೨ ಲಕ್ಷಕ್ಕೂ ಹೆಚ್ಚು ಮತಗಳಾಂತರದಿಂದ ಬೊಮ್ಮಾಯಿ ಗೆಲವು : ಯಡಿಯೂರಪ್ಪ ಭವಿಷ್ಯ

ವರದಿ : ಸಿಕಂದರ ಎಂ.ಆರಿ

ಕ್ರಾಂತಿವಾಣಿ ವಾರ್ತೆ

ಗದಗ : ಸಿದ್ಧರಾಮಯ್ಯ ನಾನು ರಾಜ್ಯಕ್ಕೆ ಅನ್ನ ಭಾಗ್ಯವನ್ನು ನೀಡಿ ರಾಜ್ಯದ ಜನತೆಗೆ ಅನ್ನ ನೀಡಿರುವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಾಗಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುಂಚೆ ರಾಜ್ಯದ ಜನರು ಅನ್ನ ನೋಡೇ ಇಲ್ಲವಾ ? ಹತ್ತು ಕೆಜಿ‌ ಅಕ್ಕಿ ಎಂದು ಹೇಳಿಕೊಂಡು ಓಡಾಡುವ ಈ‌ ಸಿದ್ಧರಾಮಯ್ಯ ನವರೇ ಎಲ್ಲಿ ಇದೇ ನಿಮ್ಮ ಹತ್ತು‌ ಕೆಜಿ ಅಕ್ಕಿ‌ ಎಂದು ಮುಖ್ಯಮಂತ್ರಿಗಳಿಗೆ‌ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸವಾಲು ಹಾಕಿದರು. ರಾಜ್ಯದಲ್ಲಿ ಬಿಜೆಪಿ‌ ಅವಧಿಯಲ್ಲಿದ್ದಾಗ ಕೈಗೊಂಡ ಜನ ಪರ ಮತ್ತು ರೈತ ಪರ ಅಭಿವೃದ್ಧಿ ಕಾರ್ಯಗಳು ಬಸವರಾಜ ಬೊಮ್ಮಾಯಿ ಅವರನ್ನು‌ ೨ ಲಕ್ಷಕ್ಕೂ‌ ಅಧಿಕ ಮತಗಳಾಂತರದಿಂದ ಗೆಲುವಿನ ಶ್ರೀರಕ್ಷೆಯಾಗಿವೆ. ಗಜೇಂದ್ರಗಡ ನಗರದಲ್ಲಿ ಸೇರಿರುವ ಕಾರ್ಯಕರ್ತರನ್ನು ನೋಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳು‌ ಹುಸಿ ಹೋಗಿವೆ. ೧೦ ವರ್ಷಗಳಿಂದ ಒಂದು‌ ದಿನ ಕೂಡ ವಿಶ್ರಾಂತಿ ಪಡೆಯದ ನರೇಂದ್ರ ಮೋದಿಜೀ ಅವರ ಹವಾಕ್ಕೆ ಕಾಂಗ್ರೆಸ್ ದೇಶದಲ್ಲಿ ಸಂಪೂರ್ಣ ಧೂಳಿ ಪಟಯಾಗಲಿದೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಯಾವುದೇ ನೈತಿಕ ಇಲ್ಲ. ಇಡೀ ದೇಶದಲ್ಲಿ‌ ಕಾಂಗ್ರೆಸ್ ೪೧ ಸ್ಥಾನ ಗೆಲುವುದು ಕೂಡ ಅನುಮಾನವಾಗಿದೆ ಎಂದು ಮಾಜಿ‌‌ ಸಿಎಂ ಬಿ.ಎಸ್. ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.‌

