ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಕಲಿಸಿ ಕೊಡಬೇಕು,ಸೂಗುರೇಶ್ವರ ಶ್ರೀ.

ಕ್ರಾಂತಿವಾಣಿ ಶಹಾಪುರ.

ತಂದೆ-ತಾಯಿಗಳನ್ನು, ಹಿರಿಯರನ್ನು ಗೌರವಿಸದ ಶಿಕ್ಷಣ ನಮಗೆ ಬೇಡ. ಶಿಕ್ಷಣ ನಮ್ಮನ್ನು ಸುಸಂಸ್ಕತರನ್ನಾಗಿ ಮಾಡಬೇಕು. ಆಧುನಿಕತೆಯ ನೆಪದಲ್ಲಿ ನಿಮ್ಮ‌ಮಕ್ಕಳಿಗೆ ಧಾರ್ಮಿಕ ಕಾರ್ಯಕ್ರಮ, ಆಚಾರ, ವಿಚಾರ, ಸಂಸ್ಕೃತಿ, ಸತ್ಸಂಗದಿಂದ ದೂರವಿಡ ಬೇಡಿ. ನಿಮ್ಮ ಮಕ್ಕಳ ಮೆದುಳಿಗೆ ಜ್ಞಾನ, ಮನಸ್ಸಿಗೆ ಸನಾತನ ಸಂಸ್ಕೃತಿಯ ಬಟ್ಟೆ ಹಾಕಿ‌ ಎಂದು ಶಹಾಪುರ ಕುಂಬಾರಗೇರಿ ಹಿರೇಮಠದ ಸೂಗುರೇಶ್ವರ ಶಿವಾಚಾರ್ಯರು ಹೇಳಿದ್ದಾರೆ.

ಗ್ರಾಮದ ಶ್ರೀ ಶಾಂಭವಿ ಮಾತಾ ಚಿಕ್ಕಮಠದಲ್ಲಿ ದಸರಾ ಮಹೋತ್ಸವದಲ್ಲಿ ಏಳನೇ ದಿನದ ನೇತೃತ್ವ ವಹಿಸಿ ಆಶೀವರ್ಚನ ನೀಡಿದ ಅವರು ಭಕ್ತಿ ಶ್ರದ್ಧೆಯಿಂದ ನಡೆದುಕೊಳ್ಳುವ ನೀವು ದೈವ ಭಕ್ತರಾಗಿದ್ದೀರಿ. ಮಹಾನವಮಿ‌ ಸಂದರ್ಭದಲ್ಲಿ ಸಪ್ತಮಿ ತಿಥಿ ಅಂದರೆ ಏಳನೇ ದಿನ ಸರಸ್ವತಿ ದಿನ. ಅಂದು ಮಕ್ಕಳ ಮೊದಲ ಅಕ್ಷರ ಅಬ್ಯಾಸ ಮಾಡುವ ಅದ್ಭುತ ಅವಕಾಶ . ಅಂದು ಹತ್ತಿರದ ಮಠಗಳಿಗೆ ತೆರಳಿ ನಿಮ್ಮ‌ ಮಗುವಿಗೆ ಮಠದ ಪೂಜ್ಯರಿಂದ ಮೊದಲ ಅಕ್ಷರ ಬರೆಸಿ ಅದರಿಂದ ಉತ್ತಮ ಭವಿಷ್ಯ ಆರಂಭವಾಗುತ್ತದೆ.

