ಸಗರನಾಡಿನ ಆರಾಧ್ಯದೈವ ಸಗರ ಯಲ್ಲಮ್ಮದೇವಿ ಜಾತ್ರೆ ಸಂಪನ್ನ:

ಕ್ರಾಂತಿ ವಾಣಿ ಶಹಾಪುರ
ಸಗರ ನಾಡಿನ ಆರಾಧ್ಯ ದೈವ ವಾಗಿರುವ ತಾಲ್ಲೂಕಿನ ಸಗರ ಯಲ್ಲಮ್ಮ ದೇವಿ ಜಾತ್ರೆ ಮಂಗಳವಾರ ಜರುಗಿತು. ತಾಲ್ಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ಮಹಾರಾಷ್ಟ್ರದಿಂದಲೂ ಹೆಚ್ಚಿನ ಭಕ್ತರು ಕುಟುಂಬ ಸಮೇತ ಜಾತ್ರೆಯಲ್ಲಿ ಪಾಲ್ಗೊಂಡು ಶ್ರದ್ಧಾ ಭಕ್ತಿಯಿಂದ ತಾಯಿಯ ಹರಕೆ ಮುಟ್ಟಿಸಿ ಸಂಪನ್ನರಾದರು.
ಹರಕೆ. ಭಕ್ತರು ಹರಿಕೆ ತೀರಿಸಲು ಅರೆ ಬೆತ್ತಲೆ ಮೆರವಣಿಗೆಯನ್ನು ನಿಷೇಧಿಸಿದ್ದರಿಂದ ಭಕ್ತರು ಮೈತುಂಬಾ ಬಟ್ಟೆಯೊಂದಿಗೆ ಸೊಪ್ಪು ಸುತ್ತಿಕೊಂಡು ತಲೆಯ ಮೇಲೆ ಆರತಿ ಹೊತ್ತುಕೊಂಡು ಹರಿಕೆ ತೀರಿಸಿದರು.

ಪಲ್ಲಕ್ಕಿ ಮೆರವಣಿಗೆ. ಎರಡು ದಿನಗಳ ಕಾಲ ಈ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಜಾತ್ರೆಯ ಹಿನ್ನೆಲೆ ಗ್ರಾಮದ ಅರ್ಚಕರಾದ ಬಸ್ಸಪ್ಪ ಚಂದಪ್ಪ ಸಿಂಪಿ ಅವರ ಮನೆಯಲ್ಲಿರುವ ಯಲ್ಲಮ್ಮ ದೇವಿಯ ಉತ್ಸವ ಮೂರ್ತಿಯ ಪಲ್ಲಕ್ಕಿಯು ಫೆ.19 ರಂದು ಬೆಳಗ್ಗೆ 10.30ಕ್ಕೆ ಭಾಜಾ-ಭಜಂತ್ರಿಗಳೊಂದಿಗೆ ಊರಿನ ಪ್ರಮುಖ ಬೀದಿಗಳಿಂದ ಶಾರದಹಳ್ಳಿ, ಬಿಜಾಸ್ಪೂರ, ಯಮನೂರ ಮಾರ್ಗವಾಗಿ ಈ ಭಾಗದ ಪವಿತ್ರ ನದಿಯಾಗಿರುವ ಕೃಷ್ಣಾ ನದಿಗೆ ಗಂಗಾಸ್ಥನಕ್ಕೆ ಹೋಗುತ್ತದೆ. ಅಲ್ಲಿ ಗಂಗಾಸ್ಥಾನ ಮುಗಿಸಿಕೊಂಡು ಅಂದೇ ರಾತ್ರಿ ಕೃಷ್ಣಾ ನದಿಯಿಂದ ಹೊರಟು ಯಮನೂರು, ಲಕ್ಷ್ಮಿಪುರ, ರಂಗಂಪೇಠ, ರತ್ತಾಳ ಮಾರ್ಗವಾಗಿ ಮೆರವಣಿಗೆಯ ಮೂಲಕ ಫೆ.20 ರಂದು ಸಂಜೆ 5ಕ್ಕೆ ಯಲ್ಲಮ್ಮ ದೇವಿಯ ಪಲ್ಲಕ್ಕಿಯು ಗುಡ್ಡದ ಮೇಲಿರುವ ದೇವಸ್ಥಾನಕ್ಕೆ ಆಗಮಿಸಿತು.
ಬಗೆ ಬಗೆ ತಿಂಡಿ ತಿನಿಸು. ಮುಗಿಯದ ನೆನಪುಗಳ ಜಾತ್ರೆ. ಜೋಕಾಲಿ, ಪಳಾರ್ ಅಂಗಡಿ, ಜಿಲೇಬಿ ಬಜಿ ದುಃಖಾನ, ಬೊಂಬೈ ಮಿಠಾಯಿ ಬತಾಸು, ಶರಬತ್ತು, ಕಬ್ಬಿನ ಹಾಲು, ಚಹಾದ ಅಂಗಡಿ ಸೇರಿದಂತೆ ವಿವಿಧ ಬಗೆಯ ಮಿಠಾಯಿ ಅಂಗಡಿಗಳು, ಆಟಿಕೆ ಸಾಮನುಗಳು, ವಾಚ್ ಚೆಂಡು, ಕೊಳಲು ಜಾತ್ರೆಗೆ ಬಂದ ಜನರನ್ನು ತನ್ನತ್ತ ಸೆಳೆಯುತ್ತಿವೆ.

