ಸಗರ ಮನಸೂರೆಗೊಂಡ ಜನಪದ ಸಾಂಸ್ಕೃತಿಕ ಕಾರ್ಯಕ್ರಮ: ದಸರಾದಿಂದ ದೀಪಾವಳಿವರೆಗೆ ಸಾಂಸ್ಕೃತಿಕ ಹಬ್ಬ | ರೈತರಿಂದ ವಿವಿಧ ಬಗೆಯ ಜಾನಪದ ಕಲೆ ಪ್ರದರ್ಶನ.

ಕ್ರಾಂತಿ ವಾಣಿ ಶಹಾಪುರ.

(ಯಾದಗಿರಿ ಜಿಲ್ಲೆ) ಆಧುನಿಕ ಭರಾಟೆಯಲ್ಲಿ ನಮ್ಮಿಂದ ಜಾನಪದ ಕಲೆ ಮಾಯವಾಗುತ್ತಿರುವ ಈ ಕಾಲದಲ್ಲಿ ಜನಪದ ಹಾಡು, ಕೋಲಾಟ ಸೇರಿದಂತೆ ಇತರೆ ಗ್ರಾಮೀಣ ಹೆಜ್ಜೆ ಕುಣಿತ, ಬಗೆ ಬಗೆ ನೃತ್ಯಗಳು, ರೈತಾಪಿಜನ ಕಾಲಾನುಕ್ರಮವಾಗಿ ತಿಂಗಳ ಪೂರ್ತಿ ಆಚರಿಸುವ ರೈತರ ಸಾಂಸ್ಕೃತಿಕ ಹಬ್ಬ ಇಂದಿಗೂ ಜೀವಂತವಾಗಿದೆ ಎನ್ನುವುದಕ್ಕೆ ತಾಲೂಕಿನ ಸಗರ ಗ್ರಾಮದಲ್ಲಿ ನಡೆಯುವ ತಿಂಗಳ ಪೂರ್ತಿ ಸಂಸ್ಕೃತಿ ಹಬ್ಬವೇ ಸಾಕ್ಷಿಯಾಗಿದೆ.

ತಾಲೂಕಿನ ಸಗರ ಗ್ರಾಮದಲ್ಲಿ ಪ್ರಸ್ತುತ ಈ ಸಂದರ್ಭದಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆ ಕಾರ್ಯಕ್ಕೆ ಅಲ್ಪವಿರಾಮವಿಟ್ಟು ಪ್ರತಿವರ್ಷ ದಸರಾ ಹಬ್ಬದದಿಂದ ಆರಂಭಗೊಳ್ಳುವ ರೈತರ ಕುಣಿತ,ಹಾಡು ತಿಂಗಳವರೆಗೆ ಅಂದರೆ ದೀಪಾವಳಿ ಹಬ್ಬದವರೆಗೂ ನಡೆಯುತ್ತದೆ. ಪ್ರತಿ ರಾತ್ರಿ ಇಲ್ಲಿನ ಆರು ಕಟ್ಟೆ ಆಂಜನೇಯ ಸ್ವಾಮಿ ದೇವಸ್ಥಾನದ ಅಂಗಳದಲ್ಲಿ ಆಧ್ಯಾತ್ಮಿಕ, ಮನೋರಂಜನೆ ಮತ್ತು ಜನಪದ ಹಾಡು ಶ್ರೀರಂಗನ ಅಮೋಘ ಕಥಾನಕ ಅದ್ಭುತವಾಗಿ ಜರುಗುತ್ತವೆ. ಈ ಕಾರ್ಯಕ್ರಮವನ್ನು ನೋಡಲು ಗ್ರಾಮದ ಮಹಿಳೆಯರು ಮಕ್ಕಳು ಸೇರಿದಂತೆ ಜನ ಸಮೂಹವೇ ಸೇರಿರುತ್ತದೆ.

