ಕ್ರಾಂತಿವಾಣಿ ವಾರ್ತೆ ಸುರಪುರ: ತಾಲೂಕಿನ ವಾಗಣಗೇರಿಯ ಪರಿಶಿಷ್ಟ ಜಾತಿ ಸಮುದಾಯದವರಿಗೆ ಸ್ಮಶಾನ ಭೂಮಿಯನ್ನು ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ವೈಯಕ್ತಿಕವಾಗಿ ಖರೀದಿಸಿ ಎಸ್‌ಸಿ ಸಮುದಾಯದ ಮುಖಂಡರಿಗೆ ಖರೀದಿ ಪತ್ರವನ್ನು ಶಾಸಕರ ಕಚೇರಿಯಲ್ಲಿ ಗುರುವಾರ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜಾ ವೆಂಕಟಪ್ಪ ನಾಯಕ, ವಾಗಣಗೇರಿಯ ಪಶ್ಚಿಮ ಭಾಗದಲ್ಲಿ ಪೇಠ ಅಮ್ಮಾಪುರ ಹತ್ತಿರದ ರಾಮಣ್ಣ ಗೌಡ ಅವರಿಗೆ ಸೇರಿದ ೧೭ ಗುಂಟಿ ಭೂಮಿಯನ್ನು ಖಾಸಗಿಯಾಗಿ ಖರೀದಿಸಿ ಪರಿಶಿಷ್ಟ ಜಾತಿ ಸಮುದಾಯದವರ ಹೆಸರಿಗೆ ಖರೀದಿ ಪತ್ರ ಮಾಡಿ ಕೊಡಲಾಗಿದೆ ಎಂದರು.
ಸುಮಾರು ೩೦ ವರ್ಷಗಳಿಂದ ಪರಿಶಿಷ್ಟ ಸಮುದಾಯದವರು ಸ್ಮಶಾನ ಭೂಮಿ ನೀಡುವಂತೆ ಮನವಿ ಮಾಡುತ್ತಾ ಬಂದಿದ್ದರು. ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಸ್ಮಶಾನ ಭೂಮಿಯನ್ನು ೫ ಲಕ್ಷ ರೂ. ನೀಡಿ ವೈಯಕ್ತಿಕವಾಗಿ ಖರೀದಿಸಿದ್ದೇನೆ. ಜನರ ಒಳಿತಿಗಾಗಿ ಎಂತಹ ಕೆಲಸಕ್ಕಾದರೂ ಸಿದ್ಧನಿದ್ದೇನೆ.. ಜನ ಸೇವೆಗೆ ನನ್ನ ಇಡೀ ಜೀವನ ಮುಡಿಪಾಗಿಟ್ಟಿದ್ದೇನೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬೈಲಯಪ್ಪ ಗೌಡ ಮಾತನಾಡಿ, ಶಾಸಕರು ವೈಯಕ್ತಕವಾಗಿ ೫ ಲಕ್ಷ ರೂ. ನೀಡಿ ಖರೀದಿಸಿ ಸ್ಮಶಾನ ಭೂಮಿ ಎಸ್‌ಸಿ ಸಮುದಾಯದವರಿಗೆ ನೀಡಿದ್ದಾರೆ. ೩೦ ವರ್ಷಗಳಿಂದಲೂ ಸ್ಮಶಾನ ಭೂಮಿ ಸಮಸ್ಯೆಯಿತ್ತು. ವಕೀಲಪ್ಪ ಗೌಡ, ಗ್ರಾಪಂ ಸದಸ್ಯ ಸಂಜು ಕಾಮತ್, ಆಂಜನೇಯ ಮಾಲಿಪಾಟೀಲ ಸೇರಿದಂತೆ ಇತರರ ಪರಿಶ್ರಮವಿದೆ. ಮೃತದೇಹ ಅಂತ್ಯಕ್ರಿಯೆ ಮಾಡಲು ಪರದಾಟ ತಪ್ಪಿದಂತಾಗಿದೆ. ಶಾಸಕರ ಜನಸೇವೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದ ಎಂದು ತಿಳಿಸಿದರು.
ವಕೀಲಪ್ಪ ಗೌಡ, ಹನುಮಂತ ದೊಡ್ಡಮನಿ, ಹನುಮಂತ ಮೇಲಿನಮನಿ, ಹೊನ್ನಪ್ಪ, ಕೆಂಚಪ್ಪ, ಹನುಮಂತ ಅಮ್ಮಾಪುರ ಸೇರಿದಂತೆ ಇತರರಿದ್ದರು.