ಭರ್ಜರಿ ಕೈ ಬಳೆ ಮಾರಾಟ.
ಜಾತ್ರೆಗೆ ಬಂದ ಮಹಿಳೆಯರು ಮುತ್ತೈದೆಯರ ಸಂಕೇತವಾದ ಕೈ ಬಳೆ ತೋಡಿಸಿಕೊಂಡರು. ಬಹುತೇಕ ಬಳೆ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು.

ಮನಸೆಳೆದ ಜಗಜಟ್ಟಿಗಳ ಕಾಳಗ:
ಜಾತ್ರೆ ಅಂಗವಾಗಿ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಪಂದ್ಯಾವಳಿಗೆ ಸುತ್ತಲಿನ ಪೈಲ್ವಾನರು ಸೇರಿದಂತೆ ವಿವಿಧ ರಾಜ್ಯ, ಜಿಲ್ಲೆಗಳಿಂದಲೂ ಸ್ಪರ್ಧಿಗಳು ಆಗಮಿಸಿದ್ದರು. ಕುಸ್ತಿಪಟುಗಳ ಕಾಳಗ ನೆರದಿದ್ದ ಜನರನ್ನು ರೋಮಾಂಚನಗೊಳಿಸಿತು. ಪಂದ್ಯದಲ್ಲಿ ಗೆದ್ದ ಪೈಲ್ವಾನ​ರಿಗೆ ಶಿಳ್ಳೆ, ಚಪ್ಪಾಳೆ ತಟ್ಟುವ ಮೂಲಕ ಪ್ರೇಕ್ಷಕರು ಹುರಿದುಂಬಿಸುತ್ತಿದ್ದರು. ಅಂತಿಮವಾಗಿ ತಾಲೂಕಿನ ದೋ ರನಹಳ್ಳಿ ಗ್ರಾಮದ ಕುಸ್ತಿಪಟು ಅಶೋಕ ಅವರನ್ನು ಹುಣಸಗಿ ತಾಲೂಕಿನ ಅನಿಲ್ ಕುಮಾರ್ ಅವರು ಸೋಲಿಸಿದ ಕುಸ್ತಿಪಟುಗೆ 5 ತೊಲದ ಬೆಳ್ಳಿ ಕಡಗ 2500 ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಈ ಜಾತ್ರೆಯಲ್ಲಿ ಗ್ರಾಮದ ಮುಖಂಡರು ಹಾಗೂ ಹಿರಿಯರು ಮಹಿಳೆಯರು ಮಕ್ಕಳು ಸೇರಿದಂತೆ ವಿವಿಧ ತಾಲೂಕು ಜಿಲ್ಲೆಗಳಿಂದ ಆಗಮಿಸಿದ ಭಕ್ತರು ಇದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