ಕ್ರಾಂತಿವಾಣಿ ಶಹಾಪುರ.
ಬಾಲ್ಯ ವಿವಾಹ ತಡೆಗೆ ಪ್ರತಿ ವಿದ್ಯಾರ್ಥಿನಿಯು ಪಣತೊಡಬೇಕು. ಜೊತೆಗೆ ಪ್ರತಿಯೊಬ್ಬರೂ ಇದನ್ನು ಪ್ರೋತ್ಸಾಹಿಸುವುದಿಲ್ಲ ಎಂಬ ಪ್ರತಿಜ್ಞೆ ಸ್ವೀಕರಿಸಿ ಅನಿಷ್ಟ ಪದ್ಧತಿಗೆ ತಿಲಾಂಜಲಿ ಹೇಳಬೇಕು ಎಂದು ಹೆಚ್ಚುವರಿ ನ್ಯಾಯಾಧೀಶ ಬಸವರಾಜ್ ವಿದ್ಯಾರ್ಥಿನಿಯರಿಗೆ ಹೇಳಿದರು
ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ತಾಲ್ಲೂಕು ವಕೀಲರ ಸಂಘ, ಸರಕಾರಿ ಬಾಲಕಿಯರ ಪ್ರೌಢಶಾಲೆ ಶಿಕ್ಷಣ ಇಲಾಖೆ ಶಹಾಪುರ ಇವರ ಸಹಯೋಗದಲ್ಲಿ ಆಯೋಜಿಸಲಾದ ಬಾಲ್ಯ ವಿವಾಹ ಹಾಗೂ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು, ಇದಕ್ಕೂ ಮೊದಲು ನಗರದ ಪ್ರಮುಖ ಬೀದಿಯಲ್ಲಿ ಬಾಲ್ಯ ವಿವಾಹ ತಡೆ ಜಾಗೃತಿ ಜಾಥಾ ದಲ್ಲಿ ಭಾಗವಹಿಸಿದ್ದರು.
ಬಾಲ್ಯ ವಿವಾಹ ಸಮಾಜದಲ್ಲಿ ಕೆಟ್ಟ ಆಚರಣೆಯಾಗಿದೆ. ಸಮಾಜಕ್ಕೆ ಇದೊಂದು ದೊಡ್ಡ ಪಿಡುಗಾಗಿ ಇವತ್ತಿಗೂ ಕಾಡುತ್ತಿದೆ. ಇದರ ವಿರುದ್ಧ ಜಾಗೃತಿ ಮೂಡಿಸಿ ಪಿಡುಗು ತಡೆಗಟ್ಟಿದಾಗ ಮಾತ್ರ ಈ ಅನಿಷ್ಟ ಪದ್ದತಿಯನ್ನು ಬೇರು ಸಮೇತ ಸಮಾಜದಿಂದ ಕಿತ್ತೊಗೆಯಲ್ಲೂ ಸಾಧ್ಯ. ಬಾಲ್ಯ ವಿವಾಹ ಎಂದರೆ, ಎಂದರೆ ಚಿಕ್ಕ ವಯಸ್ಸಿನಲ್ಲಿ ಹುಡುಗ-ಹುಡುಗಿಯನ್ನು ಎರಡು ಕುಟುಂಬಗಳು ಒಪ್ಪಿ ಮದುವೆ ಮಾಡುವುದು. ದೇಶದಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸಲಾಗಿದ್ದರೂ ಸಂಪೂರ್ಣ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ಹುಡುಗಿಯರಿಗೆ ೧೮ ಹಾಗೂ ಹುಡುಗರಿಗೆ ೨೧ ವರ್ಷವೆಂದು ವಿವಾಹಕ್ಕೆ ವಯಸ್ಸನ್ನು ನಿಗದಿಪಡಿಸಲಾಗಿದ್ದರೂ ಬಾಲ್ಯ ವಿವಾಹಗಳು ನಡೆಯುತ್ತಿರುವ ಬಗ್ಗೆ ವರದಿಯಾಗುತ್ತಲೇ ಇದೆ. ಈ ಕೆಟ್ಟ ಪದ್ಧತಿಯನ್ನು ವಿದ್ಯಾರ್ಥಿಗಳಿಂದ ತಡೆಗಟ್ಟಲು ಸಾಧ್ಯ. ದೇಶ ಕಾಯುವ ಯೋಧರಂತೆ, ತಾವುಗಳು ಅನಿಷ್ಟ ಪದ್ದತಿಗಳನ್ನು ತಡೆಗಟ್ಟಲು ಸೈನಿಕರಂತೆ ಕಾರ್ಯನಿರ್ವಹಿಸಬೇಕು.ಬಾಲ್ಯ ವಿವಾಹ ಅನಿಷ್ಟ ಪದ್ಧತಿಯಾಗಿದ್ದು, ಈ ಅಪಾಯಕಾರಿ ಪದ್ಧತಿಯು ಎಳೆ ತಾಯಂದಿರ , ಶಿಶು ಮರಣಕ್ಕೆ ಕಾರಣವಾಗುತ್ತದೆ.
