ಅಂಬೇಡ್ಕರ್ ರನ್ನು ವಿರೋಧಿಸುವವರು ಮನುಷ್ಯರೆ ಅಲ್ಲ.
ಮೂರ್ತಿಯ ಸ್ಥಾಪನೆ ಆಗೋವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಜ್ಞಾನಪ್ರಕಾಶ್ ಸ್ವಾಮೀಜಿ,
ಕ್ರಾಂತಿ ವಾಣಿ ಶಹಾಪುರ
ಈ ಭೂಮಿಗೆ ಸೂರ್ಯನ ಬೆಳಕು ಎಷ್ಟು ಮುಖ್ಯವೋ ಅಷ್ಟೇ ಈ ದೇಶಕ್ಕೆ ಅಂಬೇಡ್ಕರ್ ಅವರು ಮುಖ್ಯ. ಅವರು ಈ ದೇಶವನ್ನು ನಿತ್ಯ ಬೆಳಗುವ ಸೂರ್ಯ ಇದ್ದಂತೆ, ಇಂತಹ ವಿಶ್ವಮಾನವ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಯನ್ನು ನಗರದ ಗ್ರಾಮಾಂತರ ಬಸ್ ನಿಲ್ದಾಣದ ಆವರಣದಲ್ಲಿ ಕೂಡಿಸಲು ಮೀನಾ ಮೇಷ ಎಣಿಸಬಾರದು, ತಕ್ಷಣ ಸಾರಿಗೆ ಇಲಾಖೆ, ಸರ್ಕಾರ ಅನುಮತಿ ನೀಡಬೇಕು ಎಂದು ಮೈಸೂರಿನ ಉರಿಲಿಂಗಪೆದ್ದಿ ಪೀಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಹೇಳಿದರು.
ನಗರದ ಗ್ರಾಮಾಂತರ ಬಸ್ ನಿಲ್ದಾಣ ಆವರಣದ ಉದ್ಯಾನವನದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಸ್ಥಾಪಿಸಲು ಒತ್ತಾಯಿಸಿ ದಲಿತ ಸಂಘಟನೆಗಳು ಹಾಗೂ ಇತರೆ ಸಮುದಾಯದ ಸಂಘಟನೆಗಳು ಹಾಗೂ ಪ್ರಗತಿಪರ ಚಿಂತಕರು ಆರು ದಿನಗಳಿಂದ ನಿರಂತರ ನಡೆಯುತ್ತಿರುವ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು,
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬಹಳ ಪ್ರಸಿದ್ಧ ರಾಜಕೀಯ ನಾಯಕ, ತತ್ವಜ್ಞಾನಿ, ಬರಹಗಾರ, ಅರ್ಥಶಾಸ್ತ್ರಜ್ಞ, ವಿದ್ವಾಂಸ ಮತ್ತು ಭಾರತದಲ್ಲಿ ಅಸ್ಪೃಶ್ಯತೆ ಮತ್ತು ಇತರ ಸಾಮಾಜಿಕ ಅಸಮಾನತೆಯನ್ನು ನಿರ್ಮೂಲನೆ ಮಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಸಮಾಜ ಸುಧಾರಕರಾಗಿದ್ದರು. ಇಡೀ ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಸಂವಿಧಾನವನ್ನು ಈ ದೇಶಕ್ಕೆ ನೀಡಿದ್ದಾರೆ. ಭಾರತೀಯ ಸಮಾಜದಲ್ಲಿ ಅಂಬೇಡ್ಕರ್ ಅವರ ಪ್ರಮುಖ ಕೊಡುಗೆಯೆಂದರೆ ಭಾರತೀಯ ಸಂವಿಧಾನದ ಕರಡು, ಇದು ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಕಾನೂನುಬಾಹಿರವಾದ ಜಾತಿ ಆಧಾರಿತ ತಾರತಮ್ಯದ ತತ್ವಗಳನ್ನು ಪ್ರತಿಪಾದಿಸುತ್ತದೆ. ವಿಶ್ವಮಾನವ ಅಂಬೇಡ್ಕರ್ ಅವರ ಮೂರ್ತಿ ಕೂಡಿಸುವುದೇ ಒಂದು ದೊಡ್ಡ ಹೆಮ್ಮೆಯ ವಿಷಯ. ಮೂರ್ತಿ ಕೂಡಿಸಲು ಹೋರಾಟ ನಡೆಸಬೇಕಾಗಿರುವ ದುಸ್ಥಿತಿ ಬಂದಿರೋದು ನಾಚಿಕೆಗೇಡಿನ ಸಂಗತಿಯಾಗಿದೆ. ಸಾರಿಗೆ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಈಗಾಗಲೇ ಮಾತನಾಡಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಸ್ಥಳದಲ್ಲಿ ಅಂಬೇಡ್ಕರ್ ಅವರ ಮೂರ್ತಿ ಸ್ಥಾಪನೆ ಆಗೆ ಆಗುತ್ತದೆ ಇದನ್ನು ತಡೆಯುವ ಶಕ್ತಿ ಯಾರಿಂದಲೂ ಸಾಧ್ಯವಿಲ್ಲ ಎಂದರು.
