ಕ್ರಾಂತಿವಾಣಿ ಶಹಾಪುರ
ಮಹಿಳೆಯರನ್ನು ರಕ್ಷಿಸುವ ಮತ್ತು ಗೌರವಿಸುವ ಸಂಸ್ಕೃತಿಯನ್ನು ಬೆಳೆಸುವ ಅಗತ್ಯವಿದೆ. ಹೆಣ್ಣಿಲ್ಲದ ಮನೆ ಕಣ್ಣಿಲ್ಲದ ಕುರುಡನಂತೆ ಪ್ರತಿಯೊಬ್ಬರು ಹೆಣ್ಣು ಮಕ್ಕಳನ್ನು ಗೌರವಿಸುವುದಾಗಿ ಪ್ರತಿಜ್ಞೆ ಮಾಡಬೇಕಾಗಿದೆ ಎಂದು ತಹಸಿಲ್ದಾರ್ ಉಮ ಕಾಂತ್ ಹಳ್ಳೆ ಹೇಳಿದರು.
ತಾಲೂಕಿನ ಗೋಗಿ ಸರಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ತಾಲೂಕು ಪಂಚಾಯಿತಿ ಶಹಾಪುರ, ತಾಲೂಕು ಕಾನೂನು ಸೇವಾ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಬೇಟಿ ಬಚಾವೋ ಬೇಟಿ ಪಡಾವೋ ಜಾಗೃತಿ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಎಂದರೆ ತಾಯಿ. ಹೆಣ್ಣು ಎಂದರೆ ಸಹೋದರಿ. ಹೆಣ್ಣು ಎಂದರೆ ಗೆಳತಿ. ಹೆಣ್ಣು ಎಂದರೆ ಪತ್ನಿ. ಹೆಣ್ಣು ಎಂದರೆ ಮಗಳು. ಹೀಗೆ ಪ್ರತಿಯೊಬ್ಬರ ಪುರುಷನ ಬದುಕಿನಲ್ಲಿ ಅವಿಭಾಜ್ಯ ಅಂಗವಾಗಿ ಪ್ರಮುಖ ಪಾತ್ರ ವಹಿಸುತ್ತಿರುವ ಹೆಣ್ಣನ್ನು ಗೌರವಿಸುವುದಕ್ಕಾಗಿ ವಿಶೇಷ ದಿನವನ್ನು ನಿಗದಿಪಡಿಸಲಾಗಿದೆ. ಅದುವೇ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ. ಇಂದು ಪ್ರತಿಯೊಬ್ಬರು ಹೆಣ್ಣನ್ನು ಗೌರವಿಸುವಂತೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು.
ಈ ಕಾರ್ಯಕ್ರಮ ಮತ್ತು ಯೋಜನೆ ಬಗ್ಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೀನಾಕ್ಷಿ ಪಾಟೀಲ್ ಮಾತನಾಡಿ, 2008 ರಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಪ್ರಾರಂಭಿಸಿತು, ಇದರ ಮುಖ್ಯ ಉದ್ದೇಶವು ದೇಶದಾದ್ಯಂತ ಹುಡುಗಿಯರು ಎದುರಿಸುತ್ತಿರುವ ಅಸಮಾನತೆಗಳನ್ನು ಎತ್ತಿ ತೋರಿಸುತ್ತದೆ. ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಹೆಣ್ಣು ಮಗುವಿನ ಶಿಕ್ಷಣ, ಆರೋಗ್ಯ, ಪೋಷಣೆ ಮತ್ತು ಒಟ್ಟಾರೆ ಯೋಗಕ್ಷೇಮಕ್ಕೆ ಅಗತ್ಯವಾದ ಪ್ರಾಮುಖ್ಯತೆಯನ್ನು ನೀಡುವುದು ದಿನದ ಹಿಂದಿನ ಉದ್ದೇಶವಾಗಿದೆ. ಹೆಣ್ಣು ಶಿಶುಹತ್ಯೆ, ಲಿಂಗ ಅಸಮಾನತೆ ಮತ್ತು ದೈಹಿಕ ದೌರ್ಜನ್ಯದಂತಹ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಗುರಿಯನ್ನು ಹೊಂದಲಾಗಿದೆ. ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವು ಹೆಣ್ಣುಮಕ್ಕಳಿಗೆ ಅವರ ಹಕ್ಕುಗಳು, ಶಿಕ್ಷಣ, ಆರೋಗ್ಯ ಮತ್ತು ಪೋಷಣೆಯ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಹೆಣ್ಣು ಮಕ್ಕಳ ಉಳಿವು, ರಕ್ಷಣೆ ಮತ್ತು ಸಬಲೀಕರಣ ಖಚಿತಪಡಿಸಿಕೊಳ್ಳಲು ಸಂಘಟಿತ ಮತ್ತು ಒಮ್ಮುಖವಾಗಿರುವ ಪ್ರಯತ್ನಗಳು ಅಗತ್ಯವಿದೆ ಅದಕ್ಕಾಗಿ ಸರ್ಕಾರ ಬೇಟಿ ಬಚಾವೊ ಬೇಟಿ ಪಢಾವ್ (BBBP) ಉಪಕ್ರಮವನ್ನು ಘೋಷಿಸಿದೆ.ಬೇಟಿ ಬಚಾವೊ, ಬೇಟಿ ಪಢಾವ್ (BBBP) ಯೋಜನೆಯನ್ನು ಅಕ್ಟೋಬರ್, 2014 ರಲ್ಲಿ ಕುಸಿಯುತ್ತಿರುವ ಮಕ್ಕಳ ಲಿಂಗ ಅನುಪಾತ (ಸಿಎಸ್ಆರ್)ಸಮಸ್ಯೆಯನ್ನು ಬಗೆಹರಿಸಲು ಪರಿಚಯಿಸಲಾಯಿತು ಎಂದು ಅವರು ಹೇಳಿದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ಯಾನಲ್ ವಕೀಲೆ ಆಯುಷ್ ಪರ್ವೀನ್ ಜಮಖಂಡಿ ಅವರು, ಹೆಣ್ಣು ಅಂದಕೂಡಲೇ ಅನೇಕರು ಸೌಂದರ್ಯದ ಮತ್ತು ಭೋಗದ ವಸ್ತು ಎಂದುಕೊಂಡಿದ್ದಾರೆ. ಅವಳು ತುಂಬಾ ಸೂಕ್ಷ್ಮ. ಕಣ್ಣೀರಿನ ಕೊಡ. ಎಲ್ಲವನ್ನೂ ಸಹಿಸಿಕೊಂಡು ಮೌನಿಯಾಗಿ ಬಾಳುವ ನಾರಿ. ಎಷ್ಟಾದರೂ ಹೆಣ್ಣು ಅಬಲೆ, ನಾಚಿಕೆ ಸ್ವಭಾವದವಳು ಎಂಬ ಭಾವನೆಗಳು ಅನೇಕರಲ್ಲಿ ಇದ್ದರೂ ನಮ್ಮ ಕಣ್ಣೆದುರಲ್ಲೇ ಹಲವಾರು ಸಾಧನೆಗಳನ್ನು ಮಾಡಿ ಇತಿಹಾಸ ಸೃಷ್ಟಿಸಿದ ಅನೇಕ ಮಹಿಳಾಮಣಿಗಳು ಈ ಎಲ್ಲಾ ಭಾವನೆಗಳಿಗೆ ಮಣ್ಣೆರಚಿರುವುದು ಮಾತ್ರ ಸತ್ಯ. ನಿಮ್ಮಲ್ಲಿಯೂ ಪ್ರತಿಭೆಯ ಕಣಿಯಿದೆ. ಇತಿಹಾಸ ಸೃಷ್ಟಿಸಿದ ಮಹಿಳೆಯರ ಆದರ್ಶವಾಗಿಟ್ಟುಕೊಂಡು ಸಾಧನೆಗೆ ಛಲ ತೊಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶೀಭಾ ಜಲಿಯನ್ ಅವರು, ಸ್ವಾತಂತ್ರ್ಯ ಹೋರಾಟ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರನ್ನು