ಮಹಿಳಾ ಸಶಕ್ತಿಕರಣವೆಂಬ ಪರಿದೃಷ್ಟಿ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮಹತ್ವ

ಲೇಖನ: ಡಾ. ಸಾಯಿಬಣ್ಣ ಮೂಡಬೂಳ

ಕ್ರಾಂತಿವಾಣಿ ವಾರ್ತೆ

ಸುರಪುರ:ವಿಶ್ವದಲ್ಲಿ ವಿವಿಧ ದಾರ್ಶನಿಕರ, ಚಿಂತಕರ, ಸಾಧಕರ ದಿನಾಚರಣೆಗಳನ್ನು ಆಚರಿಸುತ್ತಿರುವದು ನಾವೆಲ್ಲರೂ ಗಮನಿಸಿದ್ದೆವೆ. ಬಹುಪಾಲು ಸಾಧಕರ ಜೀವನದಲ್ಲಿ, ಅವರ ಸಾಧನೆಯಲ್ಲಿ ಮಹಿಳೆಯರ ಪಾತ್ರ ಗುರುತರವಾದದ್ದಾಗಿದೆ.

ಸಮಾಜದಲ್ಲಿ ಪ್ರತಿಯೊಂದು ಕುಟುಂಬಗಳು ಸುಗಮವಾಗಿ ಅರ್ಥಪೂರ್ಣವಾಗಿ ಕಾರ್ಯನಿರ್ವಹಿಸಬೇಕಾದರೆ ಆ ಕುಟುಂಬದ ಯಜಮಾನನಷ್ಟೆ ಪಾತ್ರ ಮಹಿಳೆಯದ್ದು ಆಗಿರುತ್ತದೆ. ಕುಟುಂಬದ ನಿಜವಾದ ಸಾರಥಿಯಾಗಿ ಕುಟುಂಬವೆಂಬ ರಥವನ್ನು ಯಶಸ್ವಿಯಾಗಿ ಕೊಂಡೊಯುತ್ತಾಳೆ.

ಕುಟುಂಬದಲ್ಲಿ ಪ್ರತಿ ಮಹಿಳೆಯು ಕೇವಲ ಗ್ರಹಿಣಿಯಾಗಿರದೆ, ಆ ಕುಟುಂಬದ ಸರ್ವವೂ ಅವಳೆ ಆಗಿರುತ್ತಾಳೆ. ಮಹಿಳೆಯಿಲ್ಲದ ಬದುಕನ್ನು ಪುರುಷ ಊಹಿಸಿಕೊಳ್ಳಲು ಸಾಧ್ಯವಿಲ್ಲ, ಪುರುಷನ ಪ್ರತಿ ಹೆಜ್ಜೆಗಳಲ್ಲೂ ಮಹಿಳೆ ನೆರಳಾಗಿರುತ್ತಾಳೆ. ಈ ರೀತಿಯಾಗಿ ಬಹುಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆ ಸಮಾಜದಲ್ಲಿ ಅನೇಕ ಕಾಲಘಟ್ಟಗಳಿಂದಲೂ ಎರಡನೆಯ ದರ್ಜೆಯ ವ್ಯಕ್ತಿಯಾಗಿ ಪರಿಗಣಿಸ್ಪಲುಡುತ್ತಿರುವದು ವಿಪರ್ಯಾಸದ ಸಂಗತಿಯಾಗಿದೆ.

21ನೇಯ ಶತಮಾನದ ಇಂತಹ ದಿನಗಳಲ್ಲಿ ಮಹಿಳೆಗೆ ಸಿಗಬೇಕಾದ ನ್ಯಾಯೋಚಿತ ಸ್ಥಾನಮಾನ ಸಿಗುತ್ತಿಲ್ಲ. ಮಹಿಳಾ ಸಬಲೀಕರಣದ ವಿಚಾರಗಳು ಸಮಾಜದ ಮುನ್ನೆಲೆಗೆ ಬರಬೇಕಿದೆ, ಆ ಮೂಲಕ ಮಹಿಳೆಯರ ಸ್ಥಾನಮಾನಗಳು ಅರ್ಥಪೂರ್ಣವಾದ ರೀತಿಯಲ್ಲಿ ಬದಲಾಗಬೇಕಿದೆ. ಮಹಿಳೆಯರ ಕುರಿತಾಗಿರುವ ಅಪ್ರಸ್ತುತ ಲಿಂಗಸೂಕ್ಷ್ಮತೆ ಗಳು ತೆರೆಯ ಹಿಂದೆ ಸರಿಯಬೇಕಿದೆ.

