ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ ಸುರಪುರ: ನಗರಸಭೆ ವ್ಯಾಪ್ತಿಯಲ್ಲಿ ಬರುವ ಹೆದ್ದಾರಿಯ ರಂಗಂಪೇಟೆಯ ಮಂಡಳ ಬಟ್ಟೆಯ ಎದುರುಗಡೆ ಇರುವ ಸಾರ್ವಜನಿಕರ ಮಹಿಳಾ ಶೌಚಾಲಯ ಕಟ್ಟಡವನ್ನು ಕಾನೂನು ಬಾಹಿರವಾಗಿ ನೆಲಸಮ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವಿಭಾಗೀಯ ವತಿಯಿಂದ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ದಸಂಸ ವಿಭಾಗೀಯ ಸಂಚಾಲಕ ಮಾನಪ್ಪ ಕಟ್ಟಿಮನಿ, ನಗರದ ರಂಗಂಪೇಟೆಯ ಮಂಡಳಿ ಬಟ್ಟೆ ಎದುರುಗಡೆ ಇರುವ ಸಾರ್ವನಿಕ ಮಹಿಳಾ ಶೌಚಾಲಯವನ್ನು ೨೦೦೭-೦೮ನೇ ಸಾಲಿನಲ್ಲಿ ಎಸ್‌ಎಫ್‌ಸಿ ಯೋಜನೆಯಡಿಯಲ್ಲಿ ನಿರ್ಮಿಸಲಾಗಿದೆ. ಈ ಶೌಚಾಲಯ ಬಿಟ್ಟರೆ ಮಹಿಳೆಯರಿಗೆ ಬೇರೆ ಯಾವುದಿಲ್ಲ. ಈ ಮಹಿಳಾ ಶೌಚಾಲಯವನ್ನು ಕಾನೂನುಬಾಹಿರವಾಗಿ ಯಾವುದೇ ಪರವಾನಗಿ ಪಡೆಯದೇ ಶೌಚಾಲಯವನ್ನು ನೆಲಸಮ ಮಾಡಿದ್ದಾರೆ. ಅಲ್ಲದೆ ಅಲ್ಲಿಗೆ ಹೊಂದಿಕೊಂಡು ಮಳಿಗೆ ನಿರ್ಮಾಣ ಮಾಡುತ್ತಿದ್ದರೆ ಎಂದು ಆರೋಪಿಸಿದರು.
ಮಾಲೀಕರು ಜೆಸಿಬಿಯನ್ನು ಬಳಸಿ ಶೌಚಾಲಯವನ್ನು ಕಟ್ಟಡ ನೆಲಸಮ ಮಾಡಿ ಆ ಶೌಚಾಲಯದ ಎಲ್ಲ ಕಲ್ಲು ಮತ್ತು ಕಿಟಕಿ, ಬಾಗಿಲು, ಗೇಟ್ ಸೇರಿದಂತೆ ಇನ್ನಿತರೆ ಸಾಮಗ್ರಿಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಇರುವ ಒಂದು ಶೌಚಾಲಯಕ್ಕೆ ಹೋಗಲು ದಾರಿಯೂ ಬಿಟ್ಟಿಲ್ಲ. ಇದೆಲ್ಲ ಗೊತ್ತಿದ್ದರೂ ನಗರಸಭೆಯವರು ಸುಮ್ಮನಿರುವುದೇಕೆ ಎಂದು ತಿಳಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ಆಸ್ತಿ ಸಾರ್ವಜನಿಕರ ಸ್ವತ್ತಾಗಿದೆ. ಕಟ್ಟಡ ನಿರ್ಮಾಣದ ಹಣವೂ ಸಾರ್ವಜನಿಕರದ್ದಾಗಿದ್ದು, ಸರಕಾರಿ ರಜೆ ದಿನ ನೋಡಿ ನೆಲಸಮ ಮಾಡಿರುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕು. ಹೊಸದಾಗಿ ಮಹಿಳಾ ಶೌಚಾಲಯ ನಿರ್ಮಿಸಬೇಕು. ಇಲ್ಲದಿದ್ದರೆ ನಗರಸಭೆಗೆ ಬೀಗ ಜಡಿದು ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು.
ತಿಪ್ಪಣ್ಣ ನಾಗರಾಳ, ಬಸವರಾಜ ಪೂಜಾರಿ ಬೆನಕಹಳ್ಳಿ, ಮಾನಪ್ಪ ಸೇರಿದಂತೆ ಇತರರಿದ್ದರು.