ಮಾದರಿಯನ್ನಾಗಿಸಿಕೊಂಡು, ಅವರ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು. ಶಾರದಾದೇವಿ, ಅಕ್ಕಮಹಾದೇವಿ, ಝಾನ್ಸಿರಾಣಿ ಲಕ್ಷ್ಮಿಬಾಯಿ, ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ, ಪ್ರಧಾನಮಂತ್ರಿಯಾಗಿದ್ದ ಇಂದಿರಾಗಾಂಧಿ, ಅವರಂಥ ಸಾಧಕರು ನಮಗೆ ಮಾದರಿಯಾಗಬೇಕು. ಹಲವಾರು ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಹೋರಾಟದ ಮೂಲಕ ದಿಟ್ಟತನ ತೋರಿದ್ದಾರೆ. ಅಲ್ಲದೇ ಸಾಮಾಜಿಕ ಸೇವೆಯಲ್ಲೂ ಮುಂದಿದ್ದಾರೆ. ಹಾಗಾಗಿ ಮಹಿಳಾ ಮಹನೀಯರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು ಎಂದು ಅವರು ತಿಳಿಸಿದರು.
ಬೇಟಿ ಬಚಾವೋ ಬೇಟಿ ಪಢಾವೋ ಮುಖ್ಯ ಉದ್ದೇಶ.
ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯ ಕಾರ್ಯತಂತ್ರಕ್ಷೀಣಿಸುತ್ತಿರುವಹೆಣ್ಣುಮಕ್ಕಳಲಿಂಗಾನುಪಾತವನ್ನಸುಧಾರಿಸಲುಮತ್ತುಈಕುರಿತುಜಾಗೃತಿಮೂಡಿಸಲುಚರ್ಚೆಗಳನ್ನುಆಯೋಜಿಸುವುದು.ಹೆಣ್ಣುಮಕ್ಕಳ ಜನನ ಮತ್ತು ಅವರ ಉತ್ತಮ ಭವಿಷ್ಯಕ್ಕಾಗಿ ಸಮುದಾಯಗಳನ್ನು ಪ್ರೇರೇಪಿಸುವುದು, ಇದರಿಂದ ಅವರು ತಮ್ಮ ಸ್ವಂತ ಅಭಿವೃದ್ಧಿಗೆ ಕೆಲಸ ಮಾಡಬಹುದು.ಯೋಜನೆಯನ್ನು ಪ್ರಸಾರ ಮಾಡಲು ಸಂವಹನ ಅಭಿಯಾನವನ್ನು ಪ್ರಾರಂಭಿಸಲು.ಸಾಮಾಜಿಕ ಬದಲಾವಣೆ ಮತ್ತು ಸುಧಾರಣೆಗಾಗಿ ಸ್ಥಳೀಯ ಸಂಸ್ಥೆಗಳು ಮತ್ತು ಶಾಲೆಗಳು ಮತ್ತು ಸರ್ಕಾರಿ ಇಲಾಖೆಗಳ ನೌಕರರಿಗೆ ತರಬೇತಿ ನೀಡುವುದು. ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿದ್ದಣ್ಣ ಬಿರಾದರ್ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ, ತಾಲೂಕ ಸಮಾಜ ಕಲ್ಯಾಣ ಅಧಿಕಾರಿ ರಾವುತಪ್ಪ ಹವಾಲ್ದಾರ್, ಆರೋಗ್ಯ ಇಲಾಖೆ ನಿರೀಕ್ಷಣಾಧಿಕಾರಿಮಲ್ಲಪ್ಪ ಕಾಂಬಳೆ, ಮುಖ್ಯ ಗುರುಗಳು ನಿಂಗಣ್ಣ ಪಡ ಶೆಟ್ಟಿ ಸೇರಿದಂತೆ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.