ಸಮೃದ್ಧ ಆರೋಗ್ಯದ ಯೋಗಕ್ಕಾಗಿ ಯೋಗ ಅಗತ್ಯ: ಗುರುಪಾದ ಶ್ರೀಗಳು.

ಕ್ರಾಂತಿವಾಣಿ ಶಹಾಪುರ.
ವಿದ್ಯಾರ್ಥಿಗಳು ಇಂದು ಒತ್ತಡದಲ್ಲಿಯೇ ಓದು, ಕಲಿಕೆ ಮಾಡುತ್ತಿದ್ದು ಇವರಿಗೆ ಯೋಗ, ಧ್ಯಾನ ಕಲಿಸುವ ಅನಿವಾರ್ಯತೆಯಿದೆ. ಯೋಗಾಭ್ಯಾಸವು ನಿಮ್ಮ ಮಗುವಿನ ಕಲಿಕೆ ಮತ್ತು ಜ್ಞಾನವನ್ನು ಉತ್ತಮವಾಗಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಪಾಲಕರು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಫಕಿರೇಶ್ವರ ಮಠದ ಪೀಠಾಧಿಪತಿ ಗುರುಪಾದ ಮಹಾಸ್ವಾಮಿ ಹೇಳಿದರು.
ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ, ಭಾರತೀಯ ಸಂಸ್ಕೃತಿ ಉತ್ಸವ – 7 ಹಾಗೂ ನಗರದ ಜ್ಞಾನಗಂಗಾ ಹಿರಿಯ ಪ್ರಾಥಮಿಕ ಶಾಲೆ, ಫಕಿರೇಶ್ವರ ಮಠದ ಸಹಯೋಗದಲ್ಲಿ ಹಮ್ಮಿಕೊಂಡ 5ನೇ ಯೋಗ ಸಪ್ತಾಹ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಶ್ರೀಗಳು,
ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳಿಗೂ ಯೋಗದಿಂದ ಸಾಕಷ್ಟು ಲಾಭವಿದೆ. ವಿದ್ಯಾಭ್ಯಾಸದಲ್ಲಿ ತೊಡಗಿರುವ ಮನಸ್ಸುಗಳನ್ನು ಕೆಲವೊಂದು ಆಸನಗಳು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತದೆ ಎಂದು ಅವರು ತಿಳಿಸಿದರು.

ಏಳು ದಿನಗಳ ಕಾಲ ಮಕ್ಕಳಿಗೆ ಯೋಗ ತಿಳಿಸಿಕೊಟ್ಟ ಯೋಗ ಗುರು ನರಸಿಂಹ ವೈದ್ಯ ಅವರು, ಯೋಗದಿಂದ ಮನಸ್ಸಿಗೆ ನೆಮ್ಮದಿ, ದೇಹಕ್ಕೆ ಚೈತನ್ಯ, ಏಕಾಗ್ರತೆ, ಮನೋಬಲ ವೃದ್ಧಿ ಮಾತ್ರವಲ್ಲ ಮಕ್ಕಳದೈಹಿಕ ಬೆಳವಣಿಗೆಯೂ ಉತ್ತಮಗೊಳ್ಳುತ್ತದೆ. ನಿತ್ಯ ಯೋಗದಲ್ಲಿ ಮಕ್ಕಳು ವೃಕ್ಷಾಸನ, ತಾಡಾಸನ, ಭುಜಂಗಾಸನ, ಚಕ್ರಾಸನ, ಮಕರಾಸನ, ಬಾಲಾಸನ, ವೃಕ್ಷಾಸನ, ತ್ರಿಕೋನಾಸನ, ಶಶಂಕಾಸನ ವನ್ನು ಮಾಡಬಹುದು. ಇದರೊಂದಿಗೆ ಸ್ವಲ್ಪ ಹತ್ತು ಕನಿಷ್ಠ 10 ನಿಮಿಷವಾದರೂ ಚಿನ್‌ಮುದ್ರೆಯಲ್ಲಿ ಮಕ್ಕಳನ್ನು ಕುಳಿತುಕೊಳ್ಳುವಂತೆ ಮಾಡಬೇಕು. ಇದರಿಂದ ಅವರ ಮನಸ್ಸು ಶಾಂತವಾಗುವುದು ಜತೆಗೆ ಏಕಾಗ್ರತೆ ವೃದ್ಧಿಗೂ ಸಹಕಾರಿ ಯಾಗುತ್ತದೆ. ಹೆಚ್ಚು ತುಂಟತನ ಮಾಡುವ ಮಕ್ಕಳಿನ್ನು ಚಿನ್‌ಮುದ್ರೆ ಯಲ್ಲಿ ಕೂರಿಸುವುದರಿಂದ ಸಾಕಷ್ಟು ಪ್ರಯೋಜನವಾಗುವುದು ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಯೋಗ ಶಿಕ್ಷಕ ವಿರೇಶ ಎಸ್ ಉಳ್ಳಿ ಅವರು, ಯೋಗಾಭ್ಯಾಸ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಮೆದುಳು ಸಕ್ರಿಯವಾಗಿ ಕೆಲಸ ಮಾಡುತ್ತದೆ. ಬುದ್ಧಿವಂತಿಕೆ ಹೆಚ್ಚಾಗುತ್ತದೆ. ಅದರಲ್ಲೂ ಯೋಗಾಭ್ಯಾಸದಿಂದ ವಿದ್ಯಾರ್ಥಿಗಳ ಆಸಕ್ತಿ ಮತ್ತು ಅಧ್ಯಯನದಲ್ಲಿ ಏಕಾಗ್ರತೆ ಹೆಚ್ಚುತ್ತದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜ್ಞಾನಗಂಗಾ ಶಾಲೆಯ ಸಂಸ್ಥಾಪಕ ಸುಧಾಕರ್ ಕುಲಕರ್ಣಿ ಅವರು, ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ವತಿಯಿಂದ ನಾಡಿನಾದ್ಯಂತ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ರೈತರಿಗೆ ಮಹಿಳೆಯರಿಗೆ ವಿದ್ಯಾರ್ಥಿಗಳಿಗೆ ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ, ಮಹಿಳೆಯರಿಗೆ ಹೊಲಿಗೆ ತರಬೇತಿ ಸೇರಿದಂತೆ ಹತ್ತಾರು ಕಾರ್ಯಕ್ರಮಗಳನ್ನು ಈ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಕಾರ್ಯ ಶ್ಲಾಘನೀಯ ಎಂದರು.

ಈ ಕಾರ್ಯಕ್ರಮದಲ್ಲಿ, ಸ. ಪ. ಪೂ. ಮ. ಕಾಲೇಜಿನ ಉಪನ್ಯಾಸಕ ಸುರೇಶ ಅರುಣಿ, ಪೋಲಿಸ್ ಇಲಾಖೆಯ ಬಸವಂತರಡ್ಡಿ ಡಂಬಳ, ಸಂಗನಗೌಡ ಪಾಟೀಲ್ ಅನವಾರ, ಪ್ರಶಾಂತ ನಾಯಕ ಸೇರಿದಂತೆ ಜ್ಞಾನಗಂಗಾ ಶಾಲೆಯ ಶಿಕ್ಷಕರು ಹಾಗೂ ಯೋಗ ತರಬೇತಿಯ ಮಕ್ಕಳು ಇದ್ದರು.

 

 

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