ಕಾಯಕಯೋಗಿ ತಾತ್ವಿಕ ಚಿಂತನೆಯ ವಚನಕಾರ ದೇವರ ದಾಸಿಮಯ್ಯನವರ ಜಯಂತಿ.
ಕ್ರಾಂತಿವಾಣಿ ಶಹಾಪುರ.
ಕಾಯಕ ನಿಷ್ಠೆಯಲ್ಲಿ ತೊಡಗಿಸಿಕೊಂಡು ಸಮಾನತೆಯಿಂದ ನಿಷ್ಕಳಂಕ ಬದುಕು ರೂಪಿಸಿಕೊಂಡಿದ್ದ ಶರಣ ದೇವರ ದಾಸಿಮಯ್ಯ ಅವರು ಮಾನವರಿಗೆ ಮಾನವ ಮುಚ್ಚುವ ಬಟ್ಟೆ ನೇಯ್ದು, ಭಗವಂತನ ನಿಜವಾದ ಕಾಯಕಯೋಗಿ ಎನಿಸಿದ್ದರು. ಶರಣಕುಲಕ್ಕೆ ತಿಲಕ ಪ್ರಾಯರಾಗಿದ್ದ ಶರಣದ ವಚನಗಳ ಸಾರ ತಿಳಿದುಕೊಂಡರೆ ಬಾಳು ಬಂಗಾರವಾಗುತ್ತದೆ ಎಂದು ಗ್ರೇಡ್ 2 ತಹಸೀಲ್ದಾರ್ ಸೇತು ಮಾಧವ ಕುಲಕರ್ಣಿ ಅವರು ತಿಳಿಸಿದರು.
ತಾಲೂಕ ಆಡಳಿತದ ವತಿಯಿಂದ ನಗರದ ತಹಸಿಲ್ ಕಚೇರಿಯಲ್ಲಿ ದೇವರ ದಾಸಿಮಯ್ಯನವರ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದೇವರ ದಾಸಿಮಯ್ಯನವರು ತನ್ನ ಜೀವಿತದ ಕೊನೇ ಗಳಿಗೆವರೆಗೂ ಕಾಯಕವನ್ನು ಎಂದೂ ತೊರೆಯಲಿಲ್ಲ. ಕಾಯಕ ನಿಷ್ಟೆ ಎನ್ನುವುದು ಪ್ರತಿಯೊಬ್ಬ ಸಾಧಕನಿಗೂ ಅತಿ ಮುಖ್ಯ ಎನ್ನುವುದನ್ನು ಬಸವಣ್ಣನಿಗೂ ಮೊದಲೇ ಪ್ರಯೋಗದಲ್ಲಿ, ಮಾರ್ಗದಲ್ಲಿ ತೋರಿಸಿಕೊಟ್ಟವರು ದೇವರ ದಾಸಿಮಯ್ಯ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಲೋಕಾಯುಕ್ತ ಎಸ್ ಪಿ, ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ,ಸಿ.ಎನ್.ಭಂಡಾರೆ,ಅವರು,
ದಾಸಿಮಯ್ಯನ ವಚನಗಳು ದಾಂಪತ್ಯಜೀವನ, ಕಾಯಕನಿಷ್ಠೆ, ಶಿವತತ್ತ್ವ, ಲಿಂಗಸಮಾನತೆ, ಭಕ್ತಿತತ್ತ್ವಗಳಿಂದ ಕೂಡಿವೆ. ಆತ್ಮತತ್ತ್ವವನ್ನು ಕುರಿತ ದಾಸಿಮತ್ತನ ಮಾತುಗಳು ಮನುಕುಲಕ್ಕೆ ದಾರಿದೀಪವಾಗಿವೆ. ದಾಸಿಮಯ್ಯನವರ ಅನುಯಾಯಿಗಳಾದ ನೇಕಾರರ ಬದುಕು ಅತ್ಯಂತ ಕಷ್ಟಮಯದಿಂದ ಕೂಡಿದೆ. ನೇಕಾರಿಕೆ ಜೀವನ ನಿರ್ವಹಣೆಗೆ ಸಾಲುವಷ್ಟು ಆರ್ಥಿಕ ಲಾಭ ತರದ ಕಾರಣ ಬೇರೆ ಬೇರೆ ವೃತ್ತಿಗಳಲ್ಲಿ ನೆಲೆ ನಿಲ್ಲುವ ಪರಿಸ್ಥಿತಿ ಇದೆ. ಇಂದಿನ ದಿನಮಾನದಲ್ಲಿ ಅದೊಂದು ಕುಲಕಸುಬಾಗಿ ಉಳಿದಿಲ್ಲ. ಕಚ್ಚಾಮಾಲು, ಮಾರುಕಟ್ಟೆ ಸಮಸ್ಯೆಯಿಂದಾಗಿ ಬೇರೆ ವೃತ್ತಿ ಅವಲಂಭಿಸುವ ಪರಿಸ್ಥಿತಿ ಇದೆ. ಸರಕಾರ ಸಮುದಾಯದ ಶೈಕ್ಷಣಿಕ ಸವಲತ್ತು ಹೆಚ್ಚಿಸಬೇಕು. ನೇಕಾರರು ಹೆಚ್ಚಿಗೆ ಇರುವ ಕಡೆ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸಮುದಾಯಕ್ಕೊಂದು ನಿವೇಶನ ನೀಡಬೇಕು. ಇವತ್ತಿನ ಪರಸ್ಥಿತಿಯಲ್ಲಿ ನೂರರ ನೋಟು ಸಂತೆಗೆ ಒಯ್ದರ ಹಿಡಿಯಷ್ಟು ಕಾಯಿಪಲ್ಲೇ ಬರುವದಿಲ್ಲಾ. ದಿನನಿತ್ಯ ಬೇಕಾಗುವ ಜೀವನಾವಶ್ಯಕ ವಸ್ತುಗಳ ಬೆಲೆ ಯಾವ ರೀತಿ ಏರಿದೆ ಎಂಬುದು ಇದರಿಂದ ತಿಳಿಯುತ್ತದೆ. ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚುತ್ತಿರುವುದು ಯಾರ ಗಮನಕ್ಕೆ ಬಂದಂತಿಲ್ಲ. ಬಡ ನೇಕಾರರ ಗೋಳು ಯಾರ ಅರಿವಿಗೆ ಬರುತ್ತಿಲ್ಲ. ಬಡಜನತೆ ಬೆಲೆ ಏರಿಕೆಯ ಬಿಸಿಗೆ ತತ್ತಿರಿಸಿ ಹೊಗಿದ್ದಾರೆ. ಸರ್ಕಾರ ನೇಕರ ನೆರವಿಗೆ ಬರಬೇಕಿದೆ.
ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆಯ ನೌಕರರು, ಸಂಘದ ತಾಲೂಕಿನ ಅಧ್ಯಕ್ಷ ಕೊಟ್ರಪ್ಪ ಚಿಲ್ಲಾಳ, ಉಪಾಧ್ಯಕ್ಷ ಗುರುಸಿದ್ಧಪ್ಪ ಚಿನಗುಡಿ,ತಿಪ್ಪಣ್ಣ ಗಾಗಿ೯, ದೇವೇಂದ್ರಪ್ಪ ಗೌಡ,ಸಿದ್ದಣ್ಣ ಗಂಜಿ,ವಿಜಯ ಗುಳೇದ ಹಾಗೂ ಎಲ್ಲಾ ಸಮುದಾಯಗಳ ಅದ್ಯಕ್ಷರು ಭಾಗವಹಿಸಿದ್ದರು .. ಭಾಗವಹಿಸಿದ್ದರು.