ಜಿಲ್ಲೆಯ ಗಜೇಂದ್ರಗಡ ನಗರದಲ್ಲಿ ಗುರುವಾರ ಹಾವೇರಿ-ಗದಗ ಲೋಕಸಭಾ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ‌ ಬಸವರಾಜ ಬೊಮ್ಮಾಯಿ ಪರ ಜರುಗಿದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ‌ ಅವರು ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ನೀಡಿರುವ ಕಿಸಾನ್ ಸನ್ಮಾನ್, ಬಡ ವಿದ್ಯಾರ್ಥಿ ಶಿಷ್ಯ ವೇತನ, ಭಾಗ್ಯಲಕ್ಷ್ಮೀ ಯೋಜನೆ ಸೇರಿದಂತೆ‌ ರೈತರಿಗೆ ಮತ್ತು ಎಸ್.ಸಿ/ಎಸ್.ಟಿ ಜನಾಂಗದವರಿಗೆ ನೀಡಲಾಗುತ್ತಿದ್ದ ಯೋಜನೆಗಳನ್ನು ಯಾವ ಕಾರಣಕ್ಕೆ ಸ್ಥಗಿತಗೊಳ್ಳಿಸಿದ್ದಾರೆ ಎಂಬುವುದನ್ನು ರಾಜ್ಯ ಜನತೆ ಉತ್ತರಿಸಲಿ. ರಾಜ್ಯದಲ್ಲಿ‌ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು‌ ವರ್ಷ ಕಳೆಯುತ್ತಾ ಬಂದರು ಅಭಿವೃದ್ಧಿ ‌ಕಾರ್ಯ ಇಲ್ಲ. ಕೇವಲ ಲೂಟಿ, ಭ್ರಷ್ಟಾಚಾರಕ್ಕೆ ಸೀಮಿತವಾಗಿದೆ. ಸಿದ್ಧರಾಮಯ್ಯನವರೇ ನಿಮ್ಮಗೆ ಜನ ಮತ ನೀಡಿರುವುದು ಅಭಿವೃದ್ಧಿಗೋಸ್ಕರ ಅಭಿವೃದ್ಧಿ ಮರೆತು ಜನರ ತೆರಿಗೆ ಹಣವನ್ನು ನೀವು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯದ ಮತ್ತು ದೇಶದ ಜನತೆಗೆ ಗ್ಯಾರಂಟಿಗಳ ರುಚಿ ತೋರಿಸಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿ ಸಿದ್ಧರಾಮಯ್ಯ ನವರು ಇದ್ದಾರೆ. ಆದರೆ, ರಾಜ್ಯದ ಮತದಾರರ ನಿಮ್ಮ ಆಢಳಿತಕ್ಕೆ ಬೇಸತ್ತು ಹೋಗಿದ್ದಾರೆ. ಆದ್ದರಿಂದ ಈ ಲೋಕಸಭಾ ಚುನಾವಣೆಯಲ್ಲಿ ನೀವು ನಿಮ್ಮ ಕಾಂಗ್ರೆಸ್ ಪಕ್ಷ ಶೂನ್ಯ ಸಾಧನೆ ಮಾಡಲಿದೆ ಎಂದರು.

ಬಿಜೆಪಿ ಅವಧಿಯಲ್ಲಿ ಗದಗ ಜಿಲ್ಲೆಯ ಗಜೇಂದ್ರಗಡ, ನರೇಗಲ್ಲ, ರೋಣ ಪಟ್ಟಣಗಳಿಗೆ ಶಾಶ್ವತ ಬಹುಗ್ರಾಮ ಕುಡಿಯುವ ನೀರಿನ‌ ಯೋಜನೆಯನ್ನು ಮತ್ತು ಜಿಲ್ಲೆಯಲ್ಲಿ ಏತ ನೀರಾವರಿ ಯೋಜನೆ, ಜಾಲವಾಡಗಿ ನೀರಾವರಿ ಯೋಜನೆಗಳನ್ನು ಇದೇ ಬೊಮ್ಮಾಯಿಯವರು ಗದಗ ಜಿಲ್ಲೆಗೆ ಕಲ್ಪಿಸಿದ್ದಾರೆ. ಆದ್ದರಿಂದ ಜಿಲ್ಲೆಯ‌ ಎಲ್ಲಾ ಮತದಾರರು ಬರುವ ಮೇ-೭ ರಂದು ಕಮಲದ ಗುರುತಿಗೆ ಅಮೂಲ್ಯವಾದ ಮತವನ್ನು ನೀಡಿ ಮತದಾರರ ಋಣವನ್ನು ತೀರಿಸಲು ಬೊಮ್ಮಾಯಿಯವರಿಗೆ ದೆಹಲಿಗೆ ಕಳುಹಿಸಲು ಮುಂದಾಗಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

