ವರದಿ: ನಾಗರಾಜ್ ನ್ಯಾಮತಿ
ಕ್ರಾಂತಿವಾಣಿ ವಾರ್ತೆ
ಸುರಪುರ: ಅಮರಶಿಲ್ಪಿ ಜಕಣಚಾರಿ ಕಾಲಘಟ್ಟದಲ್ಲಿ ನಿರ್ಮಿಸಲಾದ ತಿಂಥಣ ಮೌನೇಶ್ವರ ದೇವಸ್ಥಾನ ಬಲಭಾಗದಲ್ಲಿರುವ ಈಶ್ವರ ದೇಗುಲದ ಮೇಲ್ಛಾವಣ ಮೇಲಿದ್ದ ೪ ಅಡಿ ಎತ್ತರದ ಗೋಪುರವನ್ನು ನಿಧಿ ಆಸೆಗಾಗಿ ನೆಲಸಮ ಮಾಡಿದ ಘಟನೆ ತಿಂಥಣ ಯ ಮೌನೇಶ್ವರ ದೇಗುಲದಲ್ಲಿ ಕಳೆದ ೨೦ ದಿನದ ಹಿಂದೆ ನಡೆದಿದೆ ಎನ್ನಲಾಗುತ್ತಿದೆ.
ಈಶ್ವರ ಗುಡಿಗೆ ಹೋಗಲು ಯಾವುದೇ ಮೆಟ್ಟಿಲುಗಳಿಲ್ಲ. ಏಣ ಯನ್ನು ಬಳಸಿ ದೇಗುಲದ ಮೇಲ್ಛಾವಣ ಏರಿದ್ದಾರೆ. ಹಾರಿ ಮತ್ತು ಪಿಕಾಶಿ ಬಳಸಿ ಗೋಪುರವನ್ನು ಧ್ವಂಸಗೊಳಿಸಿದ್ದಾರೆ. ಇದರಿಂದ ಪುರಾತನ ದೇಗುಲಗಳ ಸಂರಕ್ಷಣೆ ಯಾರ ಹೊಣೆ ಎಂಬಂತಾಗಿದೆ.
ಗೋಪುರ ಧ್ವಂಸ ಮಾಡಿದವರು ನಾಲ್ಕೆöÊದು ಜನರಿರುವ ಶಂಕೆಯಿದ್ದು, ಈಗ ಇಬ್ಬರು ಮಾತ್ರ ಸಿಲುಕಿದ್ದಾರೆ. ಇಡೀ ಗ್ರಾಮಸ್ಥರು ಆರೋಪ ಮಾಡಿದ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದ ತಹಸೀಲ್ದಾರ್ ಕೆ. ವಿಜಯಕುಮಾರ ಅವರಿಗೆ ದೂರು ನೀಡಲಾಗಿತ್ತು. ಈ ಮೇರೆಗೆ ತಹಸೀಲ್ದಾರ್ ಶುಕ್ರವಾರ ದೇವಸ್ಥಾನಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು.
ದೇವಸ್ಥಾನ ಸಮಿತಿ ಮ್ಯಾನೇಜರ್ ಶಿವಾನಂದ, ಸಂಗಯ್ಯ ಸಾಧು ಯಾವಾಗಲೂ ಗುಡಿಯಲ್ಲಿ ಇರುತ್ತಿದ್ದರು. ನಿಧಿ ಆಸೆಗಾಗಿ ದೇವಸ್ಥಾನದ ಗೋಪುರವನ್ನು ಒಡೆಯಲಾಗಿದೆ ಎಂದು ಗ್ರಾಮಸ್ಥರು ದೂರಿದಾಗ ಸಂಗಯ್ಯ ಸಾಧು ಕೃತ್ಯ ಒಪ್ಪಿಕೊಂಡಿದ್ದು, ದೇವಸ್ಥಾನ ನಿರ್ವಾಹಕ ಶಿವಾನಂದ ಅವರು ಒಪ್ಪಿಕೊಂಡಿಲ್ಲ. ಬಳಿಕ ಸಭೆಯಲ್ಲಿ ಇಬ್ಬರನ್ನು ಪೊಲೀಸರ ಸುಪರ್ದಿಗೆ ಒಪ್ಪಿಸಲಾಗುವುದು ಎಂಉದಾಗಿ ಹೇಳಿ ಅವರನ್ನು ಕರೆದುಕೊಂಡು ಹೋಗಿದ್ದಾರೆ.
ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ ತಿಂಥಣ ಯ ಗ್ರಾಪಂ ಸದಸ್ಯ ಭೈರಣ್ಣ ಅಂಬಿಗ, ಈಶ್ವರ ದೇವಸ್ಥಾನ ಮೇಲಿನ ಗೋಪುರ ಹೊರಗಿನವರಿಂದ ಹೊಡೆಲು ಸಾಧ್ಯವಿಲ್ಲ. ಒಳಗಿನವರೇ ಕೆಲಸ ಮಾಡಿದ್ದಾರೆ. ಇಬ್ಬರು ದೊರಕಿದ್ದು, ಇದರಲ್ಲಿ ಒಬ್ಬರು ಒಪ್ಪಿಕೊಂಡಿದ್ದಾರೆ. ಇವರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯಾಸತ್ಯತೆ ತಿಳಿಯುತ್ತದೆ. ತಹಸೀಲ್ದಾರ್ ಅವರು ದೂರು ವಿಫಲವಾದರೆ ಗ್ರಾಮದ ವತಿಯಿಂದಲೇ ದೂರು ನೀಡುತ್ತೇವೆ. ಐತಿಹಾಸಿಕ ದೇವಸ್ಥಾನ ಉಳಿಸಲು ಎಂತಹ ಹೋರಾಟಕ್ಕೂ ಸಿದ್ಧರಿದ್ದೇವೆ. ಶೀಘ್ರದಲ್ಲೇ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.
ಗ್ರಾಮಸ್ಥರು ಹೇಳಿರುವಂತೆ ನಿಧಿ ಆಸೆಗಾಗಿ ಗೋಪುರ ಒಡೆದಿಲ್ಲ. ದೇಗುಲದ ಮ್ಯಾನೇಜರ್ ಅವರ ಮೇಲೆ ಗ್ರಾಮಸ್ಥರಿಗೆ ಅಸಮಾಧಾನವಿದೆ ಎಂಬುದು ತಿಳಿದು ಬಂದಿದೆ. ದೇಗುಲದ ಮೇಲೆ ನಿಧಿ ಇರಲು ಸಾಧ್ಯವಿಲ್ಲ ಎಂಬುದಾಗಿ ತಹಸೀಲ್ದಾರ್ ಕೆ. ವಿಜಯಕುಮಾರ ತಿಳಿಸಿದ್ದಾರೆ.
ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ಸಾಹುಕಾರ, ಗ್ರಾಪಂ ಸದಸ್ಯರಾದ ಭೈರಣ್ಣ ಅಂಬಿಗ, ಮಾರುತಿ, ಗ್ರಾಪಂ ಮಾಜಿ ಅಧ್ಯಕ್ಷ ಸಲೀಮ್‌ಸಾಬ್ ಕಂಬಾರ, ದೇವಸ್ಥಾನ ಸಮಿತಿ ಸದಸ್ಯರಾದ ಮಲ್ಲಪ್ಪ ಕುರ್ಲಿ, ವೆಂಕಟೇಶ ಯರಡೋಣ , ಪದ್ಮ ಚಂದ್ರಶೇಖರ, ಮುಖಂಡರಾದ ಅಮರಪ್ಪ ಗೋಡಿಕಾರ, ನಿಂಗಣ್ಣ ಜೋಶಿ, ಮಾನಯ್ಯಗೌಡ ದಳಪತಿ, ತಿಪ್ಪಣ್ಣ ಕುರ್ಲಿ ಸೇರಿದಂತೆ ಇತರರಿದ್ದರು.
—ಕೋಟ್—
ನಿಧಿ ಆಸೆಗಾಗಿ ಪುರಾತನ ದೇಗುಲವನ್ನು ಒಡೆದು ಹಾಕಿರುವ ಆರೋಪಿಗಳನ್ನು ಪತ್ತೆ ಮಾಡಬೇಕು. ಕೂಲಂಕಷ ತನಿಖೆ ನಡೆಸಬೇಕು. ಒಡೆದು ಹೋಗಿರುವ ದೇಗುಲವನ್ನು ಮರಳಿ ಪುನರಸ್ಥಾಪಿಸಬೇಕು. ಈ ಬಗ್ಗೆ ದೇವಸ್ಥಾನ ಆಡಳಿತ ಅಧಿಕಾರಿಗಳು ನಡೆದುಕೊಳ್ಳುವ ರೀತಿ ಅನುಮಾನ ಮೂಡಿಸುತ್ತಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸದಿದ್ದರೆ ಗ್ರಾಮದ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗ್ರಾಮದ ಹಿರಿಯ ತಿಮ್ಮಯ್ಯ ಕಾವಲ್ದಾರ ಎಚ್ಚರಿಸಿದ್ದಾರೆ.
ಡಿವೈ ಎಸ್ ಪಿ: ಪುರಾತನ ದೇಗುಲ ಒಡೆಯುವುದು ಅಪರಾಧವಾಗುತ್ತದೆ. ಒಬ್ಬ ವ್ಯಕ್ತಿಯನ್ನು ಪೊಲೀಸ ಠಾಣೆಗೆ ಕರೆ ತರಲಾಗಿದೆ. ತಹಸೀಲ್ದಾರ್ ದೂರು ನೀಡಿದರೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿವೈಎಸ್ ಪಿ ಜಾವೀದ್ ಇನಾಮದಾರ್ ತಿಳಿಸಿದ್ದಾರೆ