ಕ್ರಾಂತಿವಾಣಿ ವಾರ್ತೆ ಸುರಪುರ : ಸಮೀಪದ ರಂಗಂಪೇಟೆ ಕನ್ನಡ ಸಾಹಿತ್ಯ ಸಂಘಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಸಂತೋಷವಾಗಿದೆ ಎಂದು ಜಿವೈಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮತ್ತು ರಂಗಂಪೇಟೆ ಕಸಾಸಂ ಮಾಜಿ ಅಧ್ಯಕ್ಷ ಡಾ.ಸುರೇಶ ಸಜ್ಜನ್ ತಿಳಿಸಿದರು.
ಈ ಕುರಿತು ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ೧೯೪೩ ರಲ್ಲಿ ಸ್ಥಾಪನೆಗೊಂಡಿರುವ ಕನ್ನಡ ಸಾಹಿತ್ಯ ಸಂಘ ರಂಗಂಪೇಟೆ-ತಿಮ್ಮಾಪುರದ ಅಧ್ಯಕ್ಷರಾಗಿದ್ದ ರಾಮಣ್ಣ ಬೋಡಾ, ಅಡಿವೆಪ್ಪ ಗೋಲಗೇರಿ, ಡಿ.ಗೋವಿಂದಪ್ಪ, ಎಂ.ಆರ್.ಬುದ್ದಿವಂತ ಶೆಟ್ಟಿ, ಡಾ.ಸುರೇಶ ಸಜ್ಜನ್ ಮತ್ತು ಪ್ರಸ್ತುತ ಅಧ್ಯಕ್ಷ ಸುಗೂರೇಶ ವಾರದ ಇವರ ಸೇವೆ ಸಂಘದ ಬೆಳವಣ ಗೆಯಲ್ಲಿ ಅಮೋಘವಾಗಿದೆ.
ಸಂಘದ ಹಿರಿಯರ, ಪದಾಧಿಕಾರಿಗಳ ಸೇವೆ ಸ್ಮರಿಸಬೇಕಾಗಿದೆ ಎಂದರು.
ಸಂಘವು ಪ್ರತಿ ವರ್ಷ ದಸರಾ ನಾಡಹಬ್ಬ ಮಹೋತ್ಸವದಲ್ಲಿ ನಾಡಿನ ಹೆಸರಾಂತ ಸಾಹಿತಿಗಳನ್ನು ಆಹ್ವಾನಿಸಿ ಸಾಹಿತಿಕ, ಸಾಂಸ್ಕೃತಿಕ, ಕನ್ನಡ ಪರ ಚಟುವಟಿಕೆಗಳನ್ನು ಹಮ್ಮಿಕೊಂಡು ಕನ್ನಡ ನುಡಿ, ಸೇವೆ ಮಾಡುತ್ತಾ ಬಂದಿರುತ್ತದೆ. ಅನೇಕ ಸಾಹಿತಿಗಳು ಸಂಘದ ಕಾರ್ಯವನ್ನು ಮುಕ್ತ ಕಂಠದಿಂದ ಹೊಗಳಿ ಸಂಘದ ದಾಖಲೆಯಲ್ಲಿ ತಮ್ಮ ಹಸ್ತಾಕ್ಷರಗಳಿಂದ ಬರೆದು ಹೋಗಿರುವುದು ನಿಜಕ್ಕೂ ಪ್ರಶಂಸನೀಯ ಎಂದರು.
ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಸೇರಿದಂತೆ ಕನ್ನಡದ ಸೇವೆ ಮಾಡುವ ಅನೇಕ ಸಾಹಿತಿಗಳು, ರಾಜಕೀಯ ವ್ಯಕ್ತಿಗಳು, ಉದ್ಯಮಿಗಳು, ಕಲಾ ಪ್ರೋತ್ಸಾಹಕರು, ಸಂಘ-ಸಂಸ್ಥೆಗಳ ಸಹಕಾರ ಕೂಡ ಅಪಾರವಾಗಿದೆ. ಎಲ್ಲರಿಗೂ ಈ ಸಂಘದ ಬಗ್ಗೆ ಅಪಾರ ಅಭಿಮಾನವಿತ್ತು. ಕನ್ನಡ ಪ್ರೇಮಿ ಬುದ್ದಿವಂತ ಶೆಟ್ಟರ ಅವರಿಗೆ ಈ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕು ಎಂಬುದು ಆಶಯವಾಗಿತ್ತು ಅವರು ಕೂಡ ಸಾಕಷ್ಟು ಪ್ರಯತ್ನ ಮಾಡಿದ್ದರು. ನಂತರ ನಾನು ಸಂಘಕ್ಕೆ ಮತ್ತು ಮರಣೋತ್ತರವಾಗಿ ಶೆಟ್ಟರ್ ಅವರಿಗೂ ಪ್ರಶಸ್ತಿ ಸಿಗಬೇಕು ಎಂದು ಪ್ರಯತ್ನ ಮುಂದುವರೆಸಿದೆ. ಸಂಘಕ್ಕೆ ಈ ಬಾರಿ ಪ್ರಶಸ್ತಿ ಸಿಕ್ಕಿರುವುದು ನನ್ನ ಕನಸು ನನಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಭಾಗದ ಸಾಹಿತ್ಯ, ಸಂಸ್ಕೃತಿ ಉಳಿಯಬೇಕು ಎಂದು ಮಾಜಿ ಸಚಿವ ರಾಜೂಗೌಡ ಅವರು ಕೂಡ ತಮ್ಮ ರಾಜಕೀಯ ಸೇವೆಯಲ್ಲಿ ಸಂಘಕ್ಕೆ ಅನುದಾನ ಒದಗಿಸಿ ಕೊಟ್ಟಿರುತ್ತಾರೆ. ಎಂ.ಆರ್.ಬುದ್ದಿವಂತ ಶೆಟ್ಟರ ಮೂರ್ತಿ ಸ್ಥಾಪನೆ ವೇಳೆ ದೇಣ ಗೆ ನೀಡಿರುತ್ತಾರೆ. ಸಂಘದ ಸೇವೆ ಗುರುತಿಸಿ ಈಗಿನ ಸರಕಾರ ಪಕ್ಷಾತೀತವಾಗಿ ಸಂಘ, ಸಾಹಿತಿಗಳಿಗೂ ಪ್ರೋತ್ಸಾಹಿಸಿ ಪ್ರಶಸ್ತಿ ನೀಡಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಸರಕಾರದ ಎಲ್ಲ ಜನಪ್ರತಿನಿಧಿಗಳಿಗೂ ನಾನು ಕೃತಜ್ಞತೆ ಸಲ್ಲಿಸುವುದಾಗಿ ಸಜ್ಜನ್ ನುಡಿದರು.