ಕ್ರಾಂತಿವಾಣಿ ವಾರ್ತೆ ಸುರುಪುರ : ನಗರ ವ್ಯಾಪ್ತಿಯಲ್ಲಿ ಕಿರಿದಾದ ರಸ್ತೆಗಳಿದ್ದು, ಸಂಚಾರದಟ್ಟಣೆ ಅಧಿಕವಾಗಿದ್ದು, ಜನರು ಪರದಾಡುತ್ತಿದ್ದರೂ ಪೊಲೀಸ್ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ.
ನಗರಸಭೆ ವ್ಯಾಪ್ತಿಯ ಕೆಂಭಾವಿ ರೋಡ್, ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದ ರಸ್ತೆಗಳು, ಮಹಾತ್ಮ ಗಾಂಧಿ ವೃತ್ತ, ಹನುಮಾನ್ ಟಾಕೀಸ್ ರೋಡ್, ತಹಸೀಲ್ದಾರ್ ರಸ್ತೆ, ದರ್ಬಾರ್ ರೋಡ್, ಗೋಪಾಲಸ್ವಾಮಿ ರಸ್ತೆ, ಹಳೆ ಬಸ್ ನಿಲ್ದಾಣ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಅಧಿಕ ಪ್ರಮಾಣದಲ್ಲಿ ವಾಹನಗಳು ಮತ್ತು ಸಾರ್ವಜನಿಕರು ಸಂಚರಿಸುತ್ತಾರೆ.
ಬೆಳಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗಿ ಬಂದು ಮಾಡುತ್ತಾರೆ. ಆದರೆ ಸಂಚಾರಿ ನಿಯಮ ಪಾಲಿಸಲು ಸೂಚಿಸಬೇಕಾದ ಪೊಲೀಸ್ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತು ದಂಡ ವಸಲಿಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ವಿವಿಧ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.
ಪೊಲೀಸರು ಯಾವುದೇ ವಾಹನಗಳನ್ನು ತಡೆದು ಸಂಚಾರಿ ನಿಯಮ ಪಾಲಿಸುವಂತೆ ಸೂಚಿಸಿದ್ದು, ಸುರಪುರ ನಗರದಲ್ಲಿ ಕಾಣುವುದು ದುಷ್ತರವಾಗಿದೆ. ಬಸ್ಸುಗಳು ಎದುರುಬದರಾದಾಗ ದಾರಿ ಬಿಡಲು ಆಗದಂತ ಪರಿಸ್ಥಿತಿ ಇಲ್ಲಿನ ರಸ್ತೆಗಳದ್ದಾಗಿದೆ . ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ನಗರಕ್ಕೆ ಬರುವ ಟಂಟಂ, ಟಾಟಾ ಎಸಿ, ಲಾರಿ, ಆಟೋ ನಿಲುಗಡೆಗೆ ಪೊಲೀಸರು ಮಂತ್ಲಿ ವಸೂಲಿ ಮಾಡುತ್ತಾರೆ. ಈ ಬಗ್ಗೆ ಡಿಸಿ, ಎಸ್ ಪಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರಾದ ಮಲ್ಲಿಕಾರ್ಜುನ ಕ್ರಾಂತಿ, ಮಾನಪ್ಪ ಕಟ್ಟನಿ ಒತ್ತಾಯಿಸಿದ್ದಾರೆ.
ಬೀದಿಬದಿ ರಸ್ತೆಯ ಎರಡು ಕಡೆಯಿಂದಲೂ ಜನರು ತುಂಬಿರುತ್ತಾರೆ. ಪಾದಚಾರಿ ಗಳು ಮುಂದೆ ಹೋಗಲು ಪರದಾಡಬೇಕಿದೆ. ಸಂಚಾರಿ ನಿಯಮ ಪಾಲಿಸಬೇಕಾದ ಪೊಲೀಸ್ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