ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ ಸುರಪುರ: ತಾಲೂಕಿನಲ್ಲಿ ರೈತರಿಗಾಗಿ ನಿರ್ಮಿಸುತ್ತಿರುವ ಪೀರಾಪುರದಿಂದ ಚೌಡೇಶ್ವರಿಹಾಳ ೩೫ ಕಿ.ಮೀ. ರಸ್ತೆಯೂ ಎರಡು ವರ್ಷ ಅವಧಿ ಪೂರ್ಣಗೊಳ್ಳುತ್ತಿದ್ದರೂ ಮುಗಿಯದೆ ಜನರು ಪರಿತಪಿಸುವಂತಾಗಿದೆ. ರಸ್ತೆ ಹದಗೆಟ್ಟಿದ್ದರೂ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು ಕಂಡು ಕಾಣದಂತೆ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದ್ದಾರೆ.
ಕೆಬಿಜೆನ್ನೆಲ್ ೨೦೨೧-೨೨ರಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಿದ ಕಾಮಗಾರಿಗಳಲ್ಲಿ ಕೃಷ್ಣ ಭಾಗ್ಯ ಜಲ ನಿಗಮದಿಂದ ಹುಣಸಗಿ ಮತ್ತು ಸುರಪುರ ತಾಲೂಕಿನಲ್ಲಿ ವಿವಿಧ ಗ್ರಾಮಗಳ ರೈತರ ರಸ್ತೆ ನಿರ್ಮಾಣವೂ ಒಂದಾಗಿದೆ. ತಾಲೂಕಿನ ರುಕ್ಮಾಪುರ ಮಾರ್ಗವಾಗಿ ಕುಪಗಲ್, ಚೌಡೇಶ್ವರಿಹಾಳಕ್ಕೆ ಹೋಗುವ ರಸ್ತೆಯನ್ನು ಕಿತ್ತು ಹಾಕಲಾಗಿದೆ. ದುರಸ್ತಿಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಕಳೆದ ೧೧ ದಿನಗಳಿಂದ ಬಸ್ ಸಂಚಾರವಿಲ್ಲದೆ ಜನರು, ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ರುಕ್ಮಾಪುರದಿಂದ ಕುಪಗಲ್ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಬರುವ ಹಳ್ಳಕ್ಕೆ ಹಾಕಿರುವ ತಾತ್ಕಾಲಿಕ ಬ್ರಿಡ್ಜ್ ಕುಸಿದು ಹೋಗಿದೆ. ಇದರಿಂದ ಯಾವುದೇ ಬಸ್‌ಗಳು ಬಾರದೆ ೧೧ ದಿನಗಳಾಗಿವೆ. ಬಳಿಕ ಗ್ರಾಮಸ್ಥರು ಡಿಪೋ ಮ್ಯಾನೇಜರ್ ಭೇಟಿ ಚರ್ಚಿಸಿದ್ದರಿಂದ ಹೊಸದಾಗಿ ಕಟ್ಟಿರುವ ಬ್ರಿಡ್ಜ್ ಮೇಲೆಯೇ ಹೋಗಲು ಅನುಮತಿ ನೀಡಿದ್ದಾರೆ. ರಸ್ತೆ ದುರಸ್ತಿ ಮಾತ್ರ ದೂರದ ಕನಸಾಗಿಯೇ ಉಳಿದಿದೆ.
ಅಲ್ಲಲ್ಲಿ ಆಳೆತ್ತರದ ಗುಂಡಿಗಳಿAದ ಆವೃತವಾಗಿವೆ. ಮಳೆ ಬಂದರೆ, ಕೆಸರು ಗದ್ದೆಯಾಗಿ ಮಾರ್ಪಡುತ್ತವೆ. ಕುಪಗಲ್, ಚೌಡೇಶ್ವರಿಹಾಳ ಗ್ರಾಮಗಳಿಗೆ ತೆರಳುವ ಪ್ರಮುಖ ರಸ್ತೆಯು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದರೂ ಯಾವೊಬ್ಬ ಅಧಿಕಾರಿಯು ಇತ್ತ ತಲೆ ಹಾಕದೆ ನಿರ್ಲಕ್ಷ್ಯ ವಹಿಸಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಪರದಾಟ: ವ್ಯಾಪಾರ ವಹಿವಾಟು ಹಾಗೂ ತಮ್ಮ ದಿನನಿತ್ಯದ ಕೆಲಸಕ್ಕಾಗಿ ನಿತ್ಯ ರೈತರು, ವ್ಯಾಪಾರಸ್ಥರು ಸುರಪುರ ಕೇಂದ್ರಕ್ಕೆ ತೆರಳುವ ವೇಳೆ ಗ್ರಾಮಸ್ಥರು ಹರಸಾಹಸಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸವಾರರ ಸ್ಥಿತಿ ಹೇಳತೀರದಾಗಿದೆ. ರಸ್ತೆಯಲ್ಲಿರುವ ಆಳೆತ್ತರದ ಗುಂಡಿಗಳಿಗೆ ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ.