ಲೋಕಸಭೆ ಚುನಾವಣೆಯಲ್ಲಿ ಈಗ ನಡೆದಿರುವ 14 ಕ್ಷೇತ್ರಗಳ ಚುನಾವಣೆಯಲ್ಲಿ 14 ಕೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಉತ್ತರ ಕರ್ನಾಟಕದಲ್ಲಿಯೂ ಅಷ್ಟೂ ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಬಿಜೆಪಿಗೆ ಮತ ಹಾಕಿ ಮೇ 7 ರ ನಂತರ ಕಾಂಗ್ರೆಸ್ ಗೆ ಚೊಂಬು ಕೊಡಬೇಕು. ಮುಂದಿನ ಒಂದು ವರ್ಷದಲ್ಲಿ ರಾಜ್ಯದಲ್ಲಿ ಮತ್ತೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

ಹಾವೇರಿ-ಗದಗ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್
ಕಳೆದ ಹತ್ತು ತಿಂಗಳಲ್ಲಿ ರೈತರಿಗೆ ಏನು ಕೊಟ್ಡಿದ್ದೀರಿ, ನಾವು ಕೊಟ್ಟಿದ್ದ ರೈತ ವಿದ್ಯಾನಿಧಿ, ರೈತಶಕ್ತಿ, ಕಿಸಾನ್ ಸಮ್ಮಾನ್ ಯೋಜನೆಗಳನ್ನು ನಿಲ್ಲಿಸಿದ್ದಾರೆ. ದಲಿತರ ಹಣವನ್ನೂ ಬಿಡಲಿಲ್ಲ. ದಲಿತರ ಮೇಲೆ ಪ್ರೀತಿಯ ಭಾಷಣ ಮಾಡುವ ಇವರು ದಲಿತರ ಹೊಟ್ಟೆ ಮೇಲೆ ಹೊಡಿದ್ದಾರೆ. ರೈತನ ಬೆನ್ನಿಗೆ ಹೊಡೆದು, ಮಹಿಳೆಯರ ಬದುಕಿನ ಮೇಲೆ ಹೊಡೆದಿದ್ದಾರೆ. ಈ ಸರ್ಕಾರದಲ್ಲಿ ಮಹಿಳೆಯರ ಮಾನ ಪ್ರಾಣಕ್ಕೆರಕ್ಷಣೆ ಇಲ್ಲದಂತಾಗಿದೆ‌. ಹುಬ್ಬಳ್ಳಿಯಲ್ಲಿ ಕಾಲೇಜು ಯುವತಿಯನ್ನು ಒಂಭತ್ತು ಬಾರಿ ಇರಿದು ಕೊಲೆ ಮಾಡಿದ್ದಾನೆ. ಈ ಸರ್ಕಾರ ಆರೋಪಿಗಳನ್ನು ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಬರ ಬಂದಿದೆ. ಇವರು ಕೊಡುವ 2000 ರೂ. ನಲ್ಲಿ ಶೇ 75% ರಷ್ಟು ಹಣ ಕೇಂದ್ರ ಸರ್ಕಾರದಿಂದ ಬಂದಿದೆ. ಮೊನ್ನೆ 3454 ಕೋಟಿ‌ ಕೇಂದ್ರ ಸರ್ಕಾರ ಕೊಟ್ಟಿದೆ. ಅಷ್ಟೇ ಹಣವನ್ನು ರಾಜ್ಯ ಸರ್ಕಾರ ಕೊಡಬೇಕು. ಯುಪಿಎ ಅವಧಿಯಲ್ಲಿ 19579 ಕೋಟಿ ರೂ. ಪರಿಹಾರ ಕೇಳಿದರೆ, ಅವರು ಕೊಟ್ಟಿದ್ದು ಕೇವಲ 1900 ಕೋಟಿ ರೂ. ಎನ್ ಡಿಎ ಸರ್ಕಾರ ಹತ್ತು ವರ್ಷದಲ್ಲಿ 10 ಸಾವಿರ ಕೋಟಿ ರೂ. ನೀಡಿದೆ. ಶೇ 60% ರಷ್ಟು ಕೇಂದ್ರ ಸರ್ಕಾರ ಕೊಟ್ಟಿದೆ ಎಂದು ಹೇಳಿದರು.

