ಜೀವ ಜ್ಞಾನಿ ಮಹರ್ಷಿ ವಾಲ್ಮೀಕಿಯಿಂದ ಜಗತ್ ಮೆಚ್ಚಿದ ರಾಮಾಯಾಣ ಸೃಷ್ಠಿ

ಲೇಖನ: ಡಾ. ಸಾಯಿಬಣ್ಣ ಮೂಡಬುಳ

ಕ್ರಾಂತಿವಾಣಿ ವಾರ್ತೆ:  ವಾಲ್ಮೀಕಿ ಎಂಬ ಜೀವವಿಜ್ಞಾನಿಯೂ ಭಾರತೀಯ ಸಾಮಾಜಿಕ ಸಂಧರ್ಭದಲ್ಲಿ ಸಮಾಜವನ್ನು ಸುಧಾರಿಸುವ ನಿಟ್ಟಿನಲ್ಲಿ ಅನೇಕ ಮಹನೀಯರು ತಮ್ಮ ಅಮೂಲ್ಯವಾದ ಶ್ರಮವನ್ನು ವಿನಿಯೋಗಿಸಿ ಬಹುಮುಖಿ ಕೊಡುಗೆಗಳನ್ನು ನೀಡಿ ಸಮಾಜಮುಖಿ ನಿಲುವನ್ನು ಪ್ರತಿಪಾದಿಸಿ ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ಇಂತಹ ಹಲವು ಚಿಂತಕರ ಫಲವಾಗಿ ಸಮಾಜ ಕಾಲ ಕಾಲಕ್ಕೆ ಪರಿವರ್ತನೆಗೋಳಪಟ್ಟಿದ್ದು ಇತಿಹಾಸ. ಇಂತಹ ಹಲವು ಮಾದರಿ ಕಾರ್ಯಗಳ ಮೂಲಕ ಸಮಾಜಕ್ಕೆ ಎದುರುಗೊಂಡವರು ಶ್ರೀ ಮಹರ್ಷಿ ವಾಲ್ಮೀಕಿಯವರು ಒಬ್ಬರು. ರತ್ನಾಕರ ಎಂಬ ಸಾಮಾನ್ಯ ಬಾಲಕ ವಾಲ್ಮೀಕಿ ಎಂಬ ಮಹಾನ್ ಜ್ಞಾನಪರ್ವತವಾಗಿ ರುಪುಗೊಂಡಿದ್ದು ವಿಸ್ಮಯವೆ ಸರಿ.

ವರ್ಣ, ಜಾತಿ, ಧರ್ಮವೆಂಬ ಭಾವನೆ ಮತ್ತು ಆಚರಣೆಗಳು ಉಚ್ಛ್ರಾಯ ಸ್ಥಿತಿಯಲ್ಲಿರುವ ಕಾಲಘಟ್ಟದಲ್ಲಿ ಜನಿಸಿದ ವಾಲ್ಮೀಕಿಯವರು ಈ ಎಲ್ಲಾ ಅವ್ಯವಸ್ಥೆಗಳನ್ನು ಮೀರಿ ಮನುಷ್ಯಪರ ಅಂತಕರಣವನ್ನು ಸಮಾಜಕ್ಕೆ ತಂದು ಮಾನವೀಯ ಮಹಾಅಲೆಗಳನ್ನು ಸೃಜಿಸಿ ಜೀವಪರತತ್ವಗಳನ್ನು ಸಾಮಾನ್ಯಕರಿಸಿ ಮನೆಮನಗಳಲ್ಲಿ ನೆಲೆಯೂರಿಸುವ ಅನುಪಮವಾದ ಕಾರ್ಯಕ್ಕೆ ತಮ್ಮನ್ನು ಒಡ್ಡಿಕೊಂಡವರು ಶ್ರೀ ಮಹರ್ಷಿ ವಾಲ್ಮೀಕಿಯವರು.

ತಮಸಾ ನದಿಯ ದಡದಲ್ಲಿ ಜನಿಸಿ ಪುಟ್ಟ ಪುಟ್ಟ ಹೆಜ್ಜೆಗಳನಿಟ್ಟು ಪ್ರಕೃತಿ ವಿಸ್ಮಯಗಳನ್ನು ಆಸ್ವಾದಿಸಿ, ಪ್ರಕೃತಿಯ ಮಗುವಾಗಿ ರುಪುಗೊಂಡು ಅರಣ್ಯವನ್ನೆ ಬದುಕಿನ ಭಾಗವಾಗಿಸಿಕೊಂಡು ಬಾಳಿದ ವಾಲ್ಮೀಕಿ ಎಂಬ ಪರಿಸರ ಪ್ರೇಮಿಯ ಕ್ರಿಯಾತ್ಮಕ ಕಾರ್ಯಗಳು ಇಂದಿನ ಸಮಾಜದೆದರು ಅನಾವರಣಗೊಳ್ಳುವ ಅಗತ್ಯತೆಯಿದೆ. ಪ್ರಾಣಿ ಪಕ್ಷಿ ಸಂಕುಲದ ಕುರಿತು ಅತೀವ ಕಾಳಜಿ ಹೊಂದಿರುವ ಇವರು ಇವುಗಳ ಸಂವರ್ಧನೆಗೆ ತಮ್ಮನ್ನು ಅತೀವವಾಗಿ ತೊಡಗಿಸಿಕೊಂಡಿದ್ದು ಇತಿಹಾಸದಿಂದ ಮರೆಯಾಗಿದ್ದು ವಿಪರ್ಯಾಸ ಸಂಗತಿಯಾಗಿದೆ.

