ಯುಗದ ಬ್ರಹ್ಮಾಂಡ ಸೃಷ್ಠಿಯ ದಿನವೇ ಯುಗಾದಿ

ಹೆಚ್ ವಾಯ್ ರಾಠೋಡ

ಸಾಹಿತಿಗಳು, ಸುರಪುರ

ಕ್ರಾಂತಿವಾಣಿ ವಾರ್ತೆ  ಸುರಪುರ: ಯುಗಾದಿ -ಯುಗದ ಆದಿ ಅಂದರೆ ಆರಂಭ ಎಂದು ಬ್ರಹ್ಮಾಂಡ ಸೃಷ್ಟಿಯಾದ ದಿನವೆಂದು ನಂಬಲಾಗಿದೆ.

ಯುಗಾದಿ ಹಬ್ಬವು ನಾಲ್ಕು ಯುಗಗಳಾದ ಸತ್ಯಯುಗ ಅಥವಾ ತ್ರೇತಾಯುಗ ದ್ವಾಪರ ಯುಗ ಕಲಿಯುಗ ಇವುಗಳಲ್ಲಿ ಮೊದಲನೆಯ ಯುಗವಾದ ಸತ್ಯಯುಗವು. ಈ ದಿನ ಅಂದರೆ ಚಾಂದ್ರಮಾನ ಕ್ಯಾಲೆಂಡರ್ ನ ಚೈತ್ರ ಮಾಸದ ಮೊದಲ ದಿನವೇ ಈ ಬ್ರಹ್ಮಾಂಡ ಸೃಷ್ಟಿಯಾಯಿತು ಎಂದು ಅಂದಿನ ಈ ದಿನವನ್ನು ಯುಗದ ಆದಿ ಯುಗಾದಿ ಎಂದು ಈ ದಿನವನ್ನು ವರ್ಷದ ಮೊದಲ ಹಬ್ಬವೆಂದು ಆಚರಿಸಲಾಗುತ್ತದೆ.

ದೇಶದ ಹಲವಾರು ಭಾಗಗಳಲ್ಲಿ ಪ್ರಮುಖವಾಗಿ ಆಚರಿಸಲ್ಪಡುವ ವರ್ಷದ ಮೊದಲ ಹಬ್ಬ ಯುಗಾದಿ ಹಬ್ಬ ಇದು ಪ್ರತಿ ವರ್ಷ ಮಾರ್ಚ್ ಅಂತ್ಯಕ್ಕೆ ಏಪ್ರಿಲ್ ಆರಂಭದಲ್ಲಿ ಬರುವ ಈ ಹಬ್ಬವು ಪ್ರಮುಖವಾಗಿ ಹಿಂದುಗಳಿಗೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಸನಾತನ ಪರಂಪರೆಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಈ ಹಬ್ಬವು ವಿಶ್ವ ಸೃಷ್ಟಿಯ ದಿನದಂತೆ ಶ್ರೀರಾಮಚಂದ್ರನ ಪಟ್ಟಾಭಿಷೇಕದ ದಿನವೂ ಹೌದು ಅಲ್ಲದೆ ಭಗವಾನ್ ವಿಷ್ಣುವಿನ ಹಲವಾರು ಅವತಾರಗಳಲ್ಲಿ ಮೊದಲನೆಯ ಅವತಾರವು. ಈ ದಿನವೇ ಆಯಿತೆಂದು ಜಗದೋದ್ಧಾರಕನಾದ ವಿಷ್ಣು ಅಂದು ಮತ್ಸ್ಯ ಅವತಾರದಲ್ಲಿ ಅವತರಿಸಿದ ದಿನವು ಹೌದು.

