ವರದಿ: ನಾಗರಾಜ್ ನ್ಯಾಂತಿ
ಕ್ರಾಂತಿವಾಣಿ ವಾರ್ತೆ: ಸುರಪುರ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಗದಗಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಗರನಾಡಿನ ಸುರಪುರದ ಹಿರಿಯ ದುಂದುಮೆ ಪದದ ಹಾಡುಗಾರ ಲಕ್ಷ್ನಣ ಗುತ್ತೇದಾರ ಅವರಿಗೆ ಕೆ.ಆರ್. ಲಿಂಗಪ್ಪ ಜಾನಪದ ಪ್ರಶಸ್ತಿ ಪ್ರದಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ, ಕರ್ನಾಟಕದ ಜನಪದ ಗಾಯನ ಪರಂಪರೆಯನ್ನು ನಾಡಿಗೆಲ್ಲ ಹರಡಿದವರಲ್ಲಿ ಕೆ.ಆರ್. ಲಿಂಗಪ್ಪನವರು ಪ್ರಮುಖರು. ಅವರ ನೆನಪು ಜನ ಮನದಲ್ಲಿ ಉಳಿಸಲು ಅವರ ಮಕ್ಕಳು ಕೆ.ಆರ್. ಲಿಂಗಪ್ಪ ಜಾನಪದ ರಾಜ್ಯಮಟ್ಟದ ಪ್ರಶಸ್ತಿ ಆರಂಭಿಸಿದ್ದಾರೆ ಎಂದರು.
ಪ್ರಸಕ್ತ ಸಾಲಿನ ವರ್ಷದ ರಾಜ್ಯ ಮಟ್ಟದ ಕೆ.ಆರ್. ಲಿಂಗಪ್ಪ ಜಾನಪದ ಪ್ರಶಸ್ತಿಯನ್ನು ಯಾದಗಿರಿ ಜಿಲ್ಲೆಯ ಸುರಪುರ ಹಿರಿಯ ದುಂದುಮೆ ಕಲಾವಿದ ಲಕ್ಷ್ಮಣ ಗುತ್ತೇದಾರ ಅವರಿಗೆ ನೀಡಿದ್ದು, ಅತೀವ ಸಂತಸ ತಂದಿದೆ. ಲಕ್ಷ್ಮಣ ಗುತ್ತೇದಾರ ಅವರ ಕುಟುಂಬದ ೫ನೇ ತಲೆಮಾರಿನವರೆಗು ದುಂದುಮೆ ಪದ ಮುಂದುವರಿಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಅಕ್ಷರ ಕಲಿಯದ ಲಕ್ಷ್ಮಣ ಗುತ್ತೇದಾರ ಸುರಪುರ ಸಂಸ್ಥಾನದ ಕುರಿತಾಗಿ ಹಾಡುವ ದುಂದುಮೆ ಕೇಳಿ ಆಶ್ಚರ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸುರಪುರ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಶ್ತಿ ಪುರಸ್ಕೃತ ಲಕ್ಷ್ಮಣ ಗುತ್ತೇದಾರ ಅವರ ಕುರಿತು ಮಾತನಾಡಿದರು.
ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ, ಸಚಿವ ಎಚ್.ಕೆ. ಪಾಟೀಲ್, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅಪ್ಪಾರಾವ ಅಕ್ಕೋಣೆ, ಹಿರಿಯ ಸಾಹಿತಿಗಳಾದ ಡಾ. ವೀರಣ್ಣ ರಾಜೂರು, ಡಾ. ಸಿ. ವೀರಣ್ಣ ಸೇರಿದಂತೆ ಇತರರಿದ್ದರು.