ನಾನು ಸಿಎಂ ಆಗಿದ್ದಾಗ ರಾಜ್ಯದ 30 ಲಕ್ಷ ಮನೆಗಳಿಗೆ ಕುಡಿಯುವ ನೀರು ಕೊಡುವ ಕೆಲಸ ಮಾಡಿದ್ದೇನೆ. ಈ ಭಾಗದ 21 ಕೆರೆ ತುಂಬಿಸಲು ಆಲ್ ಮಟ್ಟಿ ಆಣೆಕಟ್ಟೆಯಿಂದ ನೀರು ತಂದವರು ಬಸವರಾಜ ಬೊಮ್ಮಾಯಿ. ಇವತ್ತಿನ ಕಾಂಗ್ರೆಸ್ ಸರ್ಕಾರ ನೀರು ಕೊಡುವುದರಲ್ಲಿಯೂ ರಾಜಕಾರಣ ಮಾಡುತ್ತಿದ್ದಾರೆ. ಅಧಿಕಾರ ಶಾಸ್ವತ ಅಲ್ಲ. ಕಳಕಪ್ಪ ಬಂಡಿ ಚುನಾವಣೆಯಲ್ಲಿ ಸೋತಿರಬಹುದು.ಆದರೆ, ಅವರು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದರು.

ದೇಶದಲ್ಲಿ ಪ್ರಧಾನಿ ಮೋದಿ ಪರ ಸುನಾಮಿ ಇದ್ದು ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಬಸವರಾಜ ಬೊಮ್ಮಾಯಿ ಸಮರ್ಥ ಮುಖ್ಯಮಂತ್ರಿ ಅಲ್ಲ ಅಂತ ಆರೋಪ ಮಾಡಿದ್ದಾರೆ. ನಾನು ರಾಜ್ಯಕ್ಕೆ ಏನು ಮಾಡಿದ್ದೇನೆ ಎಂದು ಎಲ್ಲರಿಗೂ ಗೊತ್ತಿದೆ.ರೋಣ ನರೇಗಲ್ ಕುಡಿಯುವ ನೀರಿನ ಯೋಜನೆಯನ್ನು ಕಳಕಪ್ಪ ಬಂಡಿಯವರು ಶಾಸಕರಾದಾಗ ಆರಂಭ ಮಾಡಿದ್ದೇವು. 2013 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಯೋಜನೆ ಸಂಪೂರ್ಣ ಸ್ಥಗಿತಗೊಳಿಸಿದರು. ಕುಡಿಯುವ ನೀರು ಕೊಡುವುದು ನಮ್ಮ ಕರ್ತವ್ಯವೂ ಹೌದು, ಪುಣ್ಯದ ಕೆಲಸವೂ ಹೌದು. ನಾನು ಸಿಎಂ ಆದ ಮೇಲೆ ಕುಡಿಯುವ ನೀರಿನ ಯೋಜನೆಜಾರಿ ಮಾಡಿದೆ. ಮತ್ತೊಮ್ಮೆ ಈ ಜಿಲ್ಲೆಯ ಸೇವೆ ಮಾಡುವ ಅವಕಾಶವನ್ನು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ‌ ಅವರು ಬಿಜೆಪಿ ನನಗೆ ಅವಕಾಶ ನೀಡಿದ್ದಾರೆ. ಆದ್ದರಿಂದ ತಾವು ನನಗೆ ಹೆಚ್ಚಿಮ ಮತವನ್ನು ನೀಡುವ ಮೂಲಕ ನಿಮ್ಮ ಸೇವೆಗೆ ಅವಕಾಶ ನೀಡಿ ಎಂದರು.‌

ಮಾಜಿ‌ಸಚಿವರ ಕಳಕಪ್ಪ ಬಂಡಿ, ರೋಣ ಮಂಡಲ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಕಡಗದ, ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಜಿಲ್ಲಾ ಜೆಡಿಸ್ ಅಧ್ಯಕ್ಷರಾದ ಮುಕ್ತಂಸಾಬ ಮುಧೋಳ ಅವರು ಮತ್ತು ಜೆಡಿಎಸ್ ಕಾರ್ಯಕರ್ತರಯ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಸನ್ಮಾನಿಸಿದರು.

ವೇದಿಕೆ‌ ಮೇಲೆ ಇಂದಿರಾ ತೇಲಿ, ರವಿ ಕರಿಗಾರ, ನಿಂಗಪ್ಪ ಕೆಂಗಾರ, ಸಜ್ಜನ ವಕೀಲರು‌ ಸೇರಿದಂತೆ ಸಾವಿರಾರೂ ಕಾರ್ಯಕರ್ತರು ಇದ್ದರು.

 

 

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