ಭಾರತದ ಬಹುತೇಕ ರಾಜ್ಯಗಳಲ್ಲಿ ಈ ದಿನದ ಆರಂಭವನ್ನು ಅತಿ ಸಂತಸಡಗರದಿಂದ ಆರಂಭಿಸಿದರೆ ವರ್ಷಪೂರ್ತಿ ಸಂತಸ ಸಡಗರದಿಂದ ಇರಬಹುದೆಂದು ನಂಬಲಾಗಿರುವ ಕಾರಣ ಈ ದಿನದಂದು ಮನೆಯ ಅಂಗಳವನ್ನು ಸಾರನೆ ಮಾಡಿ ರಂಗೋಲಿ ಹಾಕಿ ಶೃಂಗರಿಸಿ ಬಾಗಿಲಿಗೆ ಮಾವಿನ ಎಲೆಯ ತಳಿರು ತೋರಣಗಳನ್ನು ಕಟ್ಟಿ, ಹೊಸ ಬಟ್ಟೆಗಳನ್ನು ಧರಿಸಿಕೊಂಡು ಸಂಭ್ರಮಿಸುವು ದರೊಂದಿಗೆ ಸಹಿ ಖಾದ್ಯಗಳನ್ನು ತಯಾರಿಸಿ ತಮ್ಮ ಹತ್ತಿರದ ಆತ್ಮೀಯ ಬಂದು ಬಳಗದವರನ್ನು ಆಮಂತ್ರಿಸಿ ಸಂತಸದಿಂದ ಊಟ ಬಡಿಸಿ ಖುಷಿ ಪಡುತ್ತಾರೆ.

ಅಂದು ವಿಶೇಷವಾಗಿ ಬೇವು ತಯಾರಿಸಿ ಅಪ್ತೇಷ್ಟ ಬಂಧು ಬಳಗದವರೆಲ್ಲರನ್ನು ಕರೆದು ಬೇವು ಕುಡಿಸಿ ಸಂಭ್ರಮಿಸುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಇದೊಂದು ಭಾವೈಕ್ಯತೆಯನ್ನು ಸಾರುವ ಹಬ್ಬವಾಗಿದ್ದು ಮುಸ್ಲಿಂ ಬಂಧುಗಳು ಕ್ರೈಸ್ತ ಬಾಂಧವರು ತಮ್ಮ ಹಬ್ಬ ಹರಿದಿನಗಳಲ್ಲಿ ಹಿಂದೂ ಬಂಧು ಬಾಂಧವರನ್ನು ಆಮಂತ್ರಿಸಿ, ಪ್ರಸಾದ ನೀಡಿ ಖುಷಿ ಪಡುವಂತೆ ಹಿಂದೂಗಳು ಸಹ ಈ ಯುಗಾದಿ ಹಬ್ಬದಂದು ಮುಸ್ಲಿಂ ಕ್ರೈಸ್ತ ಬಾಂಧವರನ್ನು ಆಮಂತ್ರಿಸಿ ಬೇವು ಬೆಲ್ಲ ನೀಡಿ ಬಂದುತ್ವ ಮೆರೆಯುವ ದಿನವಾಗಿದೆ.

