ಕ್ರಾಂತಿ ವಾಣಿ ಶಹಾಪುರ.
ಜಾನುವಾರಗಳ ಸುರಕ್ಷಿತ ಆರೋಗ್ಯಕ್ಕಾಗಿ ರೈತರು ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಕಾಲುಬಾಯಿ ಜ್ವರ ಲಸಿಕೆ ಹಾಕಿಸಿ, ರೋಗ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಶಹಾಪುರ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಷಣ್ಮುಖಪ್ಪ ಗೊಂಗಡಿ ತಿಳಿಸಿದರು.
ತಾಲೂಕಿನ ದಿಗ್ಗಿ ಗ್ರಾಮದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಪಶು ಸಂಗೋಪನೆ ಇಲಾಖೆ ಹಾಗೂ ತಾಲೂಕ ಪಶು ಆಸ್ಪತ್ರೆ ಸಹಯೋಗದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ, 4ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಾಲು ಬಾಯಿ ಜ್ವರಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಸಿಬ್ಬಂದಿ ಹಾಗೂ ಲಸಿಕೆ ಕೊರತೆ ಇಲ್ಲ. ಉಚಿತ ಲಸಿಕೆಯನ್ನು ನೀಡುವಾಗ ಗ್ರಾಮಗಳ ಎಲ್ಲ ಜಾನುವಾರುಗಳಿಗೂ ಹಾಕಿಸಿದರೆ ಸಮಸ್ಯೆ ಉಲ್ಬಣಿಸುವುದಿಲ್ಲ. ಲಸಿಕೆ ಪುಕ್ಕಟೆಯಾಗಿ ನೀಡಲಾಗುತ್ತಿದೆ.
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾದ್ಯಂತ ಸೆ.26ರಿಂದ ಅಕ್ಟೋಬರ್ 25ರ ವರೆಗೆ ನಾಲ್ಕನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜಾನುವಾರುಗಳನ್ನು ಹೊಂದಿರುವವರು ತಪ್ಪದೇ ಲಸಿಕೆ ಹಾಕಿಸಬೇಕು.ಎಲ್ಲಾ ಹಳ್ಳಿಗಳಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಏರ್ಪಡಿಸಿದೆ 37 ಜನ ಲಸಿಕಾದಾರರು ಒಂದು ತಿಂಗಳಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳ ಜಾನುವಾರುಗಳಿಗೆ ಲಸಿಕೆ ಹಾಕುತ್ತಾರೆ. ಲಸಿಕೆ ಹಾಕಲು ಬರುವವರಿಗೆ ಸಹಕಾರ ನೀಡಬೇಕು.ಯಾವುದೇ ಜಾನುವಾರು ಲಸಿಕೆಯಿಂದ ವಂಚಿತವಾಗದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು.ಶಹಾಪುರ ತಾಲೂಕಿನಲ್ಲಿ 20ನೇ ಜಾನುವಾರು ಗಣತಿಯಂತೆ 55 165 ಜಾನುವಾರುಗಳಿರುತ್ತವೆ ಎಂದು ಅವರು ತಿಳಿಸಿದರು.
ಕಾಲು ಬಾಯಿ ಜ್ವರದ ಲಕ್ಷಣಗಳೇನು? ಕಾಲು ಬಾಯಿ ಜ್ವರ ಕಾಣಿಸಿಕೊಂಡ ಜಾನುವಾರುಗಳ ಬಾಯಿ, ನಾಲಿಗೆ, ವಸಡು ಹಾಗೂ ಕೆಚ್ಚಲಿನ ಮೇಲೆ ಸಣ್ಣ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ದನಗಳ ಕಾಲಿನ ಗೊರಸಿನ ಮಧ್ಯೆ ಅಂದರೆ ಪಾದದ ಸೀಳಿನ ನಡುವೆ ಹುಣ್ಣುಗಳಾಗುತ್ತವೆ.106ರಿಂದ 107 ಡಿಗ್ರಿ ಸೆಲ್ಸಿಯಸ್‌ವರೆಗೂ ಜ್ವರ ಕಾಣಿಸಿಕೊಳ್ಳುತ್ತದೆ. ಹೀಗೆ ಜ್ವರ ಕಾಣಿಸಿಕೊಂಡ ಜಾನುವಾರುಗಳು ಮೇವು ತಿನ್ನುವುದನ್ನೇ ನಿಲ್ಲಿಸುತ್ತವೆ, ಕುಂಟುತ್ತಾ ನಡೆಯುತ್ತವೆ. ಸಂಪೂರ್ಣವಾಗಿ ನಿತ್ರಾಣಗೊಂಡು ಮೇಲೆಳದಂತಾಗುತ್ತವೆ. ಯಾವುದೇ ಜಾನುವಾರುಗಳಿಗೆ ಈ ಲಕ್ಷಣಗಳು ಕಂಡು ಬಂದರೆ ತಕ್ಷಣ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಅವರು ಹೇಳಿದರು.
