ವರದಿ: ನಾಗರಾಜ್ ನ್ಯಾಮತಿ
ಅ. 15 ರಿಂದ 23ರವರೆಗೆ ನಾಡಹಬ್ಬ ಉತ್ಸವ
ಕ್ರಾಂತಿವಾಣಿ ವಾರ್ತೆ ಸುರಪುರ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಸಿದ್ಧಿ ಪಡೆದಿರುವ ೩೭ನೇ ನಾಡಹಬ್ಬ ಉತ್ಸವ ಆಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲು ತೀರ್ಮಾನಿಸಲಾಗಿದ್ದು, ಸಗರ ನಾಡಿನ ಪ್ರತಿಯೊಬ್ಬರೂ ಯಶಸ್ಸಿಗೆ ಕೈಜೋಡಿಸಿಬೇಕು ಎಂದು ನಾಡಹಬ್ಬ ಉತ್ಸವ ಅಧ್ಯಕ್ಷ ರಾಜಾ ಮುಕುಂದ ನಾಯಕ ಹೇಳಿದರು.
ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ ೧೫ರಿಂದ ೨೩ರವರೆಗೆ ನಾಡಹಬ್ಬ ಉತ್ಸವ ಜರುಗಲಿದೆ. ಅ. ೧೫ರಂದು ಬೆಳಗ್ಗೆ ೧೧ ಗಂಟೆಗೆ ನಾಡದೇವಿ ಭಾವಚಿತ್ರ ಹಾಗೂ ವಿವಿಧ ಶಾಲೆ ಮತ್ತು ಸಂಘಸಂಸ್ಥೆಗಳೊಂದಿಗೆ ಶ್ರೀ ವೇಣುಗೋಪಾಲಸ್ವಾಮಿ ದೇಗುಲದಿಂದ ಗರುಡಾದ್ರಿ ಕಲಾಮಂದಿರದವರೆಗೂ ಮೆರವಣ ಗೆ ನಡೆಯಲಿದೆ ಎಂದರು.
ಗರುಡಾದ್ರಿ ಕಲಾಮಂದಿರದಲ್ಲಿ ನಾಡದೇವಿ ಸ್ಥಾಪನೆ, ಪೂಜೆ ಹಾಗೂ ಅನ್ನಪ್ರಸಾದ ವಿತರಣೆ ನಡೆಯಲಿದೆ. ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ರಾಜಾ ಪಾಮ ನಾಯಕ ಉದ್ಘಾಟಿಸುವರು. ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ, ರಾಜಾ ಮುಕುಂದ ನಾಯಕ, ಮಾಜಿ ಸಚಿವರ ರಾಜಾ ಮದನಗೋಪಾಲ ನಾಯಕರ ಪುತ್ರ ರಾಜಾ ಹರ್ಷವರ್ಧನ ನಾಯಕ, ಕಿಶೋರಚಂದ್ ಜೈನ್, ಪ್ರಕಾಶ ಸಜ್ಜನ್, ಸುರೇಶ ಸಜ್ಜನ್ ಪಾಲ್ಗೊಳ್ಳುವರು. ಅ. ೧೫ರಿಂದ ೨೩ರವರೆಗೆ ವಿವಿಧ ಶಾಲೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಅ. ೨೩ ರಂದು ಸಮಾರೋಪ ಸಮಾರಂಭ ನಡೆಯಲಿದೆ. ನಾಡಹಬ್ಬ ಸಮಿತಿ ಅಧ್ಯಕ್ಷ ರಾಜಾ ಮುಕುಂದ ನಾಯಕ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ನರಸಿಂಹ ನಾಯಕ ರಾಜೂಗೌಡ, ಕಸಾಪ ಅಧ್ಯಕ್ಷ ಶರಣಬಸವ ಯಾಳವಾರ, ಜಯಲಲಿತಾ ಪಾಟೀಲ್, ವಸಂತ ಶಹಾಬಾದಕರ್, ಬಸವರಾಜ ಜಮದ್ರಖಾನಿ, ಜೆ. ಆಗಷ್ಟಿನ್, ಇತರರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಬಸವರಾಜ ಜಮದ್ರಖಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಅಧ್ಯಕ್ಷ ಶರಣಬಸಪ್ಪ ಯಾಳವಾರ ಸ್ವಾಗತಿಸಿದರು. ಶಿವಕುಮಾರ ಮಸ್ಕಿ ನಿರೂಪಿಸಿದರು. ರಾಜಶೇಖರ ದೇಸಾಯಿ ವಂದಿಸಿದರು. ಸಮಿತಿ ಗೌರವಾಧ್ಯಕ್ಷ ರಾಜಾ ಪಾಮ ನಾಯಕ, ಬಸವರಾಜ ನಿಷ್ಠಿ ದೇಶಮುಖ, ಜಯಲಲಿತಾ ಪಾಟೀಲ್, ಗೋವರ್ಧನ ಝಂವ್ಹಾರ ಇತರರಿದ್ದರು.