ವಾಲ್ಮೀಕಿಯವರನ್ನು ಕೇವಲ ರಾಮಾಯಣದ ಕರ್ತೃ, ಲವ ಕುಶರ ವಿದ್ಯಾಗುರುಗಳು ಎನ್ನುವ ನೆಲೆಯಲ್ಲಿ ಅವರನ್ನು ಅತಿಯಾಗಿ ಅರ್ಥ ಮಾಡಿಕೊಳ್ಳುವ ಪ್ರಕ್ರೀಯೆಗಳು ವ್ಯಾಪಕವಾಗಿ ನಡೆಯುತ್ತಿವೆ. ಇದನ್ನು ಮೀರಿದ ಇವರ ಅನೇಕ ಕೊಡುಗೆಗಳು ಸಮಾಜವನ್ನು ತಲುಪುತ್ತಿಲ್ಲ. ಸೃಷ್ಟಿಯ ಸಕಲ ಜೀವಸಂಕುಲಗಳ ಬಗ್ಗೆ ಅತೀವ ಪ್ರೀತಿ ಮತ್ತು ಮಾತೃ ಹೃದಯವನ್ನು ಹೊಂದಿದ್ದ ಹೆಂಗರಳು ಶ್ರೀ ಮಹರ್ಷಿ ವಾಲ್ಮೀಕಿಯವರದ್ದು. ಹಾಗಾಗಿ ವಾಲ್ಮೀಕಿಯವರು ಒಬ್ಬ ಕವಿ, ಚಿಂತಕರಷ್ಟೇ ಅಲ್ಲದೆ ಅವರೊಬ್ಬ ಹವಾಮಾನ ತಜ್ಞ, ಸಸ್ಯಶಾಸ್ತ್ರಜ್ಞ, ಪ್ರಾಣಿ ಅಧ್ಯಯನಕಾರ, ಭಾರತದ ಮೊಟ್ಟ ಮೊದಲ ಅನಾಥಶ್ರಮ ಸ್ಥಾಪಕ, ಪರಿಸರ ತಜ್ಞ ಹೀಗೆ ತಮ್ಮ ಅಪಾರವಾದ ಜ್ಞಾನದ ಮೂಲಕ ಬಹುವಾಗಿ ತೆರೆದುಕೊಂಡವರು. ಇಂತಹ ಅಪ್ರತಿಮ ಚಿಂತಕರನ್ನು ಸೀಮಿತ ಕಕ್ಷೆಯಲ್ಲಿ ನೋಡದೆ, ಅವರನ್ನು ಅವರನ್ನು ಜೀವ ವಿಜ್ಞಾನಿಯನ್ನಾಗಿ ಗ್ರಹಿಸಬೇಕಾದ ಅವಶ್ಯಕತೆಯಿದೆ.

ರಾಮಾಯಣ ಎನ್ನುವ ಅನನ್ಯವಾದ ಕೃತಿಯ ಮುಖೇನ ಅನೇಕ ಜೀವಪರ, ಜನಪರ ಅಂಶಗಳನ್ನು ನಿರೂಪಿಸಿ ಮನುಷ್ಯ ಕಲ್ಯಾಣಕ್ಕೆ ಒತ್ತು ನೀಡಿದ್ದಾರೆ. ರಾಮಾಯಣದ ವಿವಿಧ ಶ್ಲೋಕ ಮತ್ತು ಖಾoಡಗಳಲ್ಲಿ ಸಮತೆ ಮತ್ತು ಚಲನಾಶೀಲತೆಗೆ ಹೆಚ್ಚು ಅವಕಾಶ ನೀಡಿ ಜಡತ್ವದ ಪರಿಕಲ್ಪನೆಗಳಿಗೆ ಮಂಗಳ ಹಾಡಿದ್ದಾರೆ. ಸಮಾಜ ಅಭಿವೃದ್ಧಿಗೆ ಪೂರಕವಾಗುವ ಅನೇಕ ಮುನ್ನೊಟಗಳನ್ನು ನೀಡಿದ್ದಾರೆ. ಸಮಾಜದ ಅಲಕ್ಷಿತ ವಿಚಾರಗಳಿಗೆ ಜೀವ ತುಂಬಿ ವೈಚಾರಿಕತೆಯೊಂದಿಗೆ ಸಮನ್ವಯಗೊಳಿಸಿದ್ದಾರೆ.

