ಬಿಸಿಯೂಟ ಅಡುಗೆಎಣ್ಣೆ ಕಾಳಸಂತೆಯಲ್ಲಿ ಮಾರಾಟ: ಕದಸಂಸ ತನಿಖೆಗೆ ಒತ್ತಾಯ

ವರದಿ: ಎನ್.ಎನ್.
ಸುರಪುರ: ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟಕ್ಕೆ ಪೂರೈಸುವ ಅಡುಗೆ ಎಣ್ಣೆಯನ್ನು ಗೋದಾಮಿನ ವ್ಯವಸ್ಥಾಪಕರು ಹಾಗೂ ಅಕ್ಷರ ದಾಸೋಹ ತಾಲೂಕಾ ಅಧಿಕಾರಿಗಳು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಬುಧವಾರ ಕದಸಂಸ (ಅಂಬೇಡ್ಕರವಾದ) ದಿಂದ ಗ್ರೇಡ್-೨ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಸಂಚಾಲಕ ಮಾಳಪ್ಪ ಕಿರದಳ್ಳಿ, ಪಡಿತರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ  ಗೋದಾಮಿನಲ್ಲಿ ಸುಮಾರು ೧೦೦೦ ಲೀಟರ್‌ಕ್ಕು ಹೆಚ್ಚು ಅಡುಗೆ ಎಣ್ಣೆ ಅಕ್ಷರದಾಸೋಹ ಯೋಜನೆಗೆ ಸರಬರಾಜು ಆಗುತ್ತಿದ್ದು, ಈ ಎಲ್ಲಾ ಗೋದಾಮಿನ ವ್ಯವಸ್ಥಾಪಕರು ಹಾಗೂ ಅಕ್ಷರ ದಾಸೋಹ ತಾಲೂಕಾ ಅಧಿಕಾರಿಗಳು ಸೇರಿ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸುರಪುರ ತಾಲೂಕಿನ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಆಹಾರ ಧಾನ್ಯ ಸರಬರಾಜು ಮಾಡಲಾಗುತ್ತಿದೆ. ಈ ಆಹಾರ ಧಾನ್ಯವನ್ನು ಗೋದಾಮಿನಲ್ಲಿ ಸಂಗ್ರಹಿಸಿ ಇಡಲಾಗಿದೆ. ಈ ಆಹಾರವು ಸರ್ಕಾರದಿಂದ ಶಾಲಾ ಬಡ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಪೂರೈಸಲಾಗುತ್ತದೆ. ಆದರೆ ಮಧ್ಯಾಹ್ನ ಬಿಸಿಯೂಟಕ್ಕೆ ಅಡುಗೆ ಎಣ್ಣೆ ಬಂದಿಲ್ಲ ಎನ್ನುತ್ತಾ ಸರಕಾರಕ್ಕೆ ವಂಚನೆ ಮಾಡುತ್ತಿದ್ದಾರೆ. ಅಡುಗೆ ಎಣ್ಣೆಯನ್ನು ಮಧ್ಯಾಹ್ನ ಬಿಸಿಯೂಟಕ್ಕೆ ಸಬರಾಜು ಮಾಡದೆ ಗೋದಾಮಿನ ವ್ಯವಸ್ಥಾಪಕ ಬಸವಂತಪ್ಪ ಮತ್ತು ಅಕ್ಷರದಾಸೋಹ ತಾಲೂಕು ಅಧಿಕಾರಿ ಯಲ್ಲಪ್ಪ ಚಂದನಕೇರಿ ಅಡುಗೆ ಎಣ್ಣೆಯನ್ನು ಕಾಳುಸಂತೆಯಲ್ಲಿ ಮಾರಾಟ ಮಾಡಿರುವ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ತಾಲೂಕು ಸಂಚಾಲಕ ಗೊಲ್ಲಾಳಪ್ಪ ಕಟ್ಟಿಮನಿ, ಶರಣಪ್ಪ ತಳವಾರಗೇರಾ, ಕೆಂಚಪ್ಪ ಕಟ್ಟಿಮನಿ, ಪರಶುರಾಮ ಸಾಸನೂರು, ಮಲ್ಲು, ಅಂಬ್ರೇಶ ದೊಡ್ಡಮನಿ, ಮಡಿವಾಳಪ್ಪ, ಉಮೇಶ, ಹಣಮಂತ, ವೀರೇಶ, ಬಸಪ್ಪ ಸೇರಿದಂತೆ ಇತರರಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