ಓದಿನ ಜೊತೆಗೆ ಸಮಾಜದ ಕಾಳಜಿಯೂ ಇರಬೇಕು. ಇಂದಿನ ವಿದ್ಯಾರ್ಥಿಗಳು ಓದಿನಲ್ಲಿ ತುಂಬ ಬುದ್ಧಿವಂತರು; ಆದರೆ ನೈತಿಕವಾಗಿ ಕುಸಿಯುತ್ತಿದ್ದಾರೆ. ಇಂದಿನ ಪೀಳಿಗೆಗೆ ಮೊಬೈಲ್ ಗೀಳು ಹಿಡಿದಿದೆ. ಮೊಬೈಲ್ ಒಳ್ಳೆಯದೇ; ಸರಿಯಾಗಿ ಬಳಕೆಯಾದರೆ ಒಳ್ಳೆಯದು. ಆದರೆ ಅದನ್ನು ಬೇರೆ ರೀತಿ ಬಳಕೆಯಾದರೆ ? ಅದರಿಂದ ಕುಟುಂಬ ಹಾಗೂ ಸಮಾಜದ ಶಾಂತಿ ನೆಮ್ಮದಿಗೆ ಧಕ್ಕೆ ತರುತ್ತದೆ. ಇದರ ಬಗ್ಗೆ ಪಾಲಕರ ಹಾಗೂ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ. ಪುರಾಣ, ಪ್ರವಚನ, ಸತ್ಸಂಗಗಳು ಮನರಂಜನೆ ಆಗಬಾರದು ಅವು ದೈವದ ದಿವ್ಯ ಶಕ್ತಿಯ ಮೂಲ. ನಮ್ಮ ಸಂಸ್ಕೃತಿ , ಸಂಸ್ಕಾರ ನಮ್ಮ ಮುಂದಿನ ಪೀಳಿಗೆ ಮರೆಯಬಾರದು ಎಂದರೆ ಈ ಧಾರ್ಮಿಕ ಪರಂಪರೆಯ ಸತ್ಸಂಗ, ಸಂಸ್ಕೃತಿ, ಆಚಾರ, ವಿಚಾರ, ಪುರಾಣ, ಪ್ರವಚನ, ಹರಿಕಥೆ ಎಲ್ಲವುಗಳ ತಿಳಿವಳಿಕೆ ನಿಮ್ಮ, ನಿಮ್ಮ ಮಕ್ಕಳಿಗೆ ತಿಳಿಸಿ. ಮೈ ಮೇಲೆ ಬಟ್ಟೆ ಹಾಕಿಕೊಂಡು ಮಾನ ಮುಚ್ಚಿಕೊಂಡಿದ್ದೇವೆ ಹೊರತು ಮನಸ್ಸಿಗೆ ಸಂಸ್ಕೃತಿಯ ಬಟ್ಟೆ , ಮೆದುಳಿಗೆ ಜ್ಞಾನದ ಬಟ್ಟೆಯನ್ನು ಹಾಕದೆ ಬೆತ್ತಲೆಯಾಗಿಟ್ಟಿದ್ದೇವೆ. ಆದ್ದರಿಂದ ನಿಮ್ಮ‌ ಮಕ್ಕಳಿಗೆ ಈ ನಮ್ಮ‌ ಸನಾತನ ಸಂಸ್ಕೃತಿಯನ್ನು ಹೊಂದಿರುವ ನಮ್ಮ ನೆಲದ‌ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ತಿಳಿಸಿ.

