ಯುವಕರು ದುಶ್ಚಟದಿಂದ ದೂರವಿರಿ: ರಾಜಾ ವೇಣುಗೋಪಾಲ ನಾಯಕ

ಕ್ರಾಂತಿವಾಣಿ ವಾರ್ತೆ ಸುರಪುರ: ಇಂದಿನ ಯುವ ಸಮುದಾಯ ದುಶ್ಚಟಗಳಿಗೆ ದಾಸರಾಗುತ್ತಿದ್ದು, ಇದರಿಂದ ಜೀವನ ನಾಶವಾಗುತ್ತದೆ. ನಿಮ್ಮನ್ನು ನಂಬಿರುವ ಕುಟುಂಬ ಅನಾವಶ್ಯಕವಾಗಿ ತೊಂದರೆ ಅನುಭವಿಸುವಂತಾಗುತ್ತದೆ. ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ದುಶ್ಚಟ ಮುಕ್ತ ಸಮಾಜಕ್ಕೆ ಕಂಕಣಬದ್ಧರಾಗಬೇಕು ಎಂದು ಕಾಂಗ್ರೆಸ್ ಯುವ ಮುಖಂಡ, ಶಾಸಕರ ಪುತ್ರ ರಾಜಾ ವೇಣುಗೋಪಾಲ ನಾಯಕ ಹೇಳಿದರು.

ನಗರದ ರಂಗಂಪೇಟೆಯ ವೀರಶೈವ ಕಲ್ಯಾಣಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಂಯುಕ್ತಾಶ್ರಯದಲ್ಲಿ ಬುಧವಾರ ಗಾಂಧಿ ಸ್ಮರಣೆ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚಟುಗಳು ಮನುಷ್ಯನನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಕುಗ್ಗುವಂತೆ ಮಾಡುತ್ತವೆ. ಇವುಗಳ ವಿರುದ್ಧ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ಹೆಮ್ಮೆಯಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಜಿಲ್ಲಾ ನಿರ್ದೇಶಕ ಕಮಲಾಕ್ಷ ಮಾತನಾಡಿ, ಮಹಾತ್ಮ ಗಾಂಧಿಯವರು ದುಶ್ಚಟ ಮುಕ್ತ ಸಮಾಜದ ನಿರ್ಮಾಣದ ಕನಸು ಕಂಡಿದ್ದರು. ಅವರಂತೆ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆ ಅವರದ್ದು ಆಗಿದೆ. ಒಬ್ಬ ವ್ಯಕ್ತಿಗೆ ತನ್ನ ಜೀವನದಲ್ಲಿ ಸುಂದರ ಬದುಕು ಕಟ್ಟಿಕೊಳ್ಳಲು ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯಕ್ರಮಗಳು ಸಹಾಯವಾಗುತ್ತಿದೆ.
ಉಳಿತಾಯದಿಂದ ಪ್ರಾರಂಭ ಮಾಡಿ ಒಂದು ಕುಟುಂಬಕ್ಕೆ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಶ್ರೀ. ಗುರುಶಾಂತ ಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜದ ಒಳಿತಿಗಾಗಿ ಹೆಗ್ಗಡೆಯವರ ಕಾರ್ಯಗಳು ಸಮಾಜಮುಖಿಯಾಗಿವೆ. ಒಂದು ಸಂಸಾರ ಅತ್ಯಂತ ನೆಮ್ಮದಿ ಜೀವನ ನಡೆಸಲು ಧರ್ಮಸ್ಥಳದ ಯೋಜನೆಗಳು ಸಹಕಾರಿಯಾಗುತ್ತಿವೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಅಮಾರಯ್ಯ ಸ್ವಾಮಿಯವರು ದುಶ್ಚಟ ಭಿಕ್ಷೆ ಸದ್ಗುಣ ದೀಕ್ಷೆ ಎಂಬ ವಿಷಯದ ಬಗ್ಗೆ ಒಂದು ಕುಟುಂದ ವಿಶೇಷ ಉಪನ್ಯಾಸ ನೀಡಿದರು.
ಕಲಬುರಗಿ ಯಾದಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ್ ಸಜ್ಜನ್ ಮಾತನಾಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೂಗುರೇಶ್ ವಾರದ್ ಅಧ್ಯಕ್ಷತೆ ವಹಿಸಿದ್ದರು.
ವಿಶೇಷವಾಗಿ ಕೃಷಿ ಮಾಡಿದ, ಸ್ವ ಉದ್ಯೋಗ ಮಾಡಿದ ಫಲಾನುಭವಿಗಳಿಗೆ ಅನುದಾನ ಹಾಗೂ ವಿಕಲ ಚೇತನರಿಗೆ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಸಲಕರಣೆ ವಿತರಿಸಲಾಯಿತು.
ತಾಲೂಕಿನ ಯೋಜನಾಧಿಕಾರಿ ಸಂತೋಷ್ ಎ. ಎಸ್., ಮೇಲ್ವಿಚಾರಕ ಮಂಜುನಾಥ ನಿರೂಪಿಸಿದರು. ವಲಯ ಮೇಲ್ವಿಚಾರಕಿ ಸುಮಂಗಲಾ ವಂದಿಸಿದರು. ಗಣ್ಯರು ಮತ್ತು ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಸದಸ್ಯರು ಒಕ್ಕೂಟದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