ಪ್ರತಿ ದೀಪಾವಳಿ ಹಬ್ಬದಂದು ಗ್ರಾಮದ ಒಕ್ಕಲಿಗೇರ ಮಠದಲ್ಲಿ ಸಡಗರ ಸಂಭ್ರಮದಿಂದ ಈ ಈ ಕಾರ್ಯಕ್ರಮಕ್ಕೆ ಮುಕ್ತಾಯಗೊಳಿಸುವ ಪರಿಪಾಠ ಬೆಳೆದು ಬಂದಿದೆ. ಈ ಸಂಪ್ರದಾಯ ನೂರಾರು ವರ್ಷಗಳಿಂದ ನಡೆದುಕೊಂಡು ಬರುವುದು ವಿಶೇಷವಾಗಿದೆ. ಅಂದಿನಿಂದ ಇಂದಿನವರೆಗೂ ಹಿರಿಯ ರೈತರು ಮುಂದುವರೆಸಿಕೊಂಡು ಬರುತ್ತಿದ್ದಾರೆ.

ವರ್ಷವಿಡಿ ದುಡಿಯುವ ರೈತನಿಗೆ ಈ ಕಾರ್ಯಕ್ರಮದಿಂದ ಚೈತನ್ಯ ಶಕ್ತಿ ಹೆಚ್ಚಾಗಿ ಮತ್ತೇ ತನ್ನ ಕಾಯಕದಲ್ಲಿ ತೊಡಗಿಸಿಕೊಳ್ಳಲು ಅಗಾಧವಾದ ಮಾನಸಿಕ ಶಕ್ತಿ ದೊರಕುತ್ತದೆ ಎನ್ನುತ್ತಾರೆ ಇಲ್ಲಿನ ರೈತರು.

ಕಾಲಿಗೆ ಗೆಜ್ಜೆ ಕೈಯಲ್ಲಿ ಕೋಲು ಹಿಡಿದು ಹಿರಿಯರು ಕಿರಿಯ ರೋಡನೆ ಸೇರಿ ಲಯಬದ್ಧವಾಗಿ ಹೆಜ್ಜೆ ಹಾಕುತ್ತ ಕೋಲಾಟದಲ್ಲಿ ಪಾಲ್ಗೊಳ್ಳುತ್ತಾರೆ. ಹಿಂದಿನಿಂದಲೂ ಜಾತಿ, ಧರ್ಮ ಭೇದವಿಲ್ಲದೆ ಎಲ್ಲಾ ಸಮುದಾಯದವರು ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.ರಾಗ, ಲಯಬದ್ಧ ಹಾಡು, ತಾಳ, ವಾದ್ಯಕ್ಕೆ ತಕ್ಕಂತೆ ಕುಣಿತ ನೋಡುಗರನ್ನು ಮಂತ್ರಮುಕ್ತರನ್ನಾಗಿಸುತ್ತದೆ.

ಗ್ರಾಮದ ಎಲ್ಲಾ ರೈತರು ಒಂದೇ ಸೇರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನವೊಲ್ಲಾಸದಿಂದ ಭಾಗವಹಿಸಿ ಸಂತಸ ಪಡುತ್ತಾರೆ. ಅಲ್ಲದೆ ವಿಶೇಷವಾಗಿ ಇಲ್ಲಿ ರೈತರು ಕೃಷ್ಣಲೀಲೆ, ಶ್ರೀರಂಗ, ಹಾಲು,ಮೊಸರು, ಬೆಣ್ಣೆ, ತುಪ್ಪ ಸೇರಿದಂತೆ ರೈತರ ಬೆಳೆಗಳ ಮೇಲೆ ಹಲವು ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ.ಇಲ್ಲಿ ವಿವಿಧ ಕುಣಿತಗಳು ಪ್ರದರ್ಶನಗೊಳ್ಳುತ್ತವೆ.

