ಕನಕದಾಸರ ಆದರ್ಶ ಮೈಗೂಡಿಸಿಕೊಳ್ಳಿ : ಯಲ್ಲಪ್ಪ ನಾಯಕ, ನಗರಸಭೆಯಲ್ಲಿ ಕನಕದಾಸರ ಜಯಂತಿ

ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ  ಸುರಪುರ: ಭಕ್ತಿ ಪರಂಪರೆಯ ಮೂಲಕ ಸಮಾಜದಲ್ಲಿನ ಜಾತೀಯತೆ, ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಟ ನಡೆಸಿದ ಮಹಾನ್ ಸಂತ ಕನಕದಾಸರು ಎಂದು ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಡೊಣ್ಣಿಗೇರಾ ಹೇಳಿದರು.
ನಗರದ ನಗರಸಭೆಯ ಸಭಾಂಗಣದಲ್ಲಿ ಗುರುವಾರ ಕನಕದಾಸರ ಜಯಂತಿ ಆಚರಿಸಿ ಮಾತನಾಡಿದ ಅವರು, ಕನಕದಾಸರು ತಮ್ಮಲ್ಲಿರುವ ಅಪಾರ ಸಂಪತ್ತನ್ನು ಬಡವರಿಗೆ ಬಗ್ಗರಿಗೆ ಹಂಚುವ ಮೂಲಕ ಕನಕರೆಂದು ಹೆಸರು ಪಡೆದರು. ವಿಜಯನಗರದ ಅರಸರ ಕಾಲಘಟ್ಟದಲ್ಲಿ ಮಾಂಡಲೀಕರಾಗಿ ಕಾರ್ಯ ನಿರ್ವಹಿಸಿದರು. ಭಗವಂತನು ತಮ್ಮ ಕನಸಿನಲ್ಲಿ ಬಂದು ಸಾಮಾಜಿಕ ಸೇವೆ ಕೈಗೊಳ್ಳುವಂತೆ ಪ್ರೇರೇಪಿಸಿದ್ದರಿಂದ ಒಂದು ಬಿಳಿ ವಸ್ತ್ರವನ್ನು ಸೊಂಟಕ್ಕೆ ಸುತ್ತಿಕೊಂಡು ಕರಿ ಕಂಬಳಿಯನ್ನು ಹೆಗಲ ಮೇಲೆ ಹಾಕಿಕೊಂಡು ಕೈಯಲ್ಲಿ ಒಂದು ತಂಬುರಿಯನ್ನು ಹಿಡಿದು ಸಾಹಿತ್ಯದ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದರು. ಕನ್ನಡ ದಾಸ ಸಾಹಿತ್ಯ ಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದರು ಎಂದರು.
ಆಗಿನ ಕಾಲಘಟ್ಟದಲ್ಲಿದ್ದ ಜಾತೀಯತೆಯನ್ನು ಕುಲಕುಲ ವೆಂದು ಒಡೆದಾಡದಿರಿ ನಿಮ್ಮ ನೆಲೆಯನ್ನು ನೀವು ಬಲ್ಲಿರೇ ಎನ್ನುತ್ತಾ ತಮ್ಮ ಸಾಹಿತ್ಯದ ಮೂಲಕ ಜಾತೀಯತೆ ಯನ್ನು ಉಗ್ರವಾಗಿ ಖಂಡಿಸಿದರು. ಜನರಲ್ಲಿ ಪರಿವರ್ತನೆ ಮಾಡಲು ಪ್ರಯತ್ನಿಸಿದರು. ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದವರಲ್ಲಿ ಅಗ್ರಗಣ್ಯವಾಗಿದ್ದಾರೆ ಎಂದು ಹೇಳಿದರು.
ನಗರ ಸಭೆ ಸದಸ್ಯರಾದ ರಾಜಾ ಪಿಡ್ಡ ನಾಯಕ, ಮಾನಪ್ಪ ಚಳ್ಳಿಗಿಡ, ಅಹಮದ್ ಶರೀಫ್, ಕಮರುದ್ದೀನ್, ಜುಮ್ಮಣ್ಣ ಕೆಂಗೂರಿ, ಶಿವರಾಜ್, ನಗರಸಭೆ ಎಇಇ ಶಾಂತಪ್ಪ ಸೇರಿದಂತೆ ಇತರರು ಇದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