ಮೌಢ್ಯ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ: ಗುರುಮೂರ್ತಿ ಶಿವಮೊಗ್ಗ,ಶೋಷಿತರ ಜಾಗೃತಿ ದಿನ ಕಾರ್ಯಕ್ರಮಕ್ಕೆ ಚಾಲನೆ..

ವರದಿ: ಎನ್.ಎನ್.

ಕ್ರಾಂತಿವಾಣಿ ವಾರ್ತೆ ಸುರಪುರ: ಮೌಢ್ಯವನ್ನು ಪ್ರಶ್ನಿಸುವ ಮನೋಭಾವ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕಿದ್ದು, ದಬ್ಬಾಳಿಕ ಮತ್ತು ದೌರ್ಜನ್ಯದ ವಿರುದ್ಧ ಹೋರಾಟ ನಡೆಸಿ ನಮ್ಮ ನ್ಯಾಯವನ್ನು ನಾವು ಪಡೆದುಕೊಳ್ಳಬೇಕು ಎಂದು ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿಸಿದ ಕದಸಂಸ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಶಿವಮೊಗ್ಗ ಹೇಳಿದರು.


ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಮಂಗಳವಾರ ಭಾರತ ಸಂವಿಧಾನ ದಿನ ನಿಮಿತ್ತ ಹಮ್ಮಿಕೊಂಡಿದ್ದ ಶೋಷಿತರ ಜಾಗೃತಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ೧೯೪೯, ನವೆಂಬರ್ ೨೬ರಂದು ಸಂವಿಧಾನ ಸಮರ್ಪಿಸಿದರೂ ೧೯೫೦ ಜನವರಿ ೨೬ರಂದು ಜಾರಿಗೊಳಿಸಲಾಯಿತು. ಇಷ್ಟು ತಡಯಾಕೆ ಆಯ್ತು ಎನ್ನುವ ಹುನ್ನಾರವನ್ನು ಪ್ರತಿಯೊಬ್ಬರೂ ಅರಿಯಬೇಕು. ಜಾಗೃತಿಯಾಗಲೂ ಓದು ಅಗತ್ಯವಾಗಿದೆ ಎಂದರು.
ಪುಸ್ತಕಗಳ ಓದಿನಿಂದ ಜ್ಞಾನ ಬರುತ್ತಿದೆ. ದಲಿತರು ಕುಡಿಯುವುದನ್ನು ನಿಲ್ಲಿಸಬೇಕು. ಸಂವಿಧಾನದ ಆಶಯಗಳು, ಪ್ರಜಾಸತ್ಯಾತ್ಮಕತೆಗಳು ಕುಸಿಯುತ್ತಿವೆ. ಸಾಮಾಜಿಕ ನ್ಯಾಯ ಮಾಯವಾಗುತ್ತಿದ್ದು, ನಿರುದ್ಯೋಗ ಸಮಸ್ಯೆ ತೀವ್ರವಾಗುತ್ತಿದೆ. ಅಂಬೇಡ್ಕರ್ ವಿಚಾರಧಾರೆಗಳನ್ನು ಕತ್ತಲೆಯಲ್ಲಿಡುವ ಕೆಲಸ ವ್ಯವಸ್ಥಿತವಾಗಿ ನಡೆಯಿತು ಎಂದು ಆರೋಪಿಸಿದರು.

ಸಂಘಟನೆಯ ಜಿಲ್ಲಾ ಸಂಚಾಲಕ ನಿಂಗಣ್ಣ ಗೋನಾಲ ಮಾತನಾಡಿ, ಒಂದು ಕಾಲದಲ್ಲಿ ದಲಿತರು ಹೊರಗೆ ಹೋಗದ ಸ್ಥಿತಿಯಿತ್ತು. ಇಂತಹ ಜಾತೀಯತೆ, ಮೌಢ್ಯತೆ, ಅಸಮಾನತೆ ವಿರುದ್ಧ ಪೆರಿಯಾರ, ಬುದ್ಧ, ಬಸವ, ಅಂಬೇಡ್ಕರ್ ಹೋರಾಟ ನಡೆಸಿ ಜಾಗೃತಿ ಮೂಡಿಸಿದರು. ಅಂಬೇಡ್ಕರ್ ಅವರು ಶಾಲೆಯನ್ನು ಕಲಿಯುವ ದಿನಗಳಲ್ಲಿ ಅವರು ಅನುಭವಿಸಿದ ನೋವು ನೋಡಿದರೆ ಕರಳು ಕಿವುಚುತ್ತದೆ. ಈ ನೋವುಗಳೇ ವಿಶ್ವದಲ್ಲೇ ದೊಡ್ಡ ಸಂವಿಧಾನವನ್ನು ನೀಡಲು ಪ್ರೇರಣೆಯಾಗಿದೆ. ಇದರಿಂದಲೇ ತುಳಿತಕ್ಕೊಳಗಾದವರು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ನಗರದ ರಾಜಾ ವೆಂಕಟಪ್ಪ ನಾಯಕ ವೃತ್ತದಿಂದ ಬೈಕ್ ರ‍್ಯಾಲಿಯೂ ಆರಂಭವಾಗಿ ಡಾ. ಬಿ.ಆರ್. ಅಂಬೇಡ್ಕರ್ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದ ಮೂಲಕ ಗರಡುದ್ರಿ ಕಲಾಮಂದಿರ ತಲುಪಿತು.
ರಾಜ್ಯ ಸಂಘಟನಾ ಸಂಚಾಲಕ ಹನುಮಂತಪ್ಪ ಕಾಕರಗಲ್ ಅಧ್ಯಕ್ಷತೆ ವಹಿಸಿದ್ದರು. ದಲಿತ ಮುಖಂಡರಾದ ನಂದಕುಮಾರ್ ಬಾಂಬೇಕರ್, ನಾಗಣ್ಣ ಕಲ್ಲದೇವನಹಳ್ಳಿ, ರಾಹುಲ್ ಹುಲಿಮನಿ, ನಾಗರಾಜ ಓಕಳಿ, ಚಂದ್ರಶೇಖರ ಹಸನಾಪುರ, ಭೀಮಣ್ಣ ಹುದ್ದಾರ, ಈಶ್ವರ ಕಟ್ಟಿಮನಿ, ದಾನಪ್ಪ ಕಡಿಮನೆ, ಧರ್ಮಣ್ಣ ಹೊಸಮನಿ, ಎಚ್.ಆರ್. ಬಡಿಗೇರಾ, ಹಣಮಂತಪ್ಪ ಪೇಠ ಅಮ್ಮಾಪುರ, ಸದಾಶಿವ ಬೊಮ್ಮನಹಳ್ಳಿ, ರಮೇಶ ಸುಗೂರ, ಮಲ್ಲು ವಜ್ಜಲ್, ಭೀಮಣ್ಣ ಅಡ್ಡೊಡಗಿ, ಚಂದ್ರು ದೀವಳಗುಡ್ಡ ಸೇರಿದಂತೆ ಇತರರಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