ಈ ಮಾರ್ಗದ ರಸ್ತೆಯಲ್ಲಿ ಸಾವಿರಾರು ಎಕರೆ ಜಮೀನುಗಳಿವೆ. ನಿತ್ಯ ಹೊಲಗದ್ದೆಗಳಿಗೆ ಹೋಗಿ ಬರಲು ಈ ರಸ್ತೆಯೇ ಪ್ರಮುಖವಾಗಿದೆ. ಆದ್ದರಿಂದ ನಿತ್ಯ ನೂರಾರು ಸಾರ್ವಜನಿಕರು, ಟ್ರಾö್ಯಕ್ಟರ್, ಬಸ್, ಸೇರಿದಂತೆ ವಿವಿಧ ವಾಹನಗಳು ಸಂಚರಿಸುತ್ತವೆ. ಇಂಥ ಸಂದರ್ಭದಲ್ಲಿ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗಿದೆ.
ಮರಳು ಲಾರಿ ಅಬ್ಬರ: ರೈತರು ಓಡಾಡಲು ಇರುವ ರಸ್ತೆಯಲ್ಲಿ ಕೃಷ್ಣಾ ನದಿಯಿಂದ ತೆಗೆಯುವ ಮರಳನ್ನು ಟಿಪ್ಪರ್‌ನಲ್ಲಿ ಸಾಗಿಸುತ್ತಾರೆ. ನೂರಾರು ಟಿಪ್ಪರ್‌ಗಳು ಭಾರ ಹೊತ್ತು ಸಂಚರಿಸುವುದರಿಂದ ಎಂಥ ಗಟ್ಟಿ ಡಾಂಬಾರ್ ರಸ್ತೆಗಳನ್ನು ಹಾಕಿದರೂ ಕಿತ್ತು ಹೋಗುತ್ತಿವೆ. ಅಲ್ಲದೆ ಡಾಂಬಾರ ರಸ್ತೆ ಕಿತ್ತು ಹಾಕಿದ್ದರಿಂದ ಟಿಪ್ಪರ್ ಲಾರಿಗಳ ಅಬ್ಬರದಿಂದ ರಸ್ತೆಯಲ್ಲೇ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ಜನರು ಸಂಚಾರಕ್ಕೆ ಪರದಾಡುವಂತಾಗಿದೆ.
ಎರಡು ವರ್ಷಗಳಿಂದಲೂ ರಸ್ತೆ, ಕೆಟ್ಟು ಹೋಗಿದ್ದರು ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳು ದುರಸ್ತಿ ಮಾಡಿಸುವಲ್ಲಿ ವಿಫಲವಾಗಿದ್ದಾರೆ. ಚುನಾವಣೆ ಸಂದರ್ಭಗಳಲ್ಲಷ್ಟೇ ಇಲ್ಲಸಲ್ಲದ ಆಶ್ವಾಸನೆ ನೀಡಿ ಗ್ರಾಮಕ್ಕೆ ಭೇಟಿ ನೀಡುವ ರಾಜಕಾರಣ ಗಳು ಚುನಾವಣೆ ಮುಗಿದ ಬಳಿಕ ಜನರ ಆಶೋತ್ತರಗಳನ್ನು ಈಡೇರಿಸದೆ ಕೇವಲ ತಾಲೂಕು ಕೇಂದ್ರಗಳಿಗಷ್ಟೇ ಸೀಮಿತವಾಗಿದ್ದಾರೆ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕತ್ತಲು ಭಯ: ಮಾರ್ಗದುದ್ದಕ್ಕೂ ಕಿತ್ತು ನಿಂತಿರುವ ರಸ್ತೆಯಿಂದಾಗಿ ರಾತ್ರಿ ವೇಳೆ ಸಂಚರಿಸುವ ಪ್ರಯಾ ಣ ಕರು ಭಯದ ವಾತಾವರಣದಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಡಾಂಬರ್ ಕಾಣದ ರಸ್ತೆ, ಬೀದಿ ದೀಪದ ವ್ಯವಸ್ಥೆ ಇಲ್ಲದೆರ ನಡುವೆಯೇ ಸಂಚರಿಸಬೇಕಾಗಿದೆ.
ಕೋಟ್: ಹಂತ ಹಂತವಾಗಿ ರಸ್ತೆಯನ್ನು ಕಿತ್ತು ದುರಸ್ತಿಗೊಳಿಸಬೇಕಿತ್ತು. ಟೆಂಡರ್ ಪಡೆದವರು ೨೮ ಕಿ.ಮೀ. ರಸ್ತೆ ಕಿತ್ತು ಹಾಕಿರುವುದು ಸರಿಯಲ್ಲ. ಅ ಈಗಾಗಲೇ ಸಂಬಧಿಸಿದ ಗುತ್ತಿಗೆದಾರನಿಗೆ ಸೂಚಿಸಿದ್ದು, ಶೀಘ್ರವೇ ರಸ್ತೆ ಕಾಮಗಾರಿ ಆರಂಭಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು.
ಅಶೋಕ ರೆಡ್ಡಿ, ಎಇಇ, ಕೆಬಿಜೆನ್ನೆಲ್, ನಾರಾಯಣಪುರ.
ಕೋಟ್: ಕುಪಗಲ್ ಮಾರ್ಗದ ರಸ್ತೆ ದುರಸ್ತಿಯಾಗದ ಹಿನ್ನೆಲೆಯಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ಈ ಭಾಗದ ಗ್ರಾಮಸ್ಥರ ಹಿತ ಕಾಯಬೇಕು. ಇಲ್ಲದಿದ್ದರೆ ಸಂಘಟನೆ ವತಿಯಿಂದ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ವೆಂಕಟೇಶ ನಾಯಕ ಕುಪಗಲ್, ರೈತ ಸಂಘದ ಮುಖಂಡ, ಸುರಪುರ ತಿಳಿಸಿದ್ದಾರೆ.