ಮಠಕ್ಕೆ ಬರುವುದು , ಪುರಾಣ ಕೇಳುವುದು, ಪ್ರಸಾದ ಸ್ವೀಕರಿಸುವುದು , ಮನೆಗೆ ಹೋಗುವುದು ಬೇಡ . ಆಚಾರ, ವಿಚಾರ ತಿಳಿದು ಪಾಲಿಸುವುದು ಮುಖ್ಯ. ಮಠದಲ್ಲಿ ಹೋಮ ಹವನ ನಡೆಸಲಾಗುತ್ತದೆ. ಹೋಮ‌ ಹವನದಿಂದ ವೈಜ್ಞಾನಿಕ ಸತ್ಯಗಳು ಇವೆ. ಹೋಮದ‌ ಸಂದರ್ಭದಲ್ಲಿ ಬಳಸುವ ವನಸ್ಪತಿ, ಮರದ ಚಕ್ಕೆ, ಕಟ್ಟಿಗೆಯಿಂದ ಬರುವ ಹೊಗೆಯಿಂದ‌ ಪ್ರಕೃತಿಯಲ್ಲಿ ಬೆರೆತು ಮೇಲೆ ಹೋಗಿ ತೇವಾಂಶವನ್ನು ಹಿಡಿದು‌ ,ಮೋಡಗಳಾಗಿ, ಕರಗಿ ಮಳೆಯಾಗಿ ಬರುತ್ತದೆ . ಇಂದು ಹೋಮ ಹವನಗಳು ಕಡಿಮೆ‌ ಆಗುತ್ತಿವೆ ಅದರಿಂದ ಇಂದು ಮಳೆ ಪ್ರಮಾಣ ತೀರಾ ಕಡಿಮೆ‌ ಆಗುತ್ತಿದೆ. ನಾಸಾ ವಿಜ್ಞಾನಿಗಳು ಕೂಡಾ ಈ ಬಗ್ಗೆ ಸಂಶೋಧನೆ ಮಾಡಿ ಹೋಮ ಹವನದಿಂದ ಮಳೆ ಪ್ರಮಾಣ ಹೆಚ್ಚುತ್ತದೆ ಎಂದು ಹೇಳಿದ್ದಾರೆ. ಇದನ್ನು ಸಾವಿರಾರು ವರ್ಷಗಳ ಹಿಂದಯೇ ನಮ್ಮ‌ ಸನಾತನ ಧರ್ಮದ ಋಷಿ ಮುನಿಗಳು ಹೇಳಿದ್ದಾರೆ ಆದರೆ ಅದರ ಅರಿವು ನಮಗಿಲ್ಲ. ಇಂದು ವಿಜ್ಞಾನ ಎಂದು ಹೇಳುವ ಎಲ್ಲಾ ಸಂಶೋಧನೆಗಳು ನಮ್ಮ ಸನಾತನ ಕಾಲದಲ್ಲಿ ಹೇಳಿ, ಮಾಡಿ , ಸಾಬೀತು ಮಾಡಿದ್ದಾರೆ. ಗುರು ಶಿಷ್ಯರು ಒಂದೇ ನಾಣ್ಯದ ಎರಡು ಮುಖಗಳು ಒಬ್ಬರನ್ನ ಒಬ್ಬರು ಬಿಟ್ಟಿರಲು ಸಾಧ್ಯವಿಲ್ಲ ಹಾಗೆ ಸನಾತನ ಧರ್ಮ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳಿದ್ದಾರೆ.

ನಂತರ ಶಹಾಪುರ ಗುಂಬಳಾಪುರ ಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯರು ಆಶೀವರ್ಚನ ನೀಡಿ ಕಾಡಿನಲ್ಲಿ ಬೇಟೆಯಾಗಿ ಬಂದ‌ ಒಂದು ಪುಟ್ಟ ಪ್ರಾಣಿ ಮೊಲ ಮಾರುಕಟ್ಟೆಯಲ್ಲಿ ಮಾರಾಟ ಆಗುತ್ತದೆ. ಅದಕ್ಕೆ ಜೀವ ಹೋದ ಮೇಲು ಒಂದು ಬೆಲೆ ಇದೆ ಆದರೆ ಮನುಷ್ಯನ ಜೀವ ಹೋದ ದೇಹ ಯಾರಾದರು ಮನೆಯಲ್ಲಿ ಇಟ್ಟುಕೊಂಡು ಇರಲಿಕ್ಕೆ ಸಾಧ್ಯವೆ. ಅದಕ್ಕೆ ಬೆಲೆ ಕಟ್ಟಿ ಯಾರದಾರೂ ಕೊಂಡು ಕೊಂಡಿದ್ದಾರೆಯೇ?

ಜನನ ಮರಣ ಯಾರನ್ನು ಬಿಟ್ಟಿಲ್ಲ. ಅದರ ಸಾರ್ಥಕ ಜೀವನ ತಿಳಿಯಲು ಈ ಚರಿತ್ರೆಗಳು ಕೇಳಬೇಕು. ಸಂಸಾರ ಯಾರಿಗೂ ಬಿಟ್ಟಿಲ್ಲ. ಈ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿನ ಒಳಗಿನ ತುಮುಲಗಳಿಗೆ ಮುಕ್ತಿ ದೊರಕುತ್ತದೆ. ಸಾವು ಬಂತೆಂದರೆ ಅದು ಯಾರಿಂದಲೂ ತಡೆಯಲೂ ಸಾಧ್ಯವಿಲ್ಲ ಎಂದು ಹೇಳಿದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