ಹೊಸ ಸಂವತ್ಸರ.. ನವೋಲ್ಲಾಸದ ಭಾವ.. ಹೊಸತನ ನಿಮದಾಗಲಿ..

ಕ್ರಾಂತಿವಾಣಿ ವಾರ್ತೆ ಸುರಪುರ: ಹೊಸ ಸಂವತ್ಸರವೆಂಬ ನವೋಲ್ಲಾಸದ ಭಾವ.. ಹೊಸ ವರುಷ ತರಲಿ ಹರುಷ ಎನ್ನುವ ಭಾವಕ್ಕೆ ವರ್ಷದ ಮೊದಲ ದಿನವೆ ಜಗತ್ತು ಅಕ್ಷರಶ ತೆರೆದುಕೊಳ್ಳುತ್ತದೆ.

ಜಗತ್ತಿನಾದ್ಯಂತ ಪ್ರತಿ ವರ್ಷವು ಜನವರಿ 1ರಂದು ತಮ್ಮದೇಯಾದ ಶೈಲಿಯಲ್ಲಿ ಹೊಸ ಸಂವತ್ಸರವನ್ನು ಬರಮಾಡಿಕೊಳ್ಳುತ್ತಿರುವದನ್ನು ನೋಡಿದ್ದೇವೆ, ಅವರವರ ಅಭಿರುಚಿಗೆ ಪೂರಕವಾಗಿ ಈ ಪ್ರಕ್ರಿಯೆಗಳು ಸಾಗಿ ಬರುತ್ತವೆ. ಆದರೆ ನಿಜವಾದ ಅರ್ಥದಲ್ಲಿ ಹೊಸ ವರ್ಷವನ್ನು ಯಾವೆಲ್ಲ ಆಲೋಚನಾ ಕ್ರಮಗಳನ್ನು ಬದಲಿಸಿಕೊಳ್ಳಬೇಕು ಎನ್ನುವ ಮನೋಭೂಮಿಕೆಯನ್ನು ಸಿದ್ದಮಾಡಿಕೊಂಡು ಆ ದೆಸೆಯಲ್ಲಿ ಪರಿವರ್ತನೆಗೊಂಡು ಹೊಸ ವರ್ಷಕ್ಕೆ ಮುಖಾ ಮುಖಿಯಾಗುವದೆ ನಿಜವಾದ ಹೊಸ ವರ್ಷವಾಗುತ್ತದೆ.

ಪ್ರತಿಯೊಬ್ಬರು ಹೊಸ ವರ್ಷವನ್ನು, ಹಲವು ಕಾರಣಗಳಿಗಾಗಿ ದೂರ ಮಾಡಿಕೊಂಡ ಸಂಭಂದಗಳನ್ನು ಪುನಹ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಬಳಕೆ ಮಾಡಿಕೊಳ್ಳಲಿ, ಸಂಬಂಧ ವೃದ್ಧಿಗಾಗಿ ಈ ಸಂವತ್ಸರವನ್ನು ಉಪಯೋಗಿಸಿಕೊಳ್ಳಲಿ, ತಮ್ಮಲ್ಲಿ ಹೊಸ ದ್ಯೇಯ, ಆದರ್ಶ, ಗುರಿ ಮುಂತಾದ ಉದಾತ್ತ ಗುಣಗಳು ಚಿಗುರೋಡೆಯಲು ಈ ಸಂದರ್ಭವನ್ನು ವಿನಿಯೋಗಿಸಿಕೊಳ್ಳಬೇಕು.