ಬದುಕಿನಲ್ಲಿ ಬರುವ ನೋವು ನಲಿವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎನ್ನುವ ಮಹತ್ವದ ಸಂದೇಶವನ್ನು ಸಾರುವ ಈ ಯುಗಾದಿ ಹಬ್ಬವು ಬೇವು ಬೆಲ್ಲದ ಮಿಶ್ರಣ ಅದರ ಮಹತ್ವವನ್ನು ಸಂಕೇತಿಸುತ್ತದೆ.
ಬೆಲ್ಲವ ಮುಂಬರುವ ದಿನಗಳಲ್ಲಿ ಸುಖ ಸಂತಸ ಆನಂದ ಹರುಷ ಹಬ್ಬ ಹರಿದಿನಗಳು ಸಂತಸದಾಯಕವಿರಲಿ ಎಂಬುದನ್ನು ಸೂಚಿಸಿದರೆ ಬೇವು ನೋವು ರೋಗ ರೂಜಿನ ಬಾಧೆ ಕಷ್ಟ ನಷ್ಟ ಇತ್ಯಾದಿಗಳನ್ನು ಒಳಗೊಂಡಿದೆ. ಹಾಗಾಗಿ ಎರಡು ಮಿಶ್ರಣಗಳನ್ನು ಸಮಾನವಾಗಿ ಸ್ವೀಕರಿಸಿ ಬರುವ ನೋವು ನಲಿವುಗಳನ್ನು ಸ್ವೀಕಾರ ಭಾವದಿಂದ ಸ್ವೀಕರಿಸೋಣ ಎಂಬುದು ಇದರ ಆಂತರ್ಯವಾಗಿದೆ.
ವೈಜ್ಞಾನಿಕ ದೃಷ್ಟಿಕೋನದಿಂದ ಬೇವು ಆರೋಗ್ಯದ ದೃಷ್ಟಿಯಿಂದ ರಕ್ತ ಶುದ್ಧೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಚಿತ್ತ ಚಂಚಲವನ್ನು ನಾಲಿಗೆಯ ಚಪಲತೆಯನ್ನು ತಡೆಯುವ ಶಕ್ತಿಯನ್ನು ಹೊಂದಿದೆ ಎಂದು ಕೂಡ ತಿಳಿದು ಬರುತ್ತದೆ .
ಹೊಸ ಪಂಚಾಂಗ ಪಠಣ:
ಈ ದಿನದಂದು ಹೊಸ ಪಂಚಾಂಗವನ್ನು ಪೂಜಿಸಿ ಮನೆಮಂದಿ ಎಲ್ಲಾ ತಮ್ಮ ವರ್ಷ ಭವಿಷ್ಯವನ್ನು ಕೇಳಿ ತಿಳಿದುಕೊಳ್ಳುತ್ತಾರೆ. ಇದನ್ನು ಪಂಚಾಂಗ ಪಠಣವೆಂದು ಮಠ ಮಂದಿರಗಳಲ್ಲಿ ಗುರು ಹಿರಿಯರ ಮುಖೇನ ತಮ್ಮ ವರ್ಷ ಭವಿಷ್ಯವನ್ನು ತಿಳಿದುಕೊಂಡು ತಮ್ಮ ದೈನಂದಿನ ಬದುಕಿನಲ್ಲಿ ಯಾವ ರೀತಿಯ ಮುಂಜಾಗ್ರತೆಯನ್ನು ಪರಿಹಾರಗಳನ್ನು ಕಂಡುಕೊಳ್ಳಬೇಕು. ಎಂಬುದನ್ನು ನಿರ್ಧರಿಸುವ ವಿಶೇಷವಾದ ದಿನವೇ ಯುಗಾದಿ ಪ್ರಕೃತಿಯಲ್ಲಿ ನಮ್ಮ ಚೈತನ್ಯವನ್ನು ಉಂಟು ಮಾಡುವ ಈ ಋತು ತರುಲತೆಗಳಲ್ಲಿ ತಮ್ಮ ಹಳೆ ಪರ್ಣಗಳನ್ನು ತ್ಯಜಿಸಿ ನವ ಪಲ್ಲವದೊಂದಿಗೆ ನಳ ನಳಿಸುವ ಪ್ರಕೃತಿಯಲ್ಲಿ ಹೊಸ ಬದಲಾವಣೆಯನ್ನು ಕಾಣಬಹುದಾದ ಈ ದಿನ ಮನುಷ್ಯನೊಂದಿಗೆ ಬಹಳ ಅವಿನಾಭಾವ ಸಂಬಂಧವನ್ನು ಹೊಂದಿದೆ ಎಂದರೆ ತಪ್ಪಾಗಲಾರದು.

ಸಂವತ್ಸರಗಳ ಬದಲಾವಣೆಯೊಂದಿಗೆ ಅರವತ್ತು ಸಂವತ್ಸರಗಳ ಚಕ್ರದಲ್ಲಿ ಒಂದು ಸಂವತ್ಸರದ ಮೂರು ನೂರಾ ಅರವತ್ತೈದು ದಿನಗಳ ಅವಧಿಯಲ್ಲಿ ನಡೆದ ಕಹಿ ಘಟನೆಗಳನ್ನು ಮರೆತು ಹೊಸ ಬದುಕಿನೆಡೆಗೆ ಸಾಗುವದಾಗಿದೆ ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವು ಹೊಸತು ಹೊಸತು ತರುತಿದೆ ಎಂಬ ಕವಿವಾಣಿಯಂತೆ ಜೀವ ಜಗತ್ತಿಗೆ ಅನ್ನ ನೀಡುವ ಅದರಲ್ಲೂ ಭಾರತದ ಬೆನ್ನೆಲುಬಾದ ರೈತನು ತನ್ನ ಕೃಷಿಯನ್ನು ಆರಂಭಿಸುವ ದಿನವೂ ಹೌದು.

