ಸುರಪುರ: ವಿಜೃಂಭಣೆಯ ಶೌರ್ಯ ಜಾಗರಣಾ ಯಾತ್ರೆ

ಕ್ರಾಂತಿವಾಣಿ ವಾರ್ತೆ ಸುರಪುರ: ರಾಜಕಾರಣಗಳ ಮತಬ್ಯಾಂಕ್ ವ್ಯಾಮೋಹದಿಂದ ನಮ್ಮ ಸನಾತನ ಧರ್ಮ ಈಗ ಆತಂಕ ಎದುರಿಸುವಂತಾಗಿದೆ. ಕಾರಣ ಹಿಂದು ಬಾಂಧವರು ನಮ್ಮ ಧರ್ಮದ ಬಗ್ಗೆ ಶ್ರದ್ಧೆ ಬೆಳೆಸಿಕೊಳ್ಳಬೇಕು ಎಂದು ಧರ್ಮ ಜಾಗರಣಾ ಪ್ರಾಂತ ಪ್ರಮುಖ ಸ್ವತಂತ್ರ ಶಿಂಧೆ ಹೇಳಿದರು.


ನಗರದಲ್ಲಿ ವಿಶ್ವ ಪರಿಷತ್ ಮತ್ತು ಬಜರಂಗದಳ ಹಮ್ಮಿಕೊಂಡಿದ್ದ ಶೌರ್ಯ ಜಾಗರಣಾ ಯಾತ್ರೆಯಲ್ಲಿ ಅವರು ಮಾತನಾಡಿದರು.
ಈ ಯಾತ್ರೆಯ ಉದ್ದೇಶ ದೇಶಕ್ಕಾಗಿ ಸ್ವಾಭಿಮಾನದಿಂದ ಬದುಕುವ ಸಂಕಲ್ಪ ತೊಡುವುದಾಗಿದೆ. ನಮ್ಮ ಪೂರ್ವಜರ ಬಗ್ಗೆ ಗೌರವ ಭಾವನೆ ಬೆಳೆಸಿಕೊಳ್ಳುವುದು. ಸಾಮಾಜಿಕ ಸಾಮರಸ್ಯೆ ಮೂಡಿಸುವುದು. ಬಲಿಷ್ಠ ಹಿಂದು ರಾಷ್ಟç ನಿರ್ಮಾಣ ಕಾರ್ಯದಲ್ಲಿ ತೊಡಗುವುದಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ರುಕ್ಮಾಪುರ ಹಿರೇಮಠ ಗುರುಶಾಂತಮೂರ್ತಿ ಶಿವಾಚಾರ್ಯರು ಮಾತನಾಡಿ, ಯಾವುದೇ ದುಷ್ಟ ಶಕ್ತಿಗಳಿಂದ ಹಾನಿಯಾಗದಷ್ಟು ಪ್ರಬಲವಾಗಿದೆ ನಮ್ಮ ಹಿಂದು ಧರ್ಮ. ಅಧರ್ಮದ ವಿರುದ್ಧ ಧರ್ಮ ಸ್ಥಾಪನೆಗಾಗಿ ಹೋರಾಟ ಮಾಡು ಎಂದು ಸಾಕ್ಷಾತ್ ಶ್ರೀಕೃಷ್ಣನೆ ಹೇಳಿದ್ದಾನೆ’ ಎಂದು ಉಲ್ಲೇಖಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಶಿವಣ್ಣ ಬೋಯಿಕಟ್ಟಿಮನಿ ಮಾತನಾಡಿ, ‘ಅಯೋಧ್ಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಮುಗಿಯುತ್ತಾ ಬಂದಿದೆ. ಮಂದಿರ ಉದ್ಘಾಟನೆಯ ಸಂತಸದಲ್ಲಿ ಯಾತ್ರೆ ಎಲ್ಲೆಡೆ ನಡೆದಿದೆ. ನಗರದಲ್ಲಿ ಅದ್ಧೂರಿ ಸ್ವಾಗತ ದೊರೆತಿರುವುದು ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿದೆ ಎಂದು ತಿಳಿಸಿದರು.
ವಿಶ್ವ ಹಿಂದು ಪರಿಷತ್ ತಾಲ್ಲೂಕು ಕಾರ್ಯದರ್ಶಿ ಗುರುನಾಥರೆಡ್ಡಿ ಶೀಲವಂತ ಸ್ವಾಗತಿಸಿದರು. ಎಚ್. ರಾಠೋಡ ನಿರೂಪಿಸಿದರು. ರಾಜೇಂದ್ರ ಯಾದಗಿರಿ ವಂದಿಸಿದರು.
ಬಲಭೀಮ ಕುಲಕರ್ಣಿ, ವಿರೇಶ ಪ್ಯಾಪ್ಲಿ, ಸಂಜೀವಕುಮಾರ, ಅಂಬಯ್ಯ ಶಹಾಪುರಕರ, ಲಕ್ಷ್ಮಣ ಬೋವಿ, ಸಿದ್ದು ನಾಯ್ಕೋಡಿ, ಶ್ರೀನಿವಾಸ ಕಟ್ಟಿಮನಿ, ಸಂಪತಕುಮಾರ, ಮರೆಪ್ಪ ದಾಯಿ, ಮಂಜುನಾಥ ಧೊತ್ರೆ, ಭರತ ಟೊಣಪೆ, ಸಿದ್ದನಗೌಡ ಹೆಬ್ಬಾಳ, ಶರಣು, ಶರಣಪ್ಪ ಕಮ್ಮಾರ ಇತರರು ಇದ್ದರು.
ಯಾತ್ರೆಯನ್ನು ಗರುಡಾದ್ರಿ ಕಲಾ ಮಂದಿರದ ಹತ್ತಿರದ ಆಂಜನೇಯ ದೇಗುಲದಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು. ಗುರುಶಾಂತಮೂರ್ತಿ ಶಿವಾಚಾರ್ಯರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಯಾತ್ರೆ ಗಾಂಧಿವೃತ್ತ ಮಾರ್ಗವಾಗಿ ಅರಮನೆ ರಸ್ತೆಯ ಮುಖಾಂತರ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣಕ್ಕೆ ತಲುಪಿತು. ಗೋಪೂಜೆ ಸಲ್ಲಿಸಿದ ನಂತರ ವೇದಿಕೆ ಕಾರ್ಯಕ್ರಮ ಆರಂಭವಾಯಿತು.
ಎಲ್ಲೆಡೆ ಭಗವಾ ಧ್ವಜಗಳು, ಪರಾರಿಗಳು ರಾರಾಜಿಸುತ್ತಿದ್ದವು. ಸಾವಿರಾರು ಕಾರ್ಯಕರ್ತರ ಘೋಷಣೆ ಮುಗಿಲು ಮುಟ್ಟಿದ್ದವು. ಪೊಲೀಸರು ಹೆಚ್ಚಿನ ಬಂದೋಬಸ್ತ್ ಕಲ್ಪಿಸಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