ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ ಸುರಪುರ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ತುಂಬ ಕಡಿಮೆಯಿದ್ದು, ಅಜ್ಞಾನ ಮತ್ತು ಅನಕ್ಷರತೆ ಕಾರಣವಾಗಿದೆ. ಇದನ್ನು ನಿವಾರಣೆಯಾಗಬೇಕಾದರೆ ಹೆಣ್ಣು ಮಕ್ಕಳು ಶಿಕ್ಷಣ ಕಲಿಯಬೇಕು ಎಂದು ಅಂಗನವಾಡಿ ಮೇಲ್ವಿಚಾರಕಿ ಚಂದ್ರಲೀಲಾ ಬಿಲ್ಲವ್ ಹೇಳಿದರು.
ತಾಲೂಕಿನ ವಾಗಣಗೇರಾ ಗ್ರಾಮದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಬೇಟಿ ಪಡಾವೋ ಬೇಟಿ ಬಚಾವೋ ಕಾರ್ಯಕ್ರಮ ನಿಮಿತ್ತ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಪೋಷಕರು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆ ಸಾಧನೆ ಮಾಡಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಹೆಣ್ಣು, ಪುರುಷನಷ್ಟೇ ಸರಿ ಸಮಾನಳಾಗಿ ನಿಲ್ಲಲು ಸಾಧ್ಯವಾಗುತ್ತದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆಯುತ್ತದೆ. ಹೆಣ್ಣು ಬಾಳಿನ ಕಣ್ಣಾಗಿದ್ದಾಳೆ. ನಾಗರಿಕ ಸಮ ಸಮಾಜ ನಿರ್ಮಾಣವಾಗಬೇಕಾದರೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುವದರಿಂದ ಸಾಧ್ಯವಾಗುತ್ತದೆ ಎಂದರು.
ಅಂಗನವಾಡಿ ಕಾರ್ಯಕರ್ತೆ ಶಿವಕಾಂತಮ್ಮ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಕೊಲೆ, ಮೋಸ, ವಂಚನೆಗಳಂತಹ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಹೆಣ್ಣು ಭ್ರೂಣ ಹತ್ಯೆಗಳು ಎಗ್ಗಿಲ್ಲದೆ ನಡೆಯುತ್ತಿರುವುದು ನೋಡಿದರೆ ನಾಗರಿಕ ಸಮಾಜ ತಲೆ ತಗ್ಗಿಸಬೇಕಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಏಕೈಕ ಮಾರ್ಗ ಶಿಕ್ಷಣವಾಗಿದೆ. ಪ್ರತಿಯೊಂದು ಮನೆಯ ಹೆಣ್ಣು ಶಿಕ್ಷಣ ಕಲಿಯಬೇಕು. ಇದಕ್ಕೆ ತಂದೆ-ತಾಯಂದಿರು, ಪೋಷಕರು ಸಹಕರಿದಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಕಾರ್ಯದರ್ಶಿ ಹುಸೇನ ಭಾಷಾ, ಗ್ರಾಪಂ ಸದಸ್ಯೆ ಮಲಕಮ್ಮ, ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ, ಅತಿಥಿ ಉಪನ್ಯಾಸಕರು ಹಾಗೂ ಗ್ರಾಮದ ಹಿರಿಯರು, ವಿದ್ಯಾರ್ಥಿಗಳು ಇದ್ದರು.