ಎಂದು ಅವರು ವಿದ್ಯಾರ್ಥಿಗಳಿಗೆ ಎಳೆ ಎಳೆಯಾಗಿ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಹಿರಿಯ ನ್ಯಾಯವಾದಿ ಶ್ರೀನಿವಾಸರಾವ್ ಕುಲಕರ್ಣಿ ಅವರು ವಿದ್ಯಾರ್ಥಿಗಳನ್ನು ಕುರಿತು,
ಬಾಲ್ಯ ವಿವಾಹ ತಡೆಗೆ ಬಾಲ್ಯ ವಿವಾಹ ನಿಷೇಧ ಕಾಯಿದೆಯನ್ನು ಪರಿಣಾಮ ಕಾರಿಯಾಗಿ ಅನುಷ್ಠಾನ ಗೊಳಿಸಲು ಈಚಿನ ದಿನಗಳಲ್ಲಿ ಹೆಚ್ಚು ಒತ್ತುನೀಡಲಾಗಿದೆ. ಬಾಲ್ಯ ವಿವಾಹಕ್ಕೆ ಬಡತನ, ಅನಕ್ಷರತೆ, ಮೂಢನಂಬಿಕೆ ಸೇರಿದಂತೆ ಹಲವು ಕಾರಣ ನೀಡಬಹುದು. ಇದರಲ್ಲಿ ವರದಕ್ಷಿಣೆ ದೊಡ್ಡ ಸಮಸ್ಯೆಯಾಗಿದೆ. 21 ವರ್ಷ ಒಳಗಿನ ಹುಡುಗ ಹಾಗೂ 18 ವರ್ಷ ಒಳಗಿನ ಹುಡುಗಿಯರ ನಡುವೆ ಇಲ್ಲವೆ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನೊಳಗಿದ್ದರೂ ಇಂತಹ ಮದುವೆಯನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗುತ್ತದೆ. ಇದನ್ನು ಆದಷ್ಟು ತಡೆಗಟ್ಟಿ ಬಾಲ್ಯವಿವಾಹ ಸಂಪೂರ್ಣವಾಗಿ ತೊಲಗಿಸಬೇಕು. ಪೋಷಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಮೂಲಕ ಬಾಲ್ಯ ವಿವಾಹ ತಡೆಗಟ್ಟಲು ಇಲಾಖೆ ಅಷ್ಟೇ ಅಲ್ಲದೆ ಎಲ್ಲರೂ ಮುಂದಾಗಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಧಾನ ನ್ಯಾಯಾಧೀಶೆ ಕುಮಾರಿ ಶೋಭಾ, ಹಿರಿಯ ವಕೀಲೆ ಬಸಮ್ಮ ರಾಂಪುರೆ, ಪ್ಯಾನಲ್ ವಕೀಲೆ ಆಯುಷ್ ಪರ್ವೀನ್, ಉಪ ಪ್ರಾಚಾರ್ಯ ವೆಂಕೋಬ ಪಾಟೀಲ್, ಬಿ ಆರ್ ಸಿ ರೇಣುಕಾ ಪಾಟೀಲ್ ಮಾತನಾಡಿದರು. ತಾಲೂಕ ವಕೀಲರ ಸಂಘದ ಅಧ್ಯಕ್ಷ ಸಂತೋಷ್ ದೇಶಮುಖ್, ಸರಕಾರಿ ಸಹಾಯಕ ಅಭಿಯೋಜಕ ವೈ.ಬಿ ದೇಸಾಯಿ, ವಕೀಲರಾದ ಭೀಮರಾಜ, ಇಸಿಓ ಕಾಡಯ್ಯ, ಈರಯ್ಯ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಶಾಲಾ ಶಿಕ್ಷಕ ವೃಂದ ಹಾಗೂ ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ವೆಂಕಟೇಶ್ ನಿರೂಪಿಸಿ ವಂದಿಸಿದರು.