ಬೇವಿನಹಳ್ಳಿ(ಜೆ) ನಲ್ಲಿ ಸಮಾಜಕಾರ್ಯ ಶಿಬಿರ: ಬದುಕಿನ ಸಾರ್ಥಕತೆಗೆ ಮೌಲ್ಯಗಳು ಆಧಾರ,ಮುದ್ನೂರ.

ಕ್ರಾಂತಿ ವಾಣಿ ಶಹಾಪುರ.

ಮಾನವೀಯ ಮೌಲ್ಯಗಳು ಬದುಕಿಗೆ ಅವಶ್ಯವಾಗಿದ್ದು, ಯುವಜನರು ಅವುಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿರಬೇಕು. ಮೌಲ್ಯಗಳಿಲ್ಲದ ಜೀವನ ವ್ಯರ್ಥ.ಹೀಗಾಗಿ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕು ಕಟ್ಟಿಕೊಂಡಾಗ ಮಾತ್ರ ಬದುಕು ಸಾರ್ಥಕವೆನಿಸಲಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ತಿಳಿಸಿದರು.

ತಾಲೂಕಿನ ಬೇವಿನಹಳ್ಳಿ(ಜೆ) ಗ್ರಾಮದಲ್ಲಿ ಶಹಾಪುರದ ಶ್ರೀಸ್ವಾಮಿ ವಿವೇಕಾನಂದ ಎಂಎಸ್‌ಡಬ್ಲೂ ಸ್ನಾತಕೋತ್ತರ ಮಹಾವಿದ್ಯಾಲಯ ೨೦೨೨-೨೩ ನೇ ಶೈಕ್ಷಣಿಕ ಸಾಲಿನ ಪ್ರಥಮ ಸೆಮಿಸ್ಟರ್‌ನ ವಿದ್ಯಾರ್ಥಿಗಳ ಪ್ರಾಯೋಗಿಕ ವಿಷಯಗಳಲ್ಲಿ ಒಂದಾದ ಏಳು ದಿನಗಳ ಸಮಾಜ ಕಾರ್ಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಮೌಲ್ಯಗಳು ನಮ್ಮ ಬದುಕಿಗೆ ಒಂದು ಸುಂದರ ರೂಪು ಕೊಡುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಮೌಲ್ಯಗಳು ಸಹಕಾರಿ. ಮೌಲ್ಯಗಳ ಅಳವಡಿಕೆಯಿಂದ ಕುಟುಂಬ, ಸಮಾಜದಲ್ಲಿ ಭಾಂದವ್ಯ ವೃದ್ಧಿಯಾಗುತ್ತದೆ. ಆದ್ದರಿಂದಲೇ ಮೌಲ್ಯಗಳನ್ನು ಬದುಕಿನ ಆಧಾರ ಸ್ತಂಭಗಳಿದ್ದಂತೆ ಎನ್ನುತ್ತೇವೆ. ಮೌಲ್ಯಗಳು ಎಂದರೆ ವ್ಯಕ್ತಿಗಳಲ್ಲಿ ನೈತಿಕ ಸದ್ಗುಣಗಳಾದ ಶ್ರದ್ಧೆ, ಪ್ರಾಮಾಣಿಕತೆ, ಸತ್ಯ, ನ್ಯಾಯ, ನಿಷ್ಠೆ, ಸಚ್ಚಾರಿತ್ರö್ಯ, ಅಹಿಂಸೆ, ಸಹಕಾರ, ಸಹಿಷ್ಣುತೆ ಭಾವ, ಸತ್ಕಾರ್ಯಗಳೇ ಮಾನವೀಯ ಮೌಲ್ಯಗಳಾಗಿದ್ದು, ಇವೆಲ್ಲವನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ನಡೆದಾಗ ಮಾತ್ರ ಸಾರ್ಥಕತೆಯನ್ನು ಪಡೆಯಬಹುದಾಗಿದೆ.

ಗ್ರಾಮದಲ್ಲಿ ಸಾಮಾಜಿಕ ಕಾರ್ಯ ಶಿಬಿರ ನಡೆಯುತ್ತಿದ್ದು, ಗ್ರಾಮದ ಐತಿಹಾಸಿಕ ಸ್ಥಿತಿಗತಿ, ಪ್ರಸ್ತುತ ಸ್ಥಿತಿ ಮತ್ತು ಮುಖ್ಯವಾಗಿ ಗ್ರಾಮದಲ್ಲಿನ ಸಾಮಾಜಿಕ, ರಾಜಕೀಯ, ಆರ್ಥಿಕ ಸ್ಥಿತಿ ಕುರಿತು ಎಂಎಸ್‌ಡಬ್ಲೂ ವಿದ್ಯಾರ್ಥಿಗಳು ಅಧ್ಯಯನ ನಡೆಸಿ ಗ್ರಾಮದ ಅಭಿವೃದ್ಧಿ ಕಾರ್ಯಗಳೇನು.? ಹಿಂದುಳಿಯಲು ಕಾರಣವೇನು.? ಮತ್ತು ಗ್ರಾಮದ ವಿಕಸನ ಬಗ್ಗೆ ಅರಿವೂ ಮೂಡಿಸಲಿದ್ದಾರೆ. ಅದನ್ನು ಮನಗಂಡು ಗ್ರಾಮಾಭಿವೃದ್ಧಿಯತ್ತ ಹೆಜ್ಜೆ ಹಾಕಬೇಕು.