ಜಾತಿ ಪದ್ಧತಿಯ ಸಮಸ್ಯೆಯಷ್ಟೆ ಪುರಾತನವಾದ ಸಮಸ್ಯೆ ಮಹಿಳಾ ತಾರತಮ್ಯವಾಗಿದೆ. ಕಾಲದಿಂದ ಕಾಲಕ್ಕೆ ಮಹಿಳೆಯರನ್ನು ನಿರ್ಲಕ್ಷಿಸುತ್ತಲೆ ಬಂದಿರುವದರಿಂದ ಈ ಸಮಸ್ಯೆಗೆ ತಾತ್ವಿಕವಾದ ಪರಿಹಾರ ಸಿಕ್ಕಿಲ್ಲ. ಗಂಡು, ಹೆಣ್ಣು ನಿಸರ್ಗದ ದೃಷ್ಟಿಯಲ್ಲಿ ಒಂದೆಯಾದರು, ಕೆಲವು ಜೈವಿಕ ಕ್ರೀಯೆಗಳ ಕಾರಣಕ್ಕಾಗಿ ಅವಳು ಅಬಲಳು ಎನ್ನುವ ಪುರಷ ಕೇಂದ್ರೀತ ಮನೋಸ್ಥಿತಿಯು ಮಾರ್ಪಡಾಗಬೇಕಿದೆ.

ಈ ಕುರಿತ ವಿಚಾರಧಾರೆಯನ್ನು ಪುನರರಚಿಸಿಕೊಳ್ಳಬೇಕಿದೆ. ಮಹಿಳೆಯರಿಗೆ ನಿಜವಾದ ಅರ್ಥದಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸಿ, ಲಿಂಗತಾರತಮ್ಯವನ್ನು ಹೋಗಲಾಡಿಸುವಲ್ಲಿ ಸಮಾಜ ದಿಟ್ಟ ಹೆಜ್ಜೆಗಳಿಡಬೇಕಾಗಿದೆ. ಪ್ರಸ್ತುತ ಸಂಧರ್ಭಗಳನ್ನು ಅವಲೋಕಿಸಿ ಮಹಿಳೆಯರ ಸ್ಥಾನಮಾನವನ್ನು ವಿಶ್ಲೇಷಿಸುವದಾದರೆ ಇತ್ತೀಚಿನ ದಿನಗಳಲ್ಲಿ ಮಹಿಳಾ ಬೆಳವಣಿಗೆ ಆಶಾದಾಯಕವಾಗಿದೆಯಷ್ಟೆ, ತೃಪ್ತಿಕರವಾಗಿಲ್ಲ.

ಇಂದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾಗಲೂ, ಮಹಿಳೆಯ ಮೇಲಾಗುತ್ತಿರುವ ಶೋಷಣೆಯನ್ನು ಗಣನಿಯವಾಗಿ ತಗ್ಗಿಸಲು ಆಗುತ್ತಿಲ್ಲ. ಹಾಗಾಗಿ ಸಮಾಜ ಈ ದೆಸೆಯಲ್ಲಿ ಯೋಚಿಸಬೇಕಾಗಿದೆ. ಮಹಿಳೆಯು ಪುರುಷನಷ್ಟೆ ಸಮರ್ಥಳು ಎನ್ನುವ ನೈಸರ್ಗಿಕ ಸತ್ಯವನ್ನು ಒಪ್ಪಿಕೊಂಡು ಮಹಿಳಾ ಸಮುದಾಯವನ್ನು ಬೆಳೆಸಿ, ಅಭಿವೃದ್ಧಿಯ ಪಥದಲ್ಲಿ ಮಹಿಳೆಯರು ಮತ್ತು ಪುರುಷರು ಒಟ್ಟಿಗೆ ಸಾಗಬೇಕಿದೆ. ಹಾಗಾದಾಗ ಮಾತ್ರ ಮಹಿಳಾ ಸಬಲಿಕರಣಕ್ಕೆ ನಿಜವಾದ ಅರ್ಥ ಬಂದಿತು.

ಮಹಿಳಾ ಸಬಲೀಕರಣವು ಇಂದಿನ ತುರ್ತಾಗಿದೆ, ಹೆಣ್ಣಿನ ಸಾಧನಾ ಪ್ರಪಂಚದ ಹೆಗ್ಗರುತುಗಳು ಇಂದು ಬಹುವಾಗಿ ಚರ್ಚೆಯಾಗಬೇಕಿದೆ. ಮಹಿಳಾ ಸಮುದಾಯ ಕ್ರಮಸಿರುವ ಪ್ರಗತಿಯ ಹಾದಿ ಅನುಕರಣಿಯವಾದದ್ದು, ಮಹಿಳೆಯ ಕೌಟುಂಬಿಕ ಪಾತ್ರ ಅನನ್ಯವಾದದ್ದು, ಪತ್ನಿಯಾಗಿ, ಸಹೋದರಿಯಾಗಿ, ತಾಯಿಯಾಗಿ ಮಹಿಳೆಯ ಬಹುಮುಖಿ ಹೊಣೆಗಾರಿಕೆ ಅರ್ಥಪೂರ್ಣವಾದದ್ದಾಗಿದೆ.