ಆಡಳಿತ ಕುರಿತು, ಆಡಳಿತಗಾರನು ಹೊಂದಬೇಕಾದ ತಾತ್ವಿಕತೆಯನ್ನು ಕುರಿತು ಈ ಕೃತಿಯಲ್ಲಿ ಗಮನ ಸೆಳೆದಿದ್ದಾರೆ. ಮಹಿಳೆಯರು ಅವರ ಸ್ವಾತಂತ್ರ್ಯ ಮತ್ತು ಸಶಕ್ತಿಕರಣ ಕುರಿತು ಅನೇಕ ಒಳನೋಟಗಳನ್ನು ರಾಮಾಯಣದಲ್ಲಿ ದಾಖಲಿಸಿದ್ದಾರೆ. ರಾಮಾಯಣ ಎನ್ನುವದು ಕೇವಲ ಘಟನಾವಳಿಗಳ ಹೊಂದಿದ ಗ್ರಂಥವಾಗದೆ, ಪ್ರಜೆಗಳ ಅಭ್ಯದಯವನ್ನು ಸಾರುವ ಪ್ರಜಾಮುಖಿ ಚಿಂತನೆಗಳ ಆಗರವಾಗಿದೆ ಎಂದರೆ ಬಹುಶಃ ಅತಿಷಿಯೋಕ್ತಿಯಾಗಲಿಕ್ಕಿಲ್ಲ. ಇಂತಹ ಅರ್ಥಪೂರ್ಣ ಕೊಡುಗೆಗಳ ಬಹುಮುಖಿ ತಜ್ಞನನ್ನು ಕಳ್ಳ, ದರೋಡೆಕೋರ ಎನ್ನುವ ಆಧಾರರಹಿತ ವಾದಗಳನ್ನು ಹರಡಿ ವಾಲ್ಮೀಕಿಯವರ ಚಿಂತನೆಗಳನ್ನು ಕುಬ್ಜೆಗೊಳಿಸುವ ಪ್ರಯತ್ನಗಳು ವ್ಯಾಪಕವಾಗಿ ನಡೆಯುತ್ತಿರುವದು ನಿಜಕ್ಕೂ ನೋವಿನ ಸಂಗತಿಯಾಗಿದೆ.

ತಳಸಮುದಾಯ, ಬೇಡರ ಕುಲದಿಂದ ಬಂದ ಇವರನ್ನು ಜಾತಿಯ ನೀಲಿಗಣ್ಣಿನಿಂದ ನೋಡುವ ಪ್ರಕ್ರಮಗಳು ಇಂದಿಗೂ ಕೊನೆಯಾಗಿಲ್ಲ. ಉತ್ಕರುಸ್ಟ ಚಿಂತನೆ ಮತ್ತು ವಿಚಾರಧಾರೆಗಳ ಉಗಮ ಅವರವರ ಶ್ರಮ ಹಾಗೂ ಸಮರ್ಪಣಾ ಮನಸ್ಥಿತಿಯ ಮೇಲೆ ಅವಲಂಬಿತವಾಗುತ್ತದೆ. ಅರ್ಥಪೂರ್ಣವಾದ ತೊಡಗಿಸಿಕೊಳ್ಳುವಿಕೆ ಒಬ್ಬ ವ್ಯಕ್ತಿಯನ್ನು ಅಸಾಮಾನ್ಯನಾಗಿಸುತ್ತದೆ. ಈ ದೆಸೆಯಲ್ಲಿ ಸಾರ್ಥಕ ಶ್ರಮ ಅವರಿಂದ ಮೂಡಿಬರಬೇಕಾದ ಜರೂರು ಇದೆ.

ವಾಲ್ಮೀಕಿಯವರಲ್ಲಿ ಅಡಗಿದ ಆಗಾದವಾದ ಪಾಂಡಿತ್ಯವೆ ಅವರ ಜಗದ್ವಿಖ್ಯಾತ ರಾಮಾಯಣದ ರಚನೆಗೆ ಕಾರಣವಾಗಿದೆ. ಇಂತಹ ಅನುಪಮವಾದ ಜ್ಞಾನದ ಖಣಿಯ ಸುತ್ತ ಆವರಿಸಿರುವ ಮಿಥ್ಯೆಯು ಕಳಚಬೇಕಾದ ತುರ್ತಿದೆ.ಆ ಮುಖೇನ ವಾಲ್ಮೀಕಿಯವರ ಜೀವನ್ಮುಖಿ ಸಂದೇಶಗಳು ಜನರಿಗೆ ತಲುಪಿ ಸಮಾಜದ ಬದಲಾವಣೆ ಕಾರಣವಾಗಬೇಕಾದ ಅಗತ್ಯತೆಯಿದೆ. ಈ ನೆಲೆಯಲ್ಲಿ ಜನ ಸಮುದಾಯಗಳು ಪ್ರಭುದ್ದವಾಗಬೇಕಾದ ವಾತಾವರಣ ಸಮೃದ್ಧವಾಗಬೇಕಿದೆ.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