಎತ್ತಿ ಹಿಡಿಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ತಾಲೂಕಿನಲ್ಲಿ ಕ್ರೀಡಾ ಪ್ರತಿಭೆಗಳಿಗೇನು ಕೊರತೆ ಇಲ್ಲ. ಈ ತಾಲೂಕಿನ ಮಕ್ಕಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ್ದಾರೆ. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು ದೈಹಿಕ ಶಿಕ್ಷಕರ ಮತ್ತು ಪಾಲಕರ ಕರ್ತವ್ಯವಾಗಿದೆ. ಮಕ್ಕಳಿಗೆ ಸ್ಪರ್ಧಾ ಮನೋಭಾವನೆ ಬೆಳೆಯಬೇಕಾದರೆ ಮೊದಲು ಶಿಕ್ಷಕರು ವಿವಿಧ ಸಹಪಠ್ಯಗಳಲ್ಲಿ ಭಾಗವಹಿಸಬೇಕು. ಇದರಿಂದ ಮಕ್ಕಳ ಮನಸ್ಸನಲ್ಲಿ ಪ್ರತಿಭೆಗಳು ಬೆಳೆಯಲು ಕಾರಣವಾಗುತ್ತದೆ. ಶಿಕ್ಷಕರು ಸಹಪಠ್ಯಗಳ ಕಲಿಕೆಯಲ್ಲಿ ಪರಿಪೂರ್ಣತೆ ಹೊಂದಿ ಕ್ರಿಯಾಶೀಲತೆ ಮೈಗೂಡಿಸಿಗೊಳ್ಳಬೇಕು. ಕಲೆ, ಸಂಸ್ಕೃತಿ, ಕ್ರೀಡೆ, ಎನ್‌ಸಿಸಿ ಹಾಗೂ ಎನ್ ಎಸ್ ಎಸ್ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸದಾ ತಮ್ಮನ್ನು ತಾವೇ ತೊಡಗಿಸಿ ಕೊಂಡಾಗ ಮಾತ್ರ ವಿದ್ಯಾರ್ಥಿ ಜೀವನ ಪರಿಪೂರ್ಣವಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರ ಮತ್ತು ಪಾಲಕರ ಮಾತುಗಳನ್ನು ಮಕ್ಕಳು ತಪ್ಪದೇ ಪಾಲಿಸಬೇಕು.ಜೊತೆಗೆ ಗುರು ಹಿರಿಯರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಕ್ರೀಡಾಪಟುಗಳಿಗೆ ಸಲಹೆ ನೀಡಿದರು.
ಕ್ರೀಡಾಂಗಣಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು,
ಈ ಕಾರ್ಯಕ್ರಮನ ಉದ್ದೇಶಿಸಿ ಮಾತನಾಡಿದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರೇದಾರ್ ಅವರು, ಮಕ್ಕಳು ದುಶ್ಚಟಕ್ಕೆ ಬಲಿಯಾಗದೇ ಉತ್ತಮ ಹವ್ಯಾಸ ಜತೆಗೆ ಕ್ರೀಡೆಗಳ ಕಡೆಗೆ ಹೆಚ್ಚು ಗಮನ ಹರಿಸುವುದು ಅವಶ್ಯಕವಾಗಿದೆ ಮಕ್ಕಳು ದೇಶದ ನಿಜವಾದ ಸಂಪತ್ತು. ನಿತ್ಯ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ. ಮಕ್ಕಳ ಸೋಲು -ಗೆಲುವಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವ ಬೆಳೆಸಿ. ಕ್ರೀಡೆಯಿಂದ ಶಿಸ್ತು, ಸಂಯಮ ಮತ್ತು ಆರೋಗ್ಯ ವೃದ್ಧಿಸುತ್ತದೆ. ಕ್ರೀಡೆಯಲ್ಲಿ ಗೆಲ್ಲಲು ಉತ್ತಮ ತರಬೇತಿ ಅಗತ್ಯ. ಪರಿಣತಿಯನ್ನು ಗಳಿಸಲು ಸತತ ಸಾಧನೆ ಮಾಡಬೇಕು ಎಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.
ಇದೇ ವೇಳೆ ಮಾತನಾಡಿದ ಸರಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷರಾಯಪ್ಪ ಗೌಡ ಹುಡೇದ ಅವರು, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಆರೋಗ್ಯದೊಂದಿಗೆ ಮನಸ್ಸು ಕೂಡಾ ಆಹ್ಲಾಧವಾಗಿರುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ, ಪೌರಾಯುಕ್ತ ರಮೇಶ್ ಬಡಿಗೇರ್, ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಶರಣಪ್ಪ ಪಾಟೀಲ ಅಕ್ಷರ ದಾಸೋಹ ಯೋಜನಾಧಿಕಾರಿ ಬಿ.ಹೆಚ್. ಸೂರ್ಯವಂಶಿ, ಬಿ ಆರ್ ಸಿ ರೇಣುಕಾ ಪಾಟೀಲ್, ತಾಲೂಕ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಯಾಳಗಿ, ಆದರ್ಶ ವಿದ್ಯಾಲಯದ ಮುಖ್ಯ ಗುರು ಎಚ್ ಎಸ್ ಸೋಮಪುರ್, ತಾಲೂಕ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ವೈದ್ಯ, ಶಿವಲಿಂಗಪ್ಪ ಸೇರಿದಂತೆ ಅನೇಕ ದೈಹಿಕ ಶಿಕ್ಷಕರು ಕ್ರೀಡಾಪಟುಗಳು ಭಾಗವಹಿಸಿದ್ದರು.