ಹಿರಿಯ ನಾಗರಿಕರ ದಿನಾಚರಣೆ:ಹಿರಿಯರು ಮನೆಯ ಅಮೂಲ್ಯರತ್ನವಿದ್ದಂತೆ : ನ್ಯಾ.ಬಸವರಾಜ

ಕ್ರಾಂತಿವಾಣಿ ವಾರ್ತೆ ಶಹಾಪುರ.

ಹಿರಿಯರಿಲ್ಲದ ಮನೆ ಇಲ್ಲ. ಗುರುವಿಲ್ಲದ ಮಠ ಇಲ್ಲ ಎನ್ನುವ ಗಾದೆಯಿಂದ ಹಿರಿಯರ ಮಹತ್ವ ತಿಳಿಯುತ್ತದೆ. ಅವರು ಮನೆಯ ಅಮೂಲ್ಯ ರತ್ನವಿದ್ದಂತೆ ಎಂದು ಹೆಚ್ಚುವರಿ ನ್ಯಾಯಾಧೀಶ ಬಸವರಾಜ್ ತಿಳಿಸಿದರು.

ತಾಲೂಕ ಕಾನೂನು ಸೇವಾ ಸಮಿತಿ ತಾಲೂಕ ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಸಭಾಂಗಣದಲ್ಲಿ ಆಯೋಜಿಸಲಾದ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯರ ಶುಭ ಹಾರೈಕೆಯೆ ಕಿರಿಯರಿಗೆ ಶ್ರೀರಕ್ಷೆ ಮತ್ತು ಶಕ್ತಿಯಾಗಿದೆ. ಹಿರಿಯರ ಅನುಭವ ಸ್ಪೂರ್ತಿ, ಮಾರ್ಗದರ್ಶನ, ಸಂಸಾರದಲ್ಲಿ ಹಿರಿಯರ ಪಾತ್ರದ ಕುರಿತು ಯುವ ಪೀಳಿಗೆ ಮನವರಿಕೆ ಮಾಡಿಕೊಡುವುದು ಪ್ರತಿಯೊಬ್ಬರ ಕರ್ತವ್ಯ. ಇದರಿಂದ ಉತ್ತಮ ಸಂಸ್ಕøತಿ ಪರಂಪರೆ ಬೆಳೆದು ಕುಟುಂಬಗಳು ಶಾಂತಿಯಿಂದ ನೆಮ್ಮದಿಯಿಂದ ಬದುಕಲು ಸಾಧ್ಯ. ಗುರು-ಹಿರಿಯರ ಬಗ್ಗೆ ಪೂಜ್ಯನೀಯ ಭಾವನೆಯಿಂದ ನಡೆದುಕೊಳ್ಳುವುದರ ಮೂಲಕ ಸಂಸ್ಕಾರವಂತರಾಗಬೇಕು. ಹಿರಿಯರ ಆಶೀರ್ವಾದವೇ ಕಿರಿಯರ ಅಭ್ಯುದಯಕ್ಕೆ ಕಾರಣ ಎಂದು ಅವರು ತಿಳಿಸಿದರು

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಸಿವಿಲ್ ನ್ಯಾಯಾಧೀಶೆ ಕು. ಶೋಭಾ ಅವರು, ಮಾನವೀಯತೆ ಮತ್ತು ಮನುಷ್ಯತ್ವದ ಕೊರತೆಯಿಂದ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಇಂದಿನ ಯುವ ಸಮುದಾಯ ತಂದೆ-ತಾಯಿಗಳನ್ನು ಮರಣದ ನಂತರ ಪೂಜಿಸುವ ಬದಲು ಬದುಕಿರುವಾಗಲೇ ಪ್ರೀತಿಯಿಂದ ಕಾಣುವ ಗುಣ ಬೆಳೆಸಿಕೊಳ್ಳಬೇಕು. ತಂದೆ ತಾಯಿಯರನ್ನು ಗೌರವದಿಂದ ಕಾಣುವ ವ್ಯಕ್ತಿ ಸಮಾಜದಲ್ಲಿ ಗೌರವಯುತವಾಗಿ ಬದುಕುತ್ತಾನೆ ಎಂದು ಅವರು ಹೇಳಿದರು.

ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಹಿರಿಯ ನ್ಯಾಯವಾದಿ ಶ್ರೀನಿವಾಸ್ ಕುಲಕರ್ಣಿ ಅವರು, ಹಿರಿಯರ ಧೈರ್ಯ, ತಾಳ್ಮೆ, ಅವರು ಹೊಂದಿರುವ ಜವಾಬ್ದಾರಿಯ ಮೌಲ್ಯಗಳು ಯುವ ಪೀಳಿಗೆಗಿಂತ ಉತ್ತಮವಾಗಿವೆ. ತಮ್ಮ ಹಿರಿಯರ ಮಾರ್ಗದರ್ಶನದಲ್ಲಿ ಇರುವವರು ತಮ್ಮ ಮಾರ್ಗದಿಂದ ಎಂದಿಗೂ ದೂರವಾಗುವುದಿಲ್ಲ. ಹಿರಿಯರಿರುವ ಕುಟುಂಬದ ಸಂಸಾರದಲ್ಲಿ ಸಾಮರಸ್ಯ, ಸಹಕಾರ, ತಾಳ್ಮೆಯನ್ನು ಕಾಣುತ್ತೇವೆ. ಪ್ರತಿಯೊಬ್ಬರು ಹಿರಿಯರನ್ನು ಗೌರವಿಸುವ ಸಂಸ್ಕಾರ ಕಲಿತುಕೊಳ್ಳಬೇಕು.ಹಿರಿಯ ನಾಗರಿಕರ ಬಗ್ಗೆ ಅಸಡ್ಡೆ, ಅಗೌರವದ ಭಾವನೆ ತೋರದೆ ಅವರ ಮಾರ್ಗದರ್ಶನ ಪಡೆದು ಉನ್ನತಿ ಸಾಧಿಸಬೇಕು ಎಂದು ಕಿರಿಯರಿಗೆ ಕಿವಿ ಮಾತು ಹೇಳಿದರು

ಈ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪೊಲೀಸ್ ಇನ್ಸ್ಪೆಕ್ಟರ್ ಎಸ್ ಎಮ್ ಪಾಟೀಲ್ ಅವರು, 20, 25 ವರ್ಷ ಗಳ ಹಿಂದೆ ಅವಿಭಕ್ತ ಕುಟುಂಬ ವ್ಯವಸ್ಥೆ ಹೆಚ್ಚಾಗಿದ್ದರಿಂದ ಮನೆಯಲ್ಲಿ ಹಿರಿಯರ ಅನುಭವ ಹಾಗೂ ಅವರ ಮಾರ್ಗದರ್ಶನ ಪಡೆದು ಸಮಾಜ ಗೌರವಿಸುವಂತಹ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಉತ್ತಮ ಜೀವನ ಸಾಗಿಸುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಕ್ಕಳನ್ನು ಪಾಲನೆ-ಪೋಷಣೆ ಮಾಡಿ ಪಾಲಕರು ಅರೆ ಹೊಟ್ಟೆ ಉಂಡು ಸಂಕಷ್ಟದಲ್ಲೂ ವಿದ್ಯಾವಂತರನ್ನಾಗಿ ಮಾಡುತ್ತಾರೆ. ಆದರೆ, ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಹೆತ್ತ ತಂದೆ, ತಾಯಿಯನ್ನೇ ಮರೆಯುತ್ತಾರೆ. ಅಂಥ ದಯನೀಯ ಸಂದರ್ಭದಲ್ಲಿ ವೃದ್ಧಾಶ್ರಮ ನೆರವಿಗೆ ಬರುತ್ತದೆ. ಆದರೆ, ಮುಂದೊಂದು ದಿನ ತಂದೆ ತಾಯಿಯರನ್ನು ಹೊರಗೆ ಹಾಕಿದ ಮಕ್ಕಳಿಗೂ ವೃದ್ಧಾಶ್ರಮವೇ ಗತಿ ಎನ್ನುವುದನ್ನು ಅವರು ಮರೆಯುತ್ತಾರೆ.ಹಿರಿಯರನ್ನು ಗೌರವಿಸುತ್ತೇವೆ ಎಂದು ಪ್ರತಿಯೊಬ್ಬರು ಇಂದು ಪ್ರತಿಜ್ಞೆ ಮಾಡೋಣ ಎಂದರು.

ಈ ಕಾರ್ಯಕ್ರಮದಲ್ಲಿ, ವಕೀಲರ ಸಂಘದ ಅಧ್ಯಕ್ಷ ಸಂತೋಷ್ ದೇಶಮುಖ್, ಕಾರ್ಯದರ್ಶಿ ಭೀಮನಗೌಡ ಪಾಟೀಲ, ಸರಕಾರಿ ಸಹಾಯಕ ಅಭಿಯೋಜಕರಾದ ದಿವ್ಯರಾಣಿ, ವೈ.ಬಿ.ದೇಸಾಯಿ, ಪ್ಯಾನಲ್ ವಕೀಲೆ ಸತ್ಯಮ್ಮ ಸೇರಿದಂತೆ ಪೋಲಿಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಮತ್ತು ಹಿರಿಯ ನಾಗರಿಕರು ಭಾಗವಹಿಸಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