ಮೂಢ ನಂಬಿಕೆ ಅಳಿಸಬೇಕು ಆದರೆ ಮೂಡುವ ನಂಬಿಕೆಯನ್ನು ಗಟ್ಟಿಗೊಳಿಸುವದು ನಮ್ಮೆಲ್ಲರ ಕರ್ತವ್ಯವಾಗಿದೆ. ನಂಬಿಕೆಯAತ ಮೌಲ್ಯವನ್ನು ರೂಢಿಸಿಕೊಂಡಾಗ ಸಮಾಜ ಪರಸ್ಪರರಲ್ಲಿ ವಿಶ್ವಾಸ ವೃದ್ಧಿಯಾಗಿ ಯಾವುದೇ ಕೆಲಸ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಶರಣ ಸಾಹಿತಿ ಶಿವಣ್ಣ ಇಜೇರಿ ಮಾತನಾಡಿ, ದೇವರು ದಿಂಡರು ಎಂದು ಅಂಧಕಾರದಲ್ಲಿ ಮುಳುಗಬೇಡಿ, ನೀವು ಬೆವರು ಸುರಿಸಿ ದುಡಿದಾಗ ಹೊಟ್ಟೆ ತುಂಬ ಊಟ ಸಿಗುತ್ತದೆ. ಅದು ಬಿಟ್ಟು ದೇವರೆ ಎಲ್ಲವೂ ತಂದು ಕೊಡುತ್ತಾನೆಂದು ಮೈಗಳ್ಳತನ ಮಾಡಿದರೆ ಅದು ಮೂಢ ನಂಬಿಕೆಯಾಗುತ್ತದೆ.

ದೇವರು ಏನು ಮಾಡುವದಿಲ್ಲ. ದೇವರು ನಮ್ಮೊಳಗೆ ಇದ್ದಾನೆ. ನಿತ್ಯ ನಾವು ಕಾಯಕ ಮಾಡಿದಾಗ ನಾವು ಅಭಿವೃದ್ಧಿ ಹೊಂದಲು ಸಾಧ್ಯ. ಸರ್ವೋದಯ, ಗ್ರಾಮ ಸ್ವರಾಜ್ಯ ಕನಸುಗಾರ ಮಹಾತ್ಮ ಗಾಂದಿಜೀ ಹಾಗೂ ಲಾಲಬಹುದ್ದೂರ ಶಾಸ್ತಿçಯಂತ ಮಹಾತ್ಮ ಆದರ್ಶಗಳನ್ನು ಮೈಗೂಡಿಸಿಕೊಂಡು ನಡೆಯಬೇಕೆಂದು ಕರೆ ನೀಡಿದರು.

ಶಿಕ್ಷಕ ಭೀಮಣ್ಣ ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರ ಬಹುಮುಖ್ಯವಾಗಿದೆ. ಸಂಸ್ಕಾರ ಕೊಡದಿದ್ದಲ್ಲಿ ಮುಂದೆ ಭವ್ಯ ಭಾರತ ಬಹುದೊಡ್ಡ ಸಮಸ್ಯೆ ಎದುರಿಸಬೇಕಾದೀತು. ಮಕ್ಕಳಷ್ಟೆ ಅಲ್ಲದೆ ಯಾವುದೇ ಒಂದು ವಸ್ತುವಿಗೆ ಉತ್ತಮ ಸಂಸ್ಕಾರ ಕೊಟ್ಟಾಗ ಅದೊಂದು ರೂಪವಾಗಿ ತೋರ್ಪಡಲು ಸಾಧ್ಯವಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಗುತ್ತೇದಾರ, ಶಾಲಾ ಮುಖ್ಯೋಪಾಧ್ಯಯ ದೇವಿಂದ್ರಪ್ಪ, ಸಂಗನಗೌಡ ಬಿರೆದಾರ, ಭಾಗಣ್ಣ ಹುಲಕಲ್, ಅಮಲಪ್ಪ ವಡಿಗೇರಿ, ಮಲ್ಲೇಶಪ್ಪ ಶಹಾಪುರ, ಯೋಗಗುರು ವೀರೇಶ ಉಳ್ಳಿ, ಬಸನಗೌಡ ಮಾಲಿಪಾಟೀಲ್, ಶರಣಗೌಡ ಮಾಲಿಪಾಟೀಲ್, ಶರಣಪ್ಪಗೌಡ ದಿಗ್ಗಿ, ಆನಂದಪ್ಪಗೌಡ, ತಮ್ಮಣ್ಣ ಜಾಗೀರದಾರ, ಮಹದೇವ ದೊಡ್ಮನಿ, ಸಾಬಣ್ಣ ಪೂಜಾರಿ ಉಪಸ್ಥಿತರಿದ್ದರು. ಕಾಲೇಜಿನ ವಿಜಯಕುಮಾರ ವಜ್ರಗಿರಿ ಅಧ್ಯಕ್ಷತೆವಹಿಸಿದ್ದರು. ರಾಜೂ ನಿರೂಪಿಸಿದರು. ಶರಣು ಸ್ವಾಗತಿಸಿದರು. ಶಾಂಭವಿ ವಂದಿಸಿದರು. ಉಪನ್ಯಾಸಕಾರದ ಶ್ರೀಧರ, ಆಶಾದೇವಿ ಭಾಗವಹಿಸಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