ವರದಿ : ಸಿಕಂದರ ಎಂ. ಆರಿ
ಕ್ರಾಂತಿ ವಾಣಿ ವಾರ್ತೆ
ಗದಗ: ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಏ. 28ರಂದು ಯುವಚೈತನ್ಯ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಜ್ಯೂನಿಯರ್ ಕೆ.ಎಚ್. ಪಾಟೀಲ ಹೇಳಿದರು.
ನಗರದಲ್ಲಿ ಬುಧವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಚೈತನ್ಯ ಕಾರ್ಯಕ್ರಮವು ಏ. 28ರಂದು ಸಂಜೆ 4ಕ್ಕೆ ನಡೆಯಲಿದ್ದು, ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಸಚಿವ ಎಚ್.ಕೆ. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಹಮ್ಮದ್ ನಲಪಾಡ್ ಆಗಮಿಸಲಿದ್ದಾರೆ ಎಂದು ಹೇಳಿದರು.
ಮೇ 7ರಂದು ಲೋಕಸಭಾ ಚುನಾವಣೆ ಮತದಾನ ನಡೆಯಲಿದ್ದು, ಈ ಚುನಾವಣೆ ಮಹತ್ವದ ಚುನಾವಣೆಯಾಗಿದೆ. ಯುವಕರ ಚುನಾವಣೆಯಾಗಿದ್ದು, ಯುವಕರ ಭಾಗವಹಿಸುವಿಕೆ, ಯುವಕರಿಗೆ ಜಾಗೃತಿ, ಯುವಕರ ಮುಂದಾಳತ್ವ, ರಾಜಕೀಯದಲ್ಲಿ ಯುವಕರ ಪಾತ್ರ ಎಂಬ ವಿಷಯ ತಿಳಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಯುವಕರಿಗಾಗಿ ಇಡಲಾಗಿರುವ ಅಂಶಗಳನ್ನು ತಿಳಿಹೇಳುವ ಕಾರ್ಯಕ್ರಮವೂ ಇದಾಗಿದೆ ಎಂದು ಹೇಳಿದರು.
ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಕೇಂದ್ರ ಸರಕಾರ ಮಾತಿಗೆ ತಪ್ಪಿದ್ದರಿಂದ ಯುವಕರಿಗೆ ಹಿನ್ನಡೆಯಾಗುತ್ತಿದೆ. 30 ಲಕ್ಷಕ್ಕೂ ಅಧಿಕ ಉದ್ಯೋಗಗಗಳು ಭರ್ತಿಯಾಗದೇ ಹಾಗೆ ಉಳಿದಿವೆ. ಯುವಕರು ಸಂಕಷ್ಟ ಜೀವನ ಎದುರಿಸುವಂತಾಗಿದೆ. ಆದ್ದರಿಂದ ಯುವಕರಿಗೆ ಬಲ ತುಂಬುವ ಕೆಲಸವಾಗಿ ಯುವ ಚೈತನ್ಯ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಯುವಕರಿಗೆ ಆರ್ಥಿಕವಾಗಿ ಸಬಲರಾಗಲು ಯುವನಿಧಿ ಯೋಜನೆ ಜಾರಿ ತರಲಾಗಿದೆ. ಇದರಿಂದ ಯುವಕರು ಸಂಕಷ್ಟದ ಜೀವನದಿಂದ ಹೊರಬರಲು ಸಾಧ್ಯವಾಗಿದೆ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಜಿಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಮುಖಂಡರಾದ ಬಸವರಾಜ ಕಡೆಮನಿ, ಸರ್ಫರಾಜ್ ಬಬರ್ಚಿ ಸೇರಿ ಅನೇಕರು ಇದ್ದರು.