ಲೋಕಸಭಾ ಚುನಾವಣೆ; ಗದಗ ಜಿಲ್ಲೆಯಾದ್ಯಂತ ಬಿರುಸಿನ ಮತದಾನ

ವರದಿ‌: ಎಸ್.ಎಂ. ಆರಿ

ಕ್ರಾಂತಿ ವಾಣಿ ವಾರ್ತೆ

ಗದಗ : ಲೋಕಸಭಾ ಚುನಾವಣೆಯ ಮತದಾನವು ಜಿಲ್ಲೆಯಾದ್ಯಂತ ಮಂಗಳವಾರ ಶಾಂತಿಯುತ ಹಾಗೂ ಬಿರುಸಿನಿಂದ ನಡೆಯಿತು.
ಬೆಳಗ್ಗೆ 9 ಗಂಟೆ ವೇಳೆಗೆ ಶೇ 8.7 ರಷ್ಟು, ಬೆಳಗ್ಗೆ 11 ಗಂಟೆ ವೇಳೆಗೆ ಶೇ 23.37 ರಷ್ಟು, ಮಧ್ಯಾಹ್ನ 1 ಗಂಟೆ ವೇಳೆಗೆ ಶೇ 41.57 ರಷ್ಟು, ಮಧ್ಯಾಹ್ನ 3 ಗಂಟೆ ವೇಳೆಗೆ ಶೇ 55.60 ರಷ್ಟು , ಹಾಗೆಯೇ ಸಂಜೆ 5 ಗಂಟೆ ವೇಳೆಗೆ 67.47 ರಷ್ಟು ಮತದಾನವಾಗಿತ್ತು.
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ಒಟ್ಟು 961 ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹ ಹಾಗೂ ಸಂಭ್ರಮದಿಂದ ಮತದಾನದ ಹಬ್ಬದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬೆಳಗಿನ ವೇಳೆಯಲ್ಲಿ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮತಹಕ್ಕು ಚಲಾಯಿಸಿದ್ದು ಕಂಡುಬಂದಿತು.
ಮತದಾರರು ಮತಹಕ್ಕು ಚಲಾಯಿಸಿ ಮತಗಟ್ಟೆಯಿಂದ ಹೊರಬರುತ್ತಿದ್ದ ದೃಶ್ಯವು ಮತದಾನದ ಹುಮ್ಮಸ್ಸನ್ನು ಹೆಚ್ಚಿಸಿತ್ತು. ಪ್ರಥಮ ಬಾರಿಗೆ ಮತಹಕ್ಕು ಚಲಾಯಿಸಿದ ಯುವ ಮತದಾರರು ಸಂತಸದಿಂದ ಮತದಾನ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ಗದಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್.ಕೆ.ಪಾಟೀಲ ಅವರು ಹುಲಕೋಟಿಯ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಕೇಂದ್ರ ಶಾಲೆಯಲ್ಲಿ ಕುಟುಂಬ ಸಮೇತರಾಗಿ ಮತಹಕ್ಕು ಚಲಾಯಿಸಿದ್ದು ವಿಶೇಷವಾಗಿತ್ತು.
ಬಳಿಕ ಮಾತನಾಡಿದ ಸಚಿವರು ಪ್ರಜಾಪ್ರಭುತ್ವ ಹಬ್ಬದಲ್ಲಿ 18 ವರ್ಷ ಪೂರ್ಣಗೊಂಡವರೆಲ್ಲರೂ ಮತಹಕ್ಕು ಚಲಾಯಿಸಬೇಕು. ಇದರಿಂದ ಪ್ರಜಾಪ್ರಭುತ್ವವನ್ನು ಬಲಪಡಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮುಳಗುಂದ ನಾಕಾ ಬಳಿಯ ನೀರಾವರಿ ಇಲಾಖೆ ಕಚೇರಿಯ ಮತಗಟ್ಟೆ ಸಂಖ್ಯೆ 124 ರಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಅವರು ಮತ ಚಲಾಯಿಸಿ ಮತದಾನದ ಮಹತ್ವ ಮತ್ತು ಮೌಲ್ಯದ ಸಂದೇಶ ಸಾರಿದರು. ಈ ಸಂದರ್ಭದಲ್ಲಿ ಜಿ.ಪಂ.ಸಿಇಒ ಎಸ್.ಭರತ್ ಇದ್ದರು.
