ಕ್ರಾಂತಿವಾಣಿ ವಾರ್ತೆ ಸುರಪುರ: ರಾಜ್ಯ ಸರಕಾರವನ್ನು ಜನರ ಹತ್ತಿರ ಹೋದಾಗ ಮಾತ್ರ ಜನಪ್ರತಿನಿಧಿಗಳು ಮತ್ತು ಸರಕಾರ ಸಾರ್ವಜನಿಕರ ಬಾಯಲ್ಲಿ ಇರಲು ಸಾಧ್ಯ. ಆದ್ದರಿಂದ ಜನರ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಸಿದ್ಧವಿದೆ ಎಂದು ಜಿಲ್ಲಾ ಉಸ್ತುವಾರಿ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಶರಣಬಸಪ್ಪ ದರ್ಶನಪುರ ಹೇಳಿದರು.
ನಗರದ ರಂಗಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಸಾರ್ವಜನಿಕರಿಂದ ಕುಂದು-ಕೊರತೆ ಅರ್ಜಿ ಸ್ವೀಕರಿಸಿ ಅವರು ಮಾತನಾಡಿದದ ಅವರು ಮುಖ್ಯಮಂತ್ರಿಗಳು ಅಧಿಕಾರಿಗಳ ಜತೆ ಎರಡು ಬಾರಿ ಸುಧೀರ್ಘವಾಗಿ ಚರ್ಚಿಸಿದ ನಂತರವೇ ಸರಕಾರಿ ಇಲಾಖೆಗಳಲ್ಲಿರುವ ಸಮಸ್ಯೆ ಗುರುತಿಸಿ ಅವುಗಳನ್ನು ಪರಿಹರಿಸಲು ಜನತಾ ದರ್ಶನ ಹಮ್ಮಿಕೊಂಡಿದೆ ಎಂದರು.
ಯಾದಗಿರಿ ಜಿಲ್ಲಾ ಕೇಂದ್ರಗಳಲ್ಲಿ ನಡೆದ ಜನತಾದರ್ಶನದಲ್ಲಿ ಸುಮಾರು ೨೯೪ ಅರ್ಜಿಗಳಲ್ಲಿ ೧೮೯ ಅರ್ಜಿಗಳು ವಿಲೇವಾರಿಯಾಗಿದೆ. ೧೮ ಅರ್ಜಿಗಳಿಗೆ ವಿಳಾಸವೇ ಇಲ್ಲವಾಗಿದೆ. ಆದ್ದರಿಂದ ಸುರಪುರದಲ್ಲಿ ಅರ್ಜಿ ಪಡೆದಾಗ ವಿಳಾಸವನ್ನು ಬರೆದುಕೊಂಡು ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥ ಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾದಗಿರಿ ಜಿಲ್ಲೆಯ ಆರು ತಾಲೂಕುಗಳನ್ನು ಬರಗಾಲವೆಂದು ಘೋಷಿಸಲಾಗಿದ್ದು, ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ತಕ್ಷಣ ನೋಂದಣ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪರಿಹಾರಕ್ಕಾಗಿ ಸಮೀಪದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ, ಕಂದಾಯ ಇಲಾಖೆಯ ಕೇಂದ್ರಗಳಿಗೆ ಸಂಪರ್ಕಿಸಿ ನೋಂದಣ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ೨.೩೨ ಲಕ್ಷ ರೈತರಿದ್ದು, ನೋಂದಣ ಮಾಡಿಕೊಳ್ಳದ ಸುಮಾರು ೮೦ ಸಾವಿರ ರೈತರು ಕೂಡಲೇ ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಿ ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್, ಜಾತಿ ಪ್ರಮಾಣ ಪತ್ರ ಹಾಗೂ ಎರಡು ಭಾವಚಿತ್ರಗಳೊಂದಿಗೆ ನೋಂದಣ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸುರಪುರ ತಾಲೂಕಿಗೆ ಸಂಬಂಧಪಟ್ಟಂತೆ ಇಂದು ಮಧ್ಯಾಹ್ನದವರೆಗೆ ೧೭೦ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು ಈ ಪೈಕಿ ಸ್ಥಳದಲ್ಲಿಯೇ ೭೦ ಅರ್ಜಿಗಳಿಗೆ ಸಚಿವರು ಸ್ಪಂದಿಸಿ ಇತ್ಯರ್ಥ ಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯ ಸರ್ಕಾರ ವಿಶೇಷವಾಗಿ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಕಾಳಜಿಯಿಂದಾಗಿ ಜನರಿಗೆ ನೇರವಾಗಿ ವಿವಿಧ ಸೌಲಭ್ಯಗಳು ತಲುಪಬೇಕು. ಅವರ ಮನೆ ಬಾಗಿಲಿಗೆ ಜನಪ್ರತಿನಿಧಿಗಳು ಅಧಿಕಾರಿಗಳು ಹೋಗಿ ಸ್ಪಂದಿಸುವ ನಿಟ್ಟಿನಲ್ಲಿ ಹಾಗೂ ಅವರ ಸಮಸ್ಯೆ ನಿವಾರಣೆಗೆ ಜನತಾದರ್ಶನ ಕಾರ್ಯಕ್ರಮವನ್ನು ಪ್ರತಿ ತಾಲೂಕಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ರಾಜ್ಯ ಸರ್ಕಾರದಿಂದ ಜನಸಾಮಾನ್ಯರ ಕುಂದು ಕೊರತೆಗಳಿಗೆ ಸ್ಪಂದಿಸಲು ಜಿಲ್ಲಾ ಹಾಗೂ ತಾಲೂಕ ಮಟ್ಟದಲ್ಲಿ ಜನತಾದರ್ಶನದಂತಹ ಮಹತ್ವಕಾಂಕ್ಷೆಯ ಕಾರ್ಯಕ್ರಮ ಆಯೋಜಿಸಲಾಗಿದೆ. ಜನರು ಕುಂದುಕೊರತೆಗಳನ್ನು ಶೀಘ್ರ ಪರಿಹರಿಸಲಾಗುವುದು. ಸರಕಾರಿ ಕಚೇರಿಗೆ ಅಲೆದಾಡುವುದನ್ನು ಕಣ್ಣಾರೆ ಕಂಡಿದ್ದೇನೆ. ಕಚೇರಿ ಆವರಣದಲ್ಲಿ ಜನರು ಕುಳಿತಿರುತ್ತಾರೆ. ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಜನತಾ ದರ್ಶನ ಸೂಕ್ತವಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಉತ್ತಮ ಕಾರ್ಯನಿರ್ವಹಿಸಲಾಗುವುದು ಎಂದರು.
ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ, ಜಿಲ್ಲಾಧಿಕಾರಿ ಡಾ. ಸುಶೀಲ ಬಿ, ಜಿಲ್ಲಾ ಪಂಚಾಯತ್ ಸಿಇಒ ಗರಿಮಾ ಪನ್ವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಜಿ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ, ಡಿವೈಎಸ್ಪಿ ಬಸವೇಶ್ವರ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಸುರಪುರ ತಹಸೀಲ್ದಾರ ಕೆ. ವಿಜಯಕುಮಾರ ಸೇರಿದಂತೆ ವಿವಿಧ
ಜಿಲ್ಲಾಮಟ್ಟದ, ತಾಲೂಕಮಟ್ಟದ ಅಧಿಕಾರಿಗಳು, ಎಲ್ಲಾ ತಾಲೂಕಿನ ತಹಶೀಲ್ದಾರರು ಸೇರದಂತೆ ಇತರರಿದ್ದರು.