ಇದೆ ವೇಳೆ ಮಾತನಾಡಿದ ಜೆಡಿಎಸ್ ಮುಖಂಡ ಹಣಮೇಗೌಡ ಬಿರನಕಲ್ ಅವರು, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವಮಾನವ ಈ ದೇಶದ ದಲಿತರ ಹಿಂದುಳಿದವರ ಹಾಗೂ ಎಲ್ಲಾ ವರ್ಗದ ಜನರ ರಕ್ಷಣೆ ಮಾಡುವಂತಹ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ಅವರ ಮೂರ್ತಿ ಸ್ಥಾಪನೆ ಆಗಬೇಕಾಗಿರೋದು ನ್ಯಾಯ. ಇದಕ್ಕೆ ನಮ್ಮ ಎಲ್ಲಾ ಸಂಪೂರ್ಣ ಸಹಾಯ ಸಹಕಾರವಿದೆ ಎಂದರು.
ಸರ್ಕಾರದ ನಿಯಮಾನಸಾರ ಅಂಬೇಡ್ಕರ್ ಮೂರ್ತಿ ಸ್ಥಾಪನೆ ಸಹಕಾರ,
ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಭಾರತಕ್ಕೆ ಪರಿಚಯಿಸಿದ ಡಾ.ಬಿ.ಆರ್.ಅಂಬೇಡ್ಕರ್‌ರವರ ಚಿಂತನೆಗಳು ಇಂದು ಜಗದಗಲ ಮತ್ತು ಮುಗಿಲಗಲ ಚಾಚಿಕೊಂಡಿವೆ. ಏಳು ದಶಕಗಳ ಹಿಂದೆ ಭಾರತವು ಸ್ವತಂತ್ರ ದೇಶವಾಗಿ ಹೊರಹೊಮ್ಮಿದಾಗ ಈ ದೇಶದ ಮುಂದೆ ಸಾಕಷ್ಟು ಜ್ವಲಂತ ಸಮಸ್ಯೆಗಳು ವ್ಯಾಪಿಸಿಕೊಂಡಿದ್ದವು. ಅಂಬೇಡ್ಕರ್ ಅವರು ನ್ಯಾಯ ಮತ್ತು ಸಮಾನತೆಯ ಅನ್ವೇಷಣೆ, ಪ್ರಾದೇಶಿಕ ತಾರತಮ್ಯ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆಯನ್ನು ಸಾದೃಶ್ಯವಾಗಿಸುವ ಕನಸು ಹೊತ್ತು ಆ ದಿಕ್ಕಿನಲ್ಲಿ ಹಗಲಿರುಳು ಶ್ರಮಿಸಿದರು. ಈ ದೇಶದ ಜನರು ಹೊಂದಿಲ್ಲ ಒಂದು ರೀತಿಯಲ್ಲಿ ಅಂಬೇಡ್ಕರ ಅವರನ್ನು ಕ್ಷಣ ಕ್ಷಣಕ್ಕೂ ನೆನೆಸುತ್ತಾರೆ. ಮಹಾನ್ ನಾಯಕನ ಮೂರ್ತಿ ಕೂಡಿಸುವುದು ಸಮಂಜಸವಾಗಿದೆ. ಆದರೆ ಸರ್ಕಾರದ ನಿಯಮನುಸಾರ ಕೂಡಿಸಿದರೆ ಅದಕ್ಕೆ ಒಂದು ಬೆಲೆ ಬರುತ್ತದೆ. ಈಗ ಹೇಗೂ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದೆ ಕೆಲ ಮುಖಂಡರು ಬಂದರೆ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಮನವಿ ಮಾಡೋಣ. ಸರ್ಕಾರ ಇದಕ್ಕೆ ಸಂಪೂರ್ಣ ಸಮ್ಮತಿಸುವ ವಿಶ್ವಾಸ ನನಗಿದೆ. ಇದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ. 