ಅಲ್ಲಿನ ಮತಗಟ್ಟೆಯಲ್ಲಿ ಬೆಳಗಿನಿಂದಲೇ ಸರತಿ ಸಾಲಿನಲ್ಲಿ ನಿಂತು ಹಿರಿಯರು, ಯುವಜನರು ಸೇರಿದಂತೆ ಎಲ್ಲರೂ ಮತದಾನ ಮಾಡಿದರು. ಅಲ್ಲಿನ ಯುವ ಮತದಾರರೊಬ್ಬರು ಪ್ರಥಮ ಬಾರಿಗೆ ಮತದಾನ ಮಾಡಿ ತುಂಬ ಸಂತಸ ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಲಕ್ಷ್ಮೇಶ್ವರ ಮತಗಟ್ಟೆಗಳಲ್ಲಿ ಅರ್ಹರೆಲ್ಲರೂ ಉತ್ಸಾಹದಿಂದ ಮತ ಹಕ್ಕು ಚಲಾಯಿಸಿದ್ದು ಕಂಡುಬಂದಿತು. ಅಲ್ಲಿನ ಸ್ಥಳೀಯ ಗ್ರಾಮಸ್ಥರು ಮಾತನಾಡಿ ಗ್ರಾಮದ ಜನರು ಮತದಾನದ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಜಿಲ್ಲೆಯಿಂದ ಹೊರಗಿರುವವರೂ ಸಹ ಊರಿಗೆ ಆಗಮಿಸಿ ಮತದಾನ ಮಾಡಿದ್ದಾರೆ ಎಂದು ವಿವರಿಸಿದರು.
ಜಿಲ್ಲೆಯ ವಿವಿಧ ಕಡೆ ಸ್ಥಾಪಿಸಲಾಗಿದ್ದ ಸಖಿ, ವಿಶೇಷ ಚೇತನರ ಸ್ನೇಹಿ ಮತಗಟ್ಟೆ, ಯುವ ಮತದಾರರ ಮತಗಟ್ಟೆ, ಸಾಂಪ್ರದಾಯಿಕ ಮತಗಟ್ಟೆ, ಥೀಮ್ ಬೇಸಡ್ ಮತಗಟ್ಟೆ ಸ್ಥಾಪಿಸಲಾಗಿತ್ತು. ಈ ಮತಗಟ್ಟೆಗಳು ಮತದಾರರ ಗಮನ ಸೆಳೆದವು.
ಜಿಲ್ಲೆಯ ನರಗುಂದ, ಗಜೇಂದ್ರಗಡ, ರೋಣ, ಶಿರಹಟ್ಟಿ, ಮುಂಡರಗಿ ಸೇರಿದಂತೆ ಹಲವು ಮತಗಟ್ಟೆಗಳಲ್ಲಿ ಮತದಾರರು ಮಧ್ಯಾಹ್ನದ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನದಲ್ಲಿ ಪಾಲ್ಗೊಂಡಿದ್ದು ಕಂಡುಬಂದಿತು. ಸುಮಾರು 70 ವರ್ಷ ಮೇಲ್ಪಟ್ಟ ಒಬ್ಬರು ಗಾಲಿ ಕುರ್ಚಿಯಿಲ್ಲಿ ಕುಟುಂಬದ ಸದಸ್ಯರೊಂದಿಗೆ ಆಗಮಿಸಿ ಮತ ಹಕ್ಕು ಚಲಾಯಿಸಿದರು. ಮತಗಟ್ಟೆಯಲ್ಲಿ ಕುಡಿಯುವ ನೀರು ಸೌಲಭ್ಯವನ್ನು ಕಲ್ಪಿಸಲಾಗಿತ್ತು.
ಗದಗ ನಗರದ ಎಸ್.ಎಂ.ಕೃಷ್ಣನಗರದ ಸರ್ಕಾರಿ ಪ್ರೌಡಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಸಖಿ ಮತಗಟ್ಟೆ, ವೀರನಾರಾಯಣ ದೇವಸ್ಥಾನದ ಬಳಿ ಸ್ಥಾಪಿಸಲಾಗಿದ್ದ ಥೀಮ್ ಬೇಸಡ್ ಮತಗಟ್ಟೆ, ಕಬಲಾಯತಕಟ್ಟಿಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಸಾಂಪ್ರದಾಯಿಕ ಮತಗಟ್ಟೆ, ಬೆಟಗೇರಿಯ ಎಪಿಎಂಸಿ ಕಚೇರಿಯ ಬಲಗಡೆ ಸ್ಥಾಪಿಸಲಾಗಿದ್ದ ವಿಶೇಷಚೇತನರ ಸ್ನೇಹಿ ಮತಗಟ್ಟೆ, ಮುಂಡರಗಿಯ ಶಿವಾಜಿನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಯುವ ಮತಗಟ್ಟೆಗಳು ಗಮನ ಸೆಳೆಯಿತು.
‘ಲೋಕಸಭಾ ಚುನಾವಣೆಯು ಮತದಾರರಲ್ಲಿ ಸಂಭ್ರಮ ಜೊತೆಗೆ ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯನ್ನು ಮತದಾರರ ಹಬ್ಬವೆಂದು ಪರಿಗಣಿಸಲಾಗಿದೆ. ಪ್ರಜಾಪ್ರಭುತ್ವದ ಆಶಯ ಸಾಕಾರವಾಗುವಲ್ಲಿ ಚುನಾವಣೆಯ ಪಾತ್ರ ಬಹು ದೊಡ್ಡದು ಎಂದು ಹಿರಿಯ ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದರು.’
ಜಿಲ್ಲೆಯ ವಿವಿಧ ಮತಗಟ್ಟೆಗಳಲ್ಲಿ ಕುಟುಂಬದವರ ಜೊತೆಗೆ ಆಗಮಿಸಿ ಸೆಲ್ಫಿ ಫೋಟೊ ತೆಗೆಸಿಕೊಂಡವರ ದೃಶ್ಯ ಕಂಡುಬಂದಿತು. ಒಟ್ಟಾರೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ಉತ್ಸಾಹದಿಂದ ಮತದಾನದಲ್ಲಿ ಮತದಾರರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