ಇದರಾಚೆ ಹೊಸ ವರ್ಷವನ್ನು ನೋಡುವ, ಗ್ರಹಿಸುವದರಲ್ಲಿ ಖಂಡಿತಾ ಕೆಲವು ದೋಷಗಳಿರುವದಂತು ಸ್ಪಷ್ಟ. ಈ ದೆಸೆಯಲ್ಲಿ ಇಂದಿನ ಯುವ ತಲೆಮಾರು ಹೊಸ ವರ್ಷವನ್ನು ಸ್ವಾಗತಿಸುವ ಕ್ರಮಗಳಲ್ಲಿ ಕೆಲವು ಮಾರ್ಪಡುಗಳನ್ನು ಮಾಡಿಕೊಂಡು ಅನಗತ್ಯವಾದ ಖರ್ಚುಗಳನ್ನು ಮಾಡದೆ, ಆಡಂಬರದ, ಅದ್ದೂರಿತನದ ಸಂಭ್ರಮಗಳಿಗೆ ಅವಕಾಶ ಕೊಡದೆ ಸರಳವಾಗಿ, ಅರ್ಥಪೂರ್ಣವಾಗಿ ಶುಭಾಶಯಗಳು ವಿನಿಮಯ ಮಾಡಿಕೊಳ್ಳುವದರ ಮೂಲಕ ಸಮಾಜಕ್ಕೆ ಒಳ್ಳೆಯ ಮೇಲಪಂಕ್ತಿ ಹಾಕಬೇಕಿದೆ.

ಈ ಮೂಲಕ ಅರ್ಥಪೂರ್ಣ ಆಚರಣೆ ಮಾಡಬೇಕಿದೆ. ಹೊಸ ವರ್ಷವು ಹೊಸ ಹೊಂಗನಸು ಸರ್ವರಲ್ಲಿ ತಂದು ಅವರ ಜೀವನ ಹರ್ಷದಾಯಕವಾಗಿಸಲಿ ಕಳೆದೆರಡು ವರ್ಷಗಳಿಂದ ಜಗತ್ತನ್ನು ಆವರಿಶಿರುವ ಕೋವಿಡ್ ಎಂಬ ಮಹಾಮಾರಿ ಜಗತ್ತಿನಿಂದ ಕಾಲ್ಕಿತ್ತಲ್ಲಿ ಆ ಮೂಲಕ ಸರ್ವರೂ ಆರೋಗ್ಯದಿಂದ, ಸಂತೋಷದಿಂದ ಬದುಕುವಂತಾಗಬೇಕು.

ಹೊಸ ವರ್ಷವು ಪ್ರತಿಯೊಬ್ಬರ ಬದುಕಿನಲ್ಲಿ ಭರವಸೆಯ ಅಲೆಗಳನ್ನು ಸೃಷ್ಟಿಸಿ ಬದುಕಿನ ಹೊಸ ಭಾಷ್ಯಕ್ಕೆ ಮುನ್ನುಡಿ ಬರೆಯುವಂತಾಗಲಿ. ಗತಿಸಿಹೋದ ಘಟನಾವಳಿಗಳಿಗೆ ಅಂಟಿಕೊಳ್ಳದೆ, ನವ ಜೀವನಕ್ರಮದತ್ತ ಹೊಸ ವರ್ಷವು ತೆಗೆದುಕೊಂಡು ಹೋಗುವತ್ತ ಸಮೃದ್ಧತೆಯ ವಾತಾವರಣ ಬಹುವಾಗಿ ವ್ಯಾಪಿಸಿ, ವಿನೂತನ ಆಶಾಭಾವವನ್ನು ಸರ್ವರಲ್ಲಿ ತುಂಬಬೇಕು.

ಸಮಸ್ಯೆಗಳೆಡೆಗೆ ಜೀವನ ತಿರುಗಿಸದೆ ಸಂತೃಪ್ತಿ, ಸಂತಸದ ಕ್ಷಣಗಳ ಮಹಾ ಮೇಘಗಳನ್ನು ಈ ನವ ಸಂವತ್ಸರ ಸೃಜಿಸಲಿ,ಅದಕ್ಕೆ ಈ ವರ್ಷವು ಕಾರಣವಾಗಲಿ. ಹೊಸ ವರ್ಷವನ್ನು ಎಲ್ಲರೂ ನಿಜವಾದ ಅರ್ಥದಲ್ಲಿ ಅರ್ಥಪೂರ್ಣವಾಗಿ ಆಚರಿಸೋಣ, ಈ ವರ್ಷವು ಎಲ್ಲರಿಗೂ ಒಳಿತಾಗಲಿ.

ಡಾ. ಸಾಯಿಬಣ್ಣ ಮೂಡಬುಳ, ಉಪನ್ಯಾಸಕ, ಶಹಾಪುರ

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