ಅಂದು ರೈತರು ತಮ್ಮ ಒಡನಾಡಿಗಳಾದ ಬಸವಣ್ಣ ಅಂದರೆ ಎತ್ತುಗಳಿಗೆ ಮೈ ತೊಳೆದು ಶೃಂಗರಿಸಿ ತಾವು ಕೂಡ ಸುಚಿರ್ಭೂತರಾಗಿ ಹೊಸ ಬಟ್ಟೆಗಳನ್ನು ಧರಿಸಿಕೊಂಡು ಹೊಸದಾಗಿ ತಯಾರಿಸಲಾದ ರಂಟೆ ಕುಂಟೆಗಳನ್ನು ತಮ್ಮ ಜಮಿನಿಗೆ ಕೊಂಡು ಹೋಗಿ ಭಕ್ತಿ ಭಾವದಿಂದ ಭೂಮಿಯನ್ನು ಪೂಜಿಸಿ ಎತ್ತುಗಳ ಪಾದಗಳಿಗೆ ಗಂಧ ಕುಂಕುಮ ಹಚ್ಚಿ ಕರ್ಪುರ ಬೆಳಗಿ ಕಾಯಿ ಹೊಡೆದು ಸಿಹಿ ನೈವೇದ್ಯವನ್ನು ಭೂತಾಯಿಗೆ ಅರ್ಪಿಸಿ ನಮಸ್ಕರಿಸಿ ರಂಟೆಯನ್ನು ಹೊಡೆಯಲು ಪ್ರಾರಂಭಿಸುವ ದಿನವಾಗಿದೆ.

ಪಂಚಾಂಗ ಸುದ್ದಿಯನ್ನು ನೋಡಿಕೊಂಡು ಗುರು ಬಲವುಳ್ಳ ಒಕ್ಕಲಿಗರು ರಾಹುವನ್ನು ಎಡಕ್ಕೆ ಅಥವಾ ಹಿಂದಕ್ಕೆ ಮಾಡಿಕೊಂಡು ಒಕ್ಕಲುತನವನ್ನು ಪ್ರಾರಂಭಿಸುವುದು ಈ ದಿನದ ಮಹತ್ವವನ್ನು ಸಾರುತ್ತದೆ.
ಈ ಹಬ್ಬವನ್ನು ಪ್ರದೇಶವಾರು ಬೇರೆ ಬೇರೆ ರೀತಿಯಲ್ಲಿ ಆಚರಿಸುವ ಪದ್ಧತಿ ಇದೆ ಒಂದೊಂದು ಭಾಗದಲ್ಲಿ ಅಭ್ಯಂಜನ ಸ್ನಾನ ಮಾಡುವ ಪದ್ಧತಿ ಇದ್ದರೆ ಇನ್ನು ಕೆಲವು ಕಡೆಗಳಲ್ಲಿ ಆ ಸಂವತ್ಸರದ ಅಂದರೆ ಹಿಂದಿನ ಸಂವತ್ಸರದಲ್ಲಿ ಸ್ವರ್ಗಸ್ಥರಾದವರ ಮನೆಗೆ ಹೋಗಿ ಆ ಮನೆಯವರಿಗೆ ಸಾಂತ್ವನ ಹೇಳಿ ಹಿಂದಿನ ದಿನಗಳಲ್ಲಿ ಆದ ನೋವುಗಳನ್ನು ಮರೆತು ಮುಂದೆ ಸಾಗಿರಿ ಎಂದು ಹೇಳಿ ಬರುವ ಮತ್ತು ಆ ಮನೆಯ ಹಿರಿಯರ ಕಾಲುಗಳಿಗೆ ನಮಸ್ಕರಿಸಿ ಅವರಿಂದ ಆಶೀರ್ವಾದ ಪಡೆದು ಬರುವಂತಹ ಪದ್ಧತಿಯು ಪ್ರಚಲಿತವಾದ ಉನ್ನತ ಸತ್ಸಂಪ್ರದಾಯವು ಆಚಾನುಚಾನವಾಗಿ ನಡೆದುಕೊಂಡು ಬಂದಿದೆ ಇಂತಹ ಮಹತ್ವ ಉಳ್ಳ ಹಬ್ಬವೆ ಯುಗಾದಿ.
ದಿನಾಂಕ 08/ 04 /2024ಕ್ಕೆ ಶೋಭಕೃತ ನಾಮ ಸಂವತ್ಸರ ಮುಗಿದು 09/04/2024 ಕ್ಕೆ ಕ್ರೋಧಿ ನಾಮ ಸಂವತ್ಸರ ಆರಂಭವಾಗುತ್ತಿದೆ ಸಕಲರಿಗೂ ಶುಭವನ್ನು ಸನ್ಮಂಗಳವನ್ನುಂಟು ಮಾಡಲಿ.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