ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ ಸುರಪುರ: ಹುಣಸಿಗಿ ತಾಲೂಕಿನ ಬೈಲುಕುಂಟೆ ಗ್ರಾಮದಲ್ಲಿ ದಲಿತರೊಬ್ಬರು ಹಣ ಕೊಟ್ಟು ಖರೀದಿಸಿ್ ಜಮೀನಿನಲ್ಲಿ ಕಬ್ಬು ಬೆಳೆ ಬೆಳೆದಿದ್ದು, ಕಟಾವು ಹಂತದಲ್ಲಿ ಜಮೀನು ಕೊಟ್ಟ ಪರಿಶಿಷ್ಟ ಜಾತಿ ಪಂಗಡದವರು ಕಟಾವು ಮಾಡಲು ವಿರೋಧಿಸುತ್ತಿದ್ದಾರೆ. ಇದಕ್ಕೆ ನ್ಯಾಯ ದೊರಕಿಸಿ ಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿದರೂ ನಿರ್ಲಕ್ಷ ತೋರಿರುವುದನ್ನು ಖಂಡಿಸಿ ದಲಿತ ಮುಖಂಡರು ಪೊಲೀಸ್ ಠಾಣೆ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕ ನಾಗರಾಜ್ ಓಕಳಿ, ದಲಿತ ಮುಖಂಡರು ಮತ್ತು ದಲಿತ ರೈತರು ಮುಂದುವರೆಯಬಾರದು ಎಂಬುದು ಮೇಲ್ವರ್ಗದವರ ಮತ್ತು ಎಸ್ಟಿಯ ಕೆಲವರ ಪಿತೂರಿಯಾಗಿದೆ. ಅಪರೂಪಕ್ಕೆ ಒಮ್ಮೆ ದಲಿತರೊಬ್ಬರು ಜಮೀನು ಖರೀದಿಸಿದ್ದಾರೆ. ಪ್ರಸ್ತುತ ಅದಕ್ಜೆ ಮತ್ತೊಬ್ಬರು ತಂದೆಯವರನ್ನು ತೋರಿಸಿ ಜಮೀನು ಅವರಿಗೆ ಬರಬೇಕು ಎಂದು ಮೋಸ ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಜಮೀನಿನಲ್ಲಿರುವ ಕಬ್ಬು ಕಟಾವು ಮಾಡಲು ಬಿಡದೆ ದಲಿತರನ್ನು ಹೊಡಿಬಡಿ ಮಾಡುತ್ತಿದ್ದಾರೆ. ದಲಿತರರಿಗೆ ನ್ಯಾಯ ಕೊಡಿಸುವಂತೆ ಹುಣಸಿಗಿ ಮತ್ತು ಸುರಪುರ ಪೊಲೀಸ್ ಸ್ಟೇಷನ್ ಗೆ ಹಾಗೂ ಡಿ ಎಸ್ ಪಿ ಕಚೇರಿಗೆ ಮನವಿ ನೀಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಪ್ರಭಾವಿಗಳ ಒತ್ತಡಕ್ಕೆ ಒಳಗಾಗಿ 11 ಜನರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ದಲಿತರಾದವರಿಗೆ ನ್ಯಾಯ ಕೊಡಿಸದಿದ್ದರೆ ಅಹೋರಾತ್ರಿ ಧರಣಿ ಮುಂದುವರೆಯುತ್ತದೆ ಎಂದು ಎಚ್ಚರಿಸಿದರು.
ದಲಿತ ಮುಖಂಡರು ಪೊಲೀಸ್ ಠಾಣೆ ಕಚೇರಿ ಎದುರು ಹಲಿಗೆ ಬಡಿಯುತ್ತ ತಮ್ಮ ವಿನೂತನ ಶೈಲಿಯ ಪ್ರತಿಭಟನೆಯನ್ನು ಆರಂಭಿಸಿದ್ದಾರೆ.
ಸಂಘಟನೆಯ ಮಾನಪ್ಪ ಶೆಳ್ಳಗಿ, ಸಿದ್ದರಾಮ, ಬಸವರಾಜ, ಭೀಮರಾಯ, ಚಂದಪ್ಪ, ಅಯ್ಯಾಳಪ್ಪ, ಬಸವರಾಜ (ಡಿಸಿ), ರೈತ ಕುಟುಂಬದ ಪರಶುರಾಮ ಬೈಲ್ಕುಂಟಿ, ಹುಲುಗಪ್ಪ ದೊಡ್ಮನಿ, ಶರಣಮ್ಮ, ಶಾಂತಮ್ಮ, ಗಂಗಮ್ಮ, ಪೀರವ್ವ ,ತಿಮ್ಮಪ್ಪ ಸೇರಿದಂತೆ ಇತರರು ಇದ್ದರು.