ಕಣ್ಮನ ಸೆಳೆಯುವ ಕುಣಿತ. ಚಿತ್ರ ಕೋಲಾಟ, ಬಾಗಿ ಕುಣಿಯುವ ಕೋಲಾಟ ಸೇರಿದಂತೆ ಇತರೆ ಕುಣಿತಗಳ ಜೊತೆಗೆ ರಸಭರಿತ ಹಾಡುಗಳು ಪ್ರದರ್ಶಿಸುವ ಮೂಲಕ ನೆರೆದ ಜನರ ಮನಸೂರೆಗೊಳಿಸುತ್ತಿದೆ.

ಜನಪದ ಕಲೆ ಜೀವಂತಿಕೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಸಿಲುಕುತ್ತಿರುವ ನಮ್ಮ ಮೂಲ ಸಂಸ್ಕೃತಿ ವಿನಾಶದ ಕಡೆಗೆ ಸಾಗುತ್ತಿವೆ. ಕಲೆಗಳ ಜೀವಂತಿಕೆಯ ಉಳಿವಿಕೆಗೆ ಅಗತ್ಯವಿರುವ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಅವಶ್ಯಕತೆ ಇದ್ದು, ಸಗರ ಗ್ರಾಮದಲ್ಲಿ ನಡೆಯುವ ಗ್ರಾಮೀಣ ಸೊಗಡಿನ ಜಾನಪದ ಕಲೆಯನ್ನು ಸೂಮಾರು ವರ್ಷಗಳಿಂದ ಜೀವಂತಿಕೆ ಇಡುವುದರ ಜೊತೆಗೆ ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಪ್ರತಿ ಹಳ್ಳಿಯಲ್ಲೂ ಇರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕಾಗಿದೆ.

ಕೋಟ್

ಆಧುನಿಕತೆಯ ಪ್ರಭಾವದಿಂದ ನಮ್ಮ ಶ್ರೀಮಂತಿಕೆಯ ಜನಪದ ಕಲಾ ಪ್ರಕಾರಗಳು ನಶಿಸುತ್ತಿವೆ. ಈ ನಾಡಿನ ಪ್ರತಿ ಹಳ್ಳಿಯಲ್ಲೂ ವಿಶಿಷ್ಟ ಪ್ರತಿಭೆಗಳಿವೆ. ಅವರಲ್ಲಿ ಹುದುಗಿರುವ ಜನಪದ ಕಲೆಯನ್ನು ಪೋಷಿಸಿ ಬೆಳೆಸುವ ಕಾರ್ಯ ನಡೆಯಬೇಕಾಗಿದೆ.

ದುರ್ಗಪ್ಪ ನಾಯಕ್. ಗಡಿ ಭದ್ರತಾ ಯೋಧ.

ಹಾಗೂ ಜಾನಪದ ಹಾಡುಗಾರ. ಸಗರ.

ಕೋಟ್.

ಸಗರನಾಡಿನ ಪುಣ್ಯಭೂಮಿಯ ಸಗರ ಗ್ರಾಮ ತನ್ನದೇ ಆದ ಇತಿಹಾಸ ಪರಂಪರೆಯನ್ನು ಹೊಂದಿದೆ. ಸುಮಾರು ವರ್ಷಗಳಿಂದಲೂ ಸಂಸ್ಕೃತಿಕ ಕಲೆ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಉಳಿಸಿಕೊಂಡು ಬಂದಿದೆ. ಪ್ರತಿ ವರ್ಷ ದಸರಾ ಹಬ್ಬದಿಂದ ಪ್ರಾರಂಭವಾಗುವ ಸಂಸ್ಕೃತಿಕ ಕಾರ್ಯಕ್ರಮ ತಿಂಗಳ ಪೂರ್ತಿ ನಡೆದು ದೀಪಾವಳಿ ಹಬ್ಬದಂದು ಗ್ರಾಮದ ಒಕ್ಕಲಿಗರ ಮಠದಲ್ಲಿ ರೈತರ ಕೋಲಾಟದೊಂದಿಗೆ ಮುಕ್ತಾಯವಾಗುತ್ತದೆ.

ಮರುಳ ಮಹಾಂತ ಶಿವಾಚಾರ್ಯರು.

ಒಕ್ಕಲಿಗರ ಮಠ ಸಗರ.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