12 ಲಕ್ಷ ರೂಪಾಯಿ ವೆಚ್ಚದಲ್ಲಿ ಈಗಾಗಲೇ ಡಾ. ಅಂಬೇಡ್ಕರ್ ಅವರ ಮೂರ್ತಿ ತಯಾರಿಸುವ ಕೆಲಸ ನಡೆದಿದೆ. ಮೂರ್ತಿ ಕಾರ್ಯ ಮುಗಿಯುವ ಹಂತದಲ್ಲಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ್ ಮಾಹಿತಿ ನೀಡಿದರು.
ಮೂರ್ತಿ ಸ್ಥಾಪಿಸಲು ಉದ್ದೇಶಿಸಿರುವ ಸ್ಥಳದಲ್ಲಿ ಹಾಕಲಾದ ಅಂಬೇಡ್ಕರ್ ನಾಮಫಲಕದ ಬೋರ್ಡ ಇರುವ ಸ್ಥಳದಲ್ಲಿ ಯಥಾ ಸ್ಥಿತಿ ಕಾಪಾಡುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ.
ಸಚಿವ ಶರಣಬಸಪ್ಪಗೌಡ ದರ್ಶನಾಪೂರ್
ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು.
ಈ ಪ್ರತಿಭಟನೆಯಲ್ಲಿ, ವಾಲ್ಮೀಕಿ ಸಂಘದ ಜಿಲ್ಲಾಧ್ಯಕ್ಷ ಗೌಡಪ್ ಗೌಡ ಆಲ್ದಾಳ, ತಾಲೂಕ್ ಅಧ್ಯಕ್ಷ ಮರೆಪ್ಪ ಪ್ಯಾಟಿ, ಬೌದ್ಧ ಸಾಹಿತಿ ದೇವೇಂದ್ರ ಹೆಗ್ಗಡೆ, ರಾಜ್ಯ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ತಿಮ್ಮಯ್ಯ ಪುರ್ಲೆ, ದಲಿತ ಮುಖಂಡರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಲ್ಲಿಕಾರ್ಜುನ್ ಪೂಜಾರಿ, ಮಾನ್ಸಿಂಗ್ ಚವ್ಹಾಣ್, ಶ್ರೀಶೈಲ್ ಹೊಸಮನಿ, ನಾಗಣ್ಣ ಬಡಿಗೇರ್, ಶಿವಕುಮಾರ್ ತಳವಾರ್, ಶಿವಪುತ್ರ ಜವಳಿ ಮಾತನಾಡಿದರು. ರವಿ ಯಕ್ಷಿಂತಿ, ಕೊಲಿ ಸಮಾಜದ ಮುಖಂಡ ಮಹದೇವಪ್ಪ ಸಾಲಿಮನಿ, ಕುಳುವ ಸಂಘದ ಜಿಲ್ಲಾಧ್ಯಕ್ಷ ಬಸವರಾಜ್ ಭಜಂತ್ರಿ, ಹನುಮಂತ ದೊರಿ, ಮರೆಪ್ಪ ಜಾಲಿಬೆಂಚಿ, ಹೊನ್ನಪ್ಪ ಗಂಗನಾಳ, ಶರಣು ದೋರನಹಳ್ಳಿ, ಸೇರಿದಂತೆ ದಲಿತ ಸಂಘಟನೆಗಳ ಮುಖಂಡರು ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.