ವರದಿ; ಎನ್.ಎನ್.
ಕ್ರಾಂತಿವಾಣಿ ವಾರ್ತೆ
ಸುರಪುರ: ತಾಲೂಕಿನ ಬೇವಿನಾಳ ಎಸ್.ಎಚ್. ಗ್ರಾಮದಲ್ಲಿ ಲಿಂ. ಭೀಮಾಶಂಕರ ತಾತನವರ 99ನೇ ಪುಣ್ಯಸ್ಮರಣೆ ಹಾಗೂ ರಥೋತ್ಸವ ನಿಮಿತ್ತ ಶ್ರೀ ಬಲಭೀಮ ಭಜನಾ ಮಂಡಳಿಯಿಂದ ಅಖಂಡ ಭಜನೆ ಅದ್ಧೂರಿಯಿಂದ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗುರು ಹಿರಿಯರು, ಭಜನೆ ಸಾಕ್ಷಾತ್ ಶಿವ ಪರಮಾತ್ಮನಿಗೆ ಅತ್ಯಂತ ಪ್ರಿಯವಾದ ಸಂಗೀತ. ಭಜನೆಯಲ್ಲಿ ಜೀವನದ ಸಾರ ಅಡಕವಾಗಿದೆ. ಜೀವನ ಏರಿಳಿತಗಳನ್ನು ಭಜನಾ ಪದಗಳಲ್ಲಿ ಕಾಣಬಹುದು. ಅಖಂಡ ಭಜನೆ ಯಲ್ಲಿ ಪಾಲ್ಗೊಂಡರೆ ಕೈಲಾಸಕ್ಕೆ ದಾರಿಯಾಗುತ್ತದೆ ಎಂದು ತಿಳಿಸಿದರು.
ಸೋಮವಾರ ಬೆಳಗ್ಗೆ ಭಜನೆ ಮುಕ್ತಾಯ ನಂತರ ಗಂಗಸ್ಥಳ ಮುಂಜಾನೆ 8 ಗಂಟೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪುರವಂತಿಗೆ, ಕಳಸಾರೋಹಣ ಮತ್ತು ಪ್ರಸಾದ ವಿತರಣೆ, ಸಂಜೆ 6 ಗಂಟೆಗೆ ರಥೋತ್ಸವ ಸಂಭ್ರಮದಿಂದ ನೆರವೇರಿತು. ಬಳಿಕ ಶ್ರೀ ಷ.ಬ್ರ.ತೋಟೇಂದ್ರ ಶಿವಾಚಾರ್ಯರು , ಶ್ರೀ ಪೂಜ್ಯ ಭೀಮಯ್ಯ ಮುತ್ಯಾ ಬೇವಿನಾಳ ಧರ್ಮಸಭೆಯ ಸಾನ್ನಿಧ್ಯ ವಹಿಸಿದ್ದರು.
ಭಜನಾ ಕಾರ್ಯಕ್ರಮವನ್ನು ಶಿವಶರಣಯ್ಯ ಬಳ್ಳೊಂಡಗಿ ಮಠ, ಮೋಹನ್ ರಾವ್ ಮಾಳದಕರ, ಜಗದೀಶ್ ಮಾನು, ಶರಣಪ್ಪ ಕಮ್ಮಾರ್ ದಾಸವಾಣಿ ಪ್ರಮುಖರು, ಶರಣಬಸವ ಕೊಂಗಂಡಿ, ಸೂಗಮ್ಮ ಕೊಂಗಂಡಿ, ಗುರುನಾಥ ರೆಡ್ಡಿ ಶೀಲವಂತ್, ಮಹಾಂತೇಶ್ ಶಾಪುರ್ಕರ್ ಮತ್ತು ಬೇವಿನಾಳ ಬಲಭೀಮೇಶ್ವರ ಭಜನಾ ಮಂಡಳಿ ಹಾಗೂ ಸುತ್ತಮುತ್ತಲ ಗ್ರಾಮದ ಭಜನಾ ಮಂಡಳಿಗಳು ಭಜನಾ ಸೇವೆಯನ್ನು ನಡೆಸಿಕೊಟ್ಟರು..