ಹೇಗೆ ಹರಡುತ್ತದೆ. ಸಾಂಕ್ರಾಮಿಕ ರೋಗವಾದ ಇದು ಒಂದು ಜಾನುವಾರುವಿನಿಂದ ಇನ್ನೊಂದು ಜಾನುವಾರಿಗೆ ಬಹುಬೇಗ ಹರಡುತ್ತದೆ.ಇದು ಜಾನುವಾರವಿನಿಂದ ಮತ್ತೊಂದು ಜಾನುವಾರಿಗೆ ಜೊಲ್ಲಿನ ಮೂಲಕ ಹರಡುತ್ತದೆ. ಅಲ್ಲದೆ ಗಾಳಿ ಮೂಲಕವೂ ಹರಡುತ್ತದೆ. ಕಾಲು ಬಾಯಿ ಜ್ವರ ಕಾಣಿಸಿಕೊಂಡ ಜಾನುವಾರಿಗೆ ಕುಡಿಸಿದ ನೀರನ್ನು ಇನ್ನೊಂದು ದನಕ್ಕೆ ಕುಡಿಸುವುದು, ರೋಗಬಾಧಿತ ಜಾನುವಾರು ತಿಂದು ಬಿಟ್ಟ ಮೇವು ಇನ್ನೊಂದು ದನಕ್ಕೆ ಹಾಕುವುದರಿಂದ ಈ ರೋಗ ಬಹುಬೇಗ ಹರಡುತ್ತದೆ. ಇದರ ಬಗ್ಗೆ ಎಚ್ಚರ ಎಚ್ಚರ ವಹಿಸುವುದು ಸೂಕ್ತ.
ತಡೆಗಟ್ಟುವುದು ಹೇಗೆ?– ಕಾಲು ಬಾಯಿ ಜ್ವರ ಕಾಣಿಸಿಕೊಂಡಾಗ ಇತರೆ ಜಾನುವಾರುಗಳೊಂದಿಗೆ ಕೊಟ್ಟಿಗೆಯಲ್ಲಿಯೇ ಕಟ್ಟುವ ಬದಲು, ರೋಗಪೀಡಿತ ಜಾನುವಾರು ಪ್ರತ್ಯೇಕ ಕಟ್ಟುವ ವ್ಯವಸ್ಥೆ ಮಾಡುವುದು. ಕೊಟ್ಟಿಗೆಯನ್ನು ಆಗಾಗ ಸ್ವಚ್ಛಗೊಳಿಸಿ.- ರೋಗ ಬಾಧಿತ ಜಾನುವಾರಿಗೆ ಕುಡಿಸಿದ ನೀರು, ಮೇವು ಆರೋಗ್ಯವಾಗಿರುವ ದನಗಳಿಗೆ ನೀಡಬೇಡಿ.- ಜ್ವರ ಕಾಣಿಸಿಕೊಂಡವುಗಳನ್ನು ಯಾವುದೇ ರೀತಿಯಾಗಿ ಇತರೆ ದನಗಳ ಸಂಪರ್ಕಕ್ಕೆ ಬರದಂತೆ ನೋಡಿಕೊಳ್ಳಿ.- ವರ್ಷಕ್ಕೆ ಎರಡು ಬಾರಿ ತಪ್ಪದೇ ಲಸಿಕೆ ಹಾಕಿಸಿ.- ಜ್ವರ ಕಾಣಿಸಿಕೊಂಡ ತಕ್ಷಣ ಪಶು ವೈದ್ಯರನ್ನು ಸಂಪರ್ಕಿಸಿ. ವೈದ್ಯರ ಸಲಹೆ ಇಲ್ಲದೆ ಯಾವುದೇ ಲಸಿಕೆ ಅಥವಾ ಔಷಧಿಗಳನ್ನು ಹಾಕಬಾರದು. ರೈತ ಬಾಂಧವರು ಹಾಗೂ ಜಾನುವಾರು ಮಾಲೀಕರು ಕಾರ್ಯಕ್ರಮದ ಉಪಯೋಗ ಪಡೆದುಕೊಳ್ಳಬೇಕು. ಈ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಸಹ ಮತ್ತೊಮ್ಮೆ ತಮ್ಮ ಗ್ರಾಮಗಳಲ್ಲಿ ನಿಗದಿಯಾದ ದಿನಾಂಕದಂದು ಲಸಿಕೆ ಮಾಡಿಸಬೇಕು. ರೋಗ ಬಂದ ಜಾನುವಾರುಗಳ ಶಕ್ತಿ ಕುಂದುತ್ತದೆ ಹಾಲು ನೀಡುವ ಪ್ರಮಾಣ ಕಡಿಮೆಯಾಗುತ್ತದೆ ಈ ರೋಗವನ್ನು ನಿಯಂತ್ರಿಸಲು ನಾಲ್ಕು ತಿಂಗಳ ಮೇಲ್ಪಟ್ಟ ಎಲ್ಲಾ ಹಸು ಎಮ್ಮೆ ಎತ್ತು ಕೋಣಗಳಿಗೆ ಲಸಿಕೆ ಹಾಕುವ ಮೂಲಕ ರೋಗ ನಿಯಂತ್ರಿಸಬಹುದಾಗಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಹುಚ್ಚು ನಾಯಿ ರೋಗದ ವಿರುದ್ಧ ಹಾಗೂ ಸಾಕು ನಾಯಿಗಳಿಗೆ ಲಸಿಕೆ ಹಾಕಲಾಗುವುದು
ಈ ಸಂದರ್ಭದಲ್ಲಿ ಗ್ರಾಮದ ದೇವಯ್ಯ ಸ್ವಾಮಿ, ವೆಂಕಟರಾವ್ ಕುಲಕರ್ಣಿ,ಶರಣಗೌಡ, ಸಿದ್ದು ಸಾಗರ್ ವಂಗದಾಳ, ಸಂಗಣ್ಣ ತಪೇದಾರ್, ಅಂಬರೀಶ್ ಗೌಡ ಮಾಲಿ ಪಾಟೀಲ್, ಅಂಬಲಪ್ಪ ಇಲಾಖೆಯ ರವಿಕುಮಾರ್, ಶಿವ ಶರಣಪ್ಪ ಮುರುಡಿ ಭಾಗವಹಿಸಿದ್ದರು