ರಾಜಾ ವೇಣುಗೋಪಾಲ ನಾಯಕ ಉಪ ಚುನಾವಣೆಗೆ ಉಮೇದುವಾರಿಕೆ

ವರದಿ: ಎನ್.ಎನ್.

ಕ್ರಾಂತಿವಾಣಿ ವಾರ್ತೆ.

ಸುರಪುರ: ಮತಕ್ಷೇತ್ರದಲ್ಲಿ ನನ್ನ ತಂದೆ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಮಾಡಿರುವ ಕಾರ್ಯಗಳೇ ಉಪಚುನಾವಣೆಯ ಗೆಲುವಿನಲ್ಲಿ ಶ್ರೀರಕ್ಷೆಯಾಗಲಿದೆ. ತಂದೆ ನಮ್ಮಿಂದ ಮರೆಯಾಗಿಲ್ಲ. ಅವರು ಯಾವುಗಾಲೂ ನನ್ನ ಜತೆ ಮತ್ತು ಮನದ ಮನಸ್ಸಿನಲ್ಲಿ ಸದಾ ಹಚ್ಚಳಿಯದೇ ಉಳಿಯುತ್ತಾರೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಚುನಾವಣಾಧಿಕಾರಿ ಕಾವ್ಯರಾಣ ಅವರಿಗೆ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು, ಚುನಾವಣೆ ಪ್ರಚಾರಕ್ಕೆ ಹೋದಾಗ ಜನರಿಂದ ತುಂಬ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ತಂದೆಯೂ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ, ಕಾಂಗ್ರೆಸ್ ರಾಜ್ಯ ಸರಕಾರ ಅನುಷ್ಠಾನಗೊಳಿಸಿರುವ ಗ್ಯಾರಂಟಿ ಮತ್ತು ಅಭಿವೃದ್ಧಿ ಕೆಲಸುಗಳು ಜನರ ಮನಸ್ಸಿನಲ್ಲಿವೆ ಎಂದರು.

 ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕಾಂಗೆಸ್ ಪಕ್ಷವೂ ಸಾಮಾಜಿಕ ನ್ಯಾಯ ಕೊಡಿಸುವ ಏಕೈಕ ಪಕ್ಷವಾಗಿದೆ. ಸರಕಾರ ಮಾಡಿರುವ ಯೋಜನೆಗಳನ್ನು ಜನರಿಗೆ ತಿಳಿಸಿ ಮತ ಯಾಚಿಸುತ್ತಿದ್ದೇವೆ. ಶಾಸಕ ರಾಜಾ ವೆಂಕಟಪ್ಪ ನಾಯಕರು ಅರ್ಧಕ್ಕೆ ಬಿಟ್ಟು ಹೋಗಿರುವ ಅಭಿವೃದ್ಧಿಯನ್ನು ಮಾಡುವ ಕನಸನ್ನು ಹೊಂತು ಬಂದಿದ್ದೇನೆ. ಜನರು ಕೈ ಬಿಡುವುದಿಲ್ಲ ಎನ್ನುವ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆ ನನಗೆ ಹೊಸತಲ್ಲ. ತಂದೆಯ ಚುನಾವಣೆಗಳಲ್ಲಿ ಪಾಲ್ಗೊಂಡು ಪ್ರಚಾರ ಮಾಡುತ್ತಿದ್ದೆ. ಪ್ರಥಮ ಬಾರಿಗೆ ಚುನಾವಣೆಯನ್ನು ಹೆಗಲ ಮೇಲೆ ಹೊತ್ತು ಕೊಂಡು ಸಾಗುತ್ತಿದ್ದೇನೆ. ಮುಖಂಡರ, ಕಾರ್ಯಕರ್ತರ, ಅಭಿಮಾನಿಗಳ ಬೆಂಬಲ ದೊರೆಯುತ್ತಿದೆ. ಪ್ರತಿಯೊಂದು ಸಮುದಾಯದವರು ಹೋದ ಕಡೆಗೆಲ್ಲ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಜನರಲ್ಲೇ ತಂದೆಯನ್ನು ಕಾಣುತ್ತಿದ್ದೇನೆ ಎಂದರು.
ತಂದೆಯನ್ನು ಕ್ಷೇತ್ರದ ಜನತೆ ಮತ ನೀಡಿದಂತೆ ನನ್ನನ್ನು ಕೈ ಬಿಡುವುದಿಲ್ಲ ಎನ್ನುವ ನಂಬಿಕೆಯಿದೆ. ಜನರ ಪ್ರೀತಿಯೇ ನಮ್ಮನ್ನು ಕಾಪಾಡಲಿದೆ. ಹುಣಸಗಿ ಮತ್ತು ಸುರಪುರ ತಾಲೂಕುಗಳಲ್ಲಿ ಮತದಾರ ಪ್ರಭು ಮತ ನೀಡಿ ಗೆಲುವಿಗೆ ಸಹಕರಿಸಲಿದ್ದೇನೆ ಎಂದು ತಿಳಿಸಿದರು.
ಆಸ್ತಿ ಘೋಷಣೆ: ಕಾಂಗ್ರೆಸ್ ಅಭ್ಯರ್ಥಿಯೂ ರಾಜಾ ವೇಣುಗೋಪಾಲ ನಾಯಕ ಅವರು ೩ ಲಕ್ಷ ರೂ. ನಗದು, ೨೯.೫೦ ಲಕ್ಷ ರೂ. ಮೌಲ್ಯದ ಟೊಯೊಟೊ ಫಾರ್ಚುನರ್, ೩೮ ಲಕ್ಷ ರೂ. ಮೌಲ್ಯದ ಎಂ.ಜಿ ಗ್ಲೋಸ್ಟರ್ ಎರಡು ವಾಹನಗಳನ್ನು ಹೊಂದಿದ್ದಾರೆ.
೬೦೦ ಗ್ರಾಂ ಚಿನ್ನ, ಪತ್ನಿಯ ಬಳಿ ೫೦೦ ಗ್ರಾಂ ಚಿನ್ನ, ಪಿತ್ರಾರ್ಜಿತವಾಗಿ ೭೫೦ ಗ್ರಾಂ ಬಂಗಾರ ಮತ್ತು ೧೦ ಕೆ.ಜಿ ಬೆಳ್ಳಿಯಿದೆ. ೩,೦೨,೯೯,೭೯೭ ಮೌಲ್ಯದ ಚರಾಸ್ತಿ ಮತ್ತು ನಿವೇಶನಗಳು, ಪಿರ್ತ್ರಾಜಿತವಾಗಿ ಬಂದ ಜಮೀನುಗಳು ಸೇರಿ ಒಟ್ಟು ೧೦,೪೮,೬೮,೪೦೨ ಮೊತ್ತದ ಮಾರುಕಟ್ಟೆ ಬೆಲೆಯ ಸ್ಥಿರಾಸ್ತಿಯನ್ನು ಹೊಂದಿದ್ದಾರೆಂದು ತಮ್ಮ ಉಮೇದುವಾರಿಕೆಯಲ್ಲಿ ಘೊಷಿಸಿಕೊಂಡಿದ್ದಾರೆ.
ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ, ರಾಜಾ ಕುಮಾರ ನಾಯಕ, ರಾಜಾ ಸಂತೋಷ ನಾಯಕ, ನಿಂಗರಾಜ ಬಾಚಿಮಟ್ಟಿ, ಚಂದ್ರಶೇಖರ ದಂಡಿನ್, ರಾಜಶೇಖರಗೌಡ ವಜ್ಜಲ್,ಭೀಮರಾಯ ಮೂಲಿಮನಿ, ಅಬ್ದುಲ್ ಗಫೂರ ನಗನೂರಿ, ರವಿ ಆನಂದ ಸಾಹುಕಾರ, ವೆಂಕಟೇಶ ಹೊಸ್ಮನಿ, ದಾನಪ್ಪ ಕಡಿಮನಿ, ಹಣಮಂತ್ರಾಯ ಗೌಡ ಕಕ್ಕೇರಾ ಸೇರಿದಂತೆ ಇತರರಿದ್ದರು.

ವಿಳಾಸ: ಕಾಂಗ್ರೆಸ್ ಅಭ್ಯರ್ಥಿಯ ಹೆಸರು ರಾಜಾ ವೇಣುಗೋಪಾಲ ನಾಯಕ (೪೧), ತಂದೆ ರಾಜಾ ವೆಂಕಟಪ್ಪ ನಾಯಕ, ವಿಳಾಸ ವಸಂತ ಮಹಲ್, ದರ್ಬಾರ ರೋಡ್, ಶೋರಪುರ (ತಾ), ಯಾದಗಿರಿ ಜಿಲ್ಲೆ, ಸದಸ್ಯತ್ವದ ಪಕ್ಷ ಭಾರತೀಯ ರಾಷ್ಟç ಪಕ್ಷ, ಪರಿಶಿಷ್ಟ ಪಂಗಡದ ನಾಯಕ(ಪ.ಪಂ), ಅಭ್ಯರ್ಥಿಗಳ ಮತದಾರ ಪಟ್ಟಿಯ ಸಂಖ್ಯೆ ಭಾಗ ಸಂ. ೯೦, ಕ್ರಮ ಸಂಖ್ಯೆ ೮೪೦ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

 

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