ಕುಟುಂಬ ಮತ್ತು ಸಮಾಜದಲ್ಲಿನ ತನ್ನ ಪಾತ್ರವನ್ನು ನಿಷ್ಠೆಯಿಂದ ಮಾಡುವ ಭೂಮಿಯ ಮೇಲಿನ ಏಕೈಕ ನಿಷ್ಠೆಯ ಜೀವಿಯೆಂದರೆ ಅದು ಹೆಣ್ಣು ಎಂದರೆ ತಪ್ಪಾಗಲಿಕ್ಕಿಲ್ಲ. ಜೀವಪರ ಕಾಳಜಿ, ಮಮತೆ ಪ್ರೀತಿಯ ಆಗರವಾಗಿರುವ ಹೆಣ್ಣು ಕುಟುಂಬದ ಕಣ್ಣು ಎಂದು ಅರ್ಥೈಸಿಕೊಳ್ಳಬೇಕಾಗಿದೆ.ಹೆಣ್ಣನ್ನು ಜೈವಿಕವಾದ ದೃಷ್ಟಿಯಿಂದ ನೋಡದೆ ಅವಳನ್ನು ಒಬ್ಬ ಸಮರ್ಥ ವ್ಯಕ್ತಿಯಾಗಿ ನೋಡಬೇಕಾಗಿದೆ. ಮಹಿಳೆಯರ ಕುರಿತಾಗಿ ಪುರುಷರು ಹೊಂದಿರುವ ಯಜಮಾನಿಕೆಯ ಮನೋಸ್ಥಿತಿಯಿಂದ ಹೊರಬರಬೇಕಿದೆ.

ಮಹಿಳಾ ಸಮುದಾಯ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾದ ಬಾಲ್ಯವಿವಾಹ, ಹೆಣ್ಣು ಬ್ರೂಣ ಹತ್ಯೆ, ಮುಂತಾದ ಸಂಕಟಗಳಿಂದ ಆಕೆಯನ್ನು ಹೊರತರಬೇಕು. ತನಗೆ ಅನ್ನಿಸಿದ ರೀತಿಯಲ್ಲಿ ಬದುಕುವ ವಾತಾವರಣ ನಿರ್ಮಾಣವಾಗಬೇಕು. ಮಹಿಳೆಯರ ಆರ್ತನಾದವನ್ನು ಒಳಗಣ್ಣಿನಿಂದ ನೋಡುವ ಹೃದಯವಂತಿಕೆಯನ್ನು ಸಮಾಜ ಬೆಳೆಸಿಕೊಳ್ಳಬೇಕು.

ಸಮಾಜದ ವಿವಿಧ ಕ್ಷೆತ್ರಗಳಲ್ಲಿ ಸಂಘಟಿತ, ಅಸಂಘಟಿತ, ಖಾಸಗಿ, ಸಾರ್ವಜನಿಕ ಕ್ಷೇತ್ರಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡು ದುಡಿಯುವ ಮಹಿಳೆಯರು ತಮ್ಮದೇಯಾದ ಕೊಡುಗೆಗಳನ್ನು ಆಯಾ ಕ್ಷೇತ್ರಕ್ಕೆ ನೀಡುತ್ತಿರುವದು ಸೂರ್ಯನಷ್ಟೆ ಸತ್ಯವಾದ ವಿಷಯವಾಗಿದೆ. ಕೌಟುಂಬಿಕ ಅವಶ್ಯಕತೆಯ ಕಾರಣಕ್ಕಾಗಿ ದುಡಿಯುವ ಇಂತಹ ಮಹಿಳಾ ಸಮುದಾಯಕ್ಕೆ ಉದ್ಯೋಗದ ಸ್ಥಳದಲ್ಲಿ ಶೋಷಣೆಗಳಾಗುವದು ತಪ್ಪಬೇಕಿದೆ.

ಔದ್ಯೋಗಿಕ ಕ್ಷೇತ್ರದಲ್ಲಿ ಅವಳ ಪರಿಶ್ರಮಕ್ಕೆ ಮನ್ನಣೆ ಸಿಗಬೇಕಿದೆ, ರಾಜಕೀಯ ಕ್ಷೆತ್ರದಲ್ಲಿ ಇನ್ನು ವಿಪುಲವಾದ ಅವಕಾಶಗಳು ಅವಳನ್ನು ಅರಸಿಕೊಂಡು ಬರಬೇಕಾಗಿದೆ. ಸಮಾಜದ ಪರಿವರ್ತನೆಯಲ್ಲಿ ಮಹಿಳೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಅವರ ಚಿಂತನೆಗಳಿಗೆ ಬೆಲೆ ಕೊಡಬೇಕು.

ಅಂದಾಗ ಮಾತ್ರ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತೆಗೆದುಕೊಂಡತಾಗುತ್ತದೆ. ಆ ಮೂಲಕ ಸಮಾಜ ಗತಿಶಿಲತೆಯನ್ನು ಪಡೆದುಕೊಂಡು ಬದಲಾವಣೆಯ ಕಡೆ ಮುಖ ಮಾಡಲು ಸಾಧ್ಯ. ಈ ದೆಸೆಯಲ್ಲಿ ಸಮಾಜ ಸೂಕ್ತವಾಗಿ ಸ್ಪಂದಿಸಲಿ ಎಂದು ಆಶೀಸೋಣ‌…

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