ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ
ಸುರಪುರ: ತಾಲೂಕಿನ ದೇವರಗೋನಾಲ ಗ್ರಾಮದ ಮೌನೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಆದಿಲಿಂಗೇಶ್ವರ ಪಲ್ಲಕ್ಕಿ ಉತ್ಸವ ಮೆರವಣಿಗೆ, ಮೌನೇಶ್ವರ ದೇವಸ್ಥಾನಕ್ಕೆ ಕಳಸರೋಹಣ ಮತ್ತು ಶ್ರೀ ಮೌನೇಶ್ವರ ಸಂಗೀತಾ ಸೇವಾ ಬಳಗದಿಂದ ಸಂಗೀತ ಸೇವಾ ಕಾರ್ಯಕ್ರಮ ನಡೆಯಿತು.
ಈ ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಸಂಗೀತವು ಮನುಷ್ಯನ ದುಗುಡಗಳನ್ನು ದೂರಮಾಡುವ ಶಕ್ತಿ ಇದೆ. ಪ್ರತಿಯೊಬ್ಬರು ಸಂಗೀತ ಆಲಿಸಿದರೆ ಮನಸ್ಸಿನಲ್ಲಿರುವ ಒತ್ತಡಗಳನ್ನು ನಿವಾರಣೆ ಮಾಡಬಹುದು. ಸಂಗೀತ ಮನುಷ್ಯನಿಗೆ ಹೊಸ ಹೊಸ ಆವಿಷ್ಕಾರದ ಗುಣಗಳನ್ನು ಕಲಿಸಿಕೊಡುತ್ತದೆ. ಹೊಸ ದಾರಿಗೆ ನಮ್ಮನ್ನು ಕೊಂಡು ಒಯ್ಯುತ್ತದೆ . ಸಂಗೀತಕ್ಕೆ ಅಪಾರ ಶಕ್ತಿ ಇದ್ದು , ಮನುಷ್ಯನ ಮನಸ್ಸನ್ನು ಬದಲಿಸುವಂತಹ ವಿಶೇಷ ಗುಣವಿದೆ . ಸಂಗೀತ ಬಲ್ಲವನಿಗೆ ರೋಗವಿಲ್ಲ ಎನ್ನುವ ನಾಣ್ಣು ನುಡಿಯಂತೆ ಪ್ರತಿಯೊಬ್ಬರೂ ಸಂಗೀತ ಆಲಿಸಿ ಸಂಗೀತ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದರು
ಪೂಜ್ಯ ಶ್ರೀ ಲಿಂಗಯ್ಯಸ್ವಾಮಿಗಳು ಶ್ರೀ ಮೌನೇಶ್ವರ ದೇವಸ್ಥಾನ ದೇವರಗೋನಾಲ ಸಾನಿಧ್ಯ ವಹಿಸಿದ್ದರು. ಪೂಜ್ಯ ಶ್ರೀ ಸಕ್ರಪ್ಪ ಪೂಜಾರಿ ಶ್ರೀ ಹೈಯ್ಯಾಳಲಿಂಗೇಶ್ವರ ದೇವಸ್ಥಾನ ದೇವರಗೋನಾಲ ನೇತೃತ್ವದಲ್ಲಿ ಸಾಮೂಹಿಕ ಉಪನಯನ, ಸಂಜೆ 5 ಗಂಟೆಗೆ ಬಾದ್ಯಾಮರದಿಂದ ನಂದಿಕೋಲ ಆಗಮನ ಹಾಗೂ ರಥೋತ್ಸವ ನಡೆಯಿತು. ಏ. 23 ರಂದು ದವನದ ಹುಣ್ಣಿಮೆಯಂದು ಮುಂಜಾನೆ ಪಲ್ಲಕ್ಕಿ ಸೇವಾ, ಮಧ್ಯಾಹ್ನ 1-00 ಗಂಟೆಗೆ ಜಂಗಿ ಕುಸ್ತಿ, ಸಾಯಂಕಾಲ ಧೂಳಗಾಯಿ ಗುಹಾ ಪ್ರವೇಶ ಜರುಗಿತು.
ತಹಸೀಲ್ದಾರ್ ನಾಗಮ್ಮ, ಕಂದಾಯ ನಿರೀಕ್ಷಕ ಬಸವರಾಜ ಬಿರದಾರ, ಗ್ರಾಮದ ಮುಖಂಡರು, ಹಿರಿಯರು, ಕಿರಿಯರು ಪಾಲ್ಗೊಂಡಿದ್ದರು. ಶಿವರಾಜ ರಾಜಶೇಖರ ವಿಶ್ವಕರ್ಮ, ಮನೋಹರ ವಿಶ್ವಕರ್ಮ, ನಿಂಗಯ್ಯ ಸ್ವಾಮಿ, ಸಂಗೀತ ಸೇವೆ ನೀಡಿದ ಕಲಾವಿದರಾದ ಜಗದೀಶ್ ಮಾನು, ಸೋಮಶೇಖರ್ ಪತ್ತಾರ, ಚನ್ನಬಸಪ್ಪ ಶಹಪುರ ನಿಂಗಣ್ಣ ವಿಶ್ವಕರ್ಮ, ಮಾನಯ್ಯ ಆಚಾರ್ಯ, ಲಕ್ಷ್ಮಿಕಾಂತ್ ಕುಕನೂರು, ಬಾಲಕಲಾವಿಧ ಕೇದಾರನಾಥ್ ಸಂಗೀತ ಸೇವೆ ನೀಡಿದರು